ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾವರೆಕೊಪ್ಪ ಹುಲಿ–ಸಿಂಹಧಾಮ | ಆದಾಯ ಸಂಗ್ರಹ: 3ನೇ ಸ್ಥಾನಕ್ಕೆ ಏರಿಕೆ

ತ್ಯಾವರೆಕೊಪ್ಪ ಹುಲಿ–ಸಿಂಹಧಾಮ ಪ್ರವಾಸಿಗರಿಂದ ಭರ್ಜರಿ ಸ್ಪಂದನೆ
Published 9 ಜನವರಿ 2024, 6:43 IST
Last Updated 9 ಜನವರಿ 2024, 6:43 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ, ಪ್ರವಾಸಿಗರ ಭೇಟಿ ಹಾಗೂ ಆದಾಯ ಸಂಗ್ರಹದಲ್ಲಿ ಬನ್ನೇರುಘಟ್ಟ ಹಾಗೂ ಮೈಸೂರು ಮೃಗಾಲಯದ ನಂತರ ಮೂರನೇ ಸ್ಥಾನಕ್ಕೆ ಏರಿದೆ. ಇಲ್ಲಿಯವರೆಗೂ ಮೈಸೂರಿನ ಮೃಗಾಲಯಕ್ಕೆ ಅಂಟಿಕೊಂಡಿರುವ ಕಾರಂಜಿ ಕೆರೆಯ ವೀಕ್ಷಣಾ ಸ್ಥಳ ಮೂರನೇ ಸ್ಥಾನದಲ್ಲಿತ್ತು.

ಕೋವಿಡ್ ಅವಧಿಯಲ್ಲಿ ಬಹುತೇಕ ಮುಚ್ಚುವ ಸ್ಥಿತಿಗೆ ಬಂದಿದ್ದ ತ್ಯಾವರೆಕೊಪ್ಪ ಮೃಗಾಲಯಕ್ಕೆ ಎರಡು ವರ್ಷಗಳಿಂದ ಪ್ರವಾಸಿಗರಿಂದ ಭರ್ಜರಿ ಸ್ಪಂದನೆ ದೊರೆಯುತ್ತಿದೆ. ಹೀಗಾಗಿ ದಾಖಲೆ ಪ್ರಮಾಣದ ಆದಾಯ ಗಳಿಸಿದೆ. ಇದರಲ್ಲಿ ವಿದೇಶಿ ಪ್ರವಾಸಿಗರು ಇರುವುದು ವಿಶೇಷ.

‘ತ್ಯಾವರೆಕೊಪ್ಪ ಹುಲಿ–ಸಿಂಹಧಾಮದ ಆದಾಯ ಡಿಸೆಂಬರ್ 31ಕ್ಕೆ ₹4.20 ಕೋಟಿ ದಾಟಿದೆ. ಕಳೆದ ವರ್ಷ ಮಾರ್ಚ್ ಅಂತ್ಯಕ್ಕೆ ₹4.20 ಕೋಟಿ ಆದಾಯ ಸಂಗ್ರಹವಾಗಿತ್ತು. ಮೂರು ತಿಂಗಳು ಮೊದಲೇ ಕಳೆದ ವರ್ಷದ ಗುರಿ ತಲುಪಿದೆ. ಈ ಬಾರಿ ಮಾರ್ಚ್ ಅಂತ್ಯದ ವೇಳೆಗೆ ಆದಾಯ ₹5.5 ಕೋಟಿ ತಲುಪುವ ನಿರೀಕ್ಷೆ ಹೊಂದಲಾಗಿದೆ’ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದಚಂದ್ರ ಹೇಳಿದರು.

ಮೃಗಾಲಯಕ್ಕೆ ಡಿಸೆಂಬರ್ ಅಂತ್ಯದ ವೇಳೆಗೆ 2.71 ಲಕ್ಷ ಜನರು ಭೇಟಿ ಕೊಟ್ಟಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 2.50 ಲಕ್ಷ ಜನರು ಭೇಟಿ ನೀಡಿದ್ದರು. ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ₹59 ಲಕ್ಷ ಆದಾಯ ಸಂಗ್ರಹವಾಗಿತ್ತು. ಈ ಬಾರಿ ಅದು ₹67 ಲಕ್ಷಕ್ಕೆ ಏರಿಕೆಯಾಗಿದೆ.

‘ಮೈಸೂರು ಮೃಗಾಲಯ ₹33 ಕೋಟಿ ಆದಾಯ ಗಳಿಸಿದೆ. 150 ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ಮೃಗಾಲಯಕ್ಕೆ ಕೋಟ್ಯಂತರ ಜನ ಭೇಟಿ ಕೊಡುತ್ತಾರೆ. ಹೀಗಾಗಿ ಸಹಜವಾಗಿಯೇ ಆದಾಯ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆದಾಯದಲ್ಲಿ ₹53 ಕೋಟಿ ಇದ್ದು, ಆದಾಯ ಸಂಗ್ರಹದಲ್ಲಿ ಮೊದಲ ಸ್ಥಾನದಲ್ಲಿದೆ. ಮೈಸೂರು ಮೃಗಾಲಯ ಎರಡನೇ ಸ್ಥಾನದಲ್ಲಿದೆ. ಕಾರಂಜಿ ಕೆರೆ ತಾಣದ ಆದಾಯ ₹3 ಕೋಟಿ ಇದ್ದು, ಈ ಹಿಂದೆ ನಾಲ್ಕನೇ ಸ್ಥಾನದಲ್ಲಿದ್ದ ಶಿವಮೊಗ್ಗ ಮೂರನೇ ಸ್ಥಾನಕ್ಕೆ ಬಂದಿದೆ’ ಎಂದು ಮುಕುಂದಚಂದ್ರ ವಿವರಿಸಿದರು.

ನಂತರದ ಸ್ಥಾನದಲ್ಲಿ ಹಂಪಿ, ಗದುಗಿನ ಬಿಂಕದಕಟ್ಟೆ, ಚಿತ್ರದುರ್ಗ ಹಾಗೂ ದಾವಣಗೆರೆಯ ಆನಗೋಡು ಕಿರು ಮೃಗಾಲಯ ಇವೆ.

ಕೋವಿಡ್ ಸಂದರ್ಭದಲ್ಲಿ ಸಂಪೂರ್ಣ ನೆಲಕಚ್ಚಿತ್ತು. ₹ 1.5 ಕೋಟಿ ಮಾತ್ರ ಆಗಿ ಮುಚ್ಚುವ ಹಂತ ತಲುಪಿತ್ತು ಎನ್ನುವ ಮುಕುಂದ್ರಚಂದ್ರ, ‘ಜನದಟ್ಟಣೆ ತಪ್ಪಿಸಲು ಶೀಘ್ರ ಹೊಸ ಟಿಕೆಟಿಂಗ್ ಪದ್ಧತಿ ಶೀಘ್ರ ಜಾರಿಗೆ ತರಲಿದ್ದೇವೆ. ಜೊತೆಗೆ ಹುಲಿ–ಸಿಂಹಧಾಮಕ್ಕೆ ರಸ್ತೆಯಂತಹ ಮೂಲಸೌಕರ್ಯ ನಿರ್ಮಾಣ ಕೈಗೆತ್ತಿಕೊಂಡಿದ್ದೇವೆ’ ಎಂದರು.

ಶಿವಮೊಗ್ಗ ಮೃಗಾಲಯದ ಬೆಳವಣಿಗೆ ವೇಗ ಬಹಳ ಬದಲಾಗುತ್ತಿದೆ. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರದ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ.
– ಮುಕುಂದಚಂದ್ರ ಕಾರ್ಯನಿರ್ವಾಹಕ ನಿರ್ದೇಶಕ ತ್ಯಾವರೆಕೊಪ್ಪ ಹುಲಿ–ಸಿಂಹಧಾಮ
ತ್ಯಾವರೆಕೊಪ್ಪಕ್ಕೆ ಬರಲಿದೆ ಅಸ್ಸಾಮಿನ ಮಂಗ
ಪ್ರಾಣಿಗಳ ವಿನಿಮಯ ಯೋಜನೆಯಡಿ ಅಸ್ಸಾಮ್‌ನ ನಂದನ್ ಕಾನನ್ ಮೃಗಾಲಯಕ್ಕೆ ಚಿರತೆಗಳನ್ನು ಕೊಟ್ಟು ಅಲ್ಲಿಂದ ತ್ಯಾವರೆಕೊಪ್ಪಕ್ಕೆ ಅಸ್ಸಾಮಿ ಮಂಗಗಳ (ಅಸ್ಸಾಮಿಸ್ ಮೆಕಾಕ್) ತರಲು ಸಿದ್ಧತೆ ನಡೆದಿದೆ. ಈಗಾಗಲೇ ಮಂಗಗಳ ಇಡಲು ಪಂಜರ ಕೂಡ ಸಿದ್ಧವಾಗಿವೆ. ಸದ್ಯ ತ್ಯಾವರೆಕೊಪ್ಪ ಮೃಗಾಲಯದಲ್ಲಿ 17 ಚಿರತೆಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT