ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಪ್ರಕರಣ; CBI ತನಿಖೆಗೆ ವಿಜಯೇಂದ್ರ ಒತ್ತಾಯ

Published 30 ಮೇ 2024, 9:12 IST
Last Updated 30 ಮೇ 2024, 9:12 IST
ಅಕ್ಷರ ಗಾತ್ರ

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು. ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಲು ಒಂದು ವಾರದ ಗಡುವು ನೀಡಿದರು.

ವಾಲ್ಮೀಕಿ ನಿಗಮದ ನೂರಾರು ಕೋಟಿ ಹಣ ಲೋಕಸಭಾ ಚುನಾವಣೆಗೆ ಮುನ್ನ ಅಕ್ರಮವಾಗಿ ತೆಲಂಗಾಣಕ್ಕೆ ವರ್ಗಾವಣೆ ಆಗಿದೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕ ಎಟಿಎಂ ರೀತಿ ಬಳಕೆಯಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಇದೇ ಸಾಕ್ಷಿಯಾಗಿದೆ. ಆಗೆಲ್ಲ ಸಿಎಂ ಹಾಗೂ ಡಿಸಿಎಂ ಸಾಕ್ಷ್ಯ ಕೇಳುತ್ತಿದ್ದರು. ಈಗ ಸಾಕ್ಷ್ಯ ದೊರೆತಿದೆ ಎಂದು ಹೇಳಿದರು.

ಮೇಲ್ನೋಟಕ್ಕೆ ಕಾಣುವಂತೆ ಇದು ಬರೀ ನಿಗಮದ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣ ಅಲ್ಲ. ಇದರ ಹಿಂದೆ ದೊಡ್ಡ ದೊಡ್ಡ ಕುಳಗಳ ಕೈವಾಡ ಇದೆ. ಅದನ್ನು ಬರೀ ಸಿಐಡಿ ಇಲ್ಲವೇ ಎಸ್‌ಐಟಿ ತನಿಖೆಯಿಂದ ಹೊರತರಲು ಸಾಧ್ಯವಿಲ್ಲ. ಹೀಗಾಗಿ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದೇವೆ ಎಂದರು.

ಇಲಾಖೆಯ ಸಚಿವರ ಗಮನಕ್ಕೆ ಬಾರದೇ ನಿಗಮದಲ್ಲಿ ಇಷ್ಟೊಂದು ದೊಡ್ಡ ಅವ್ಯವಹಾರ ನಡೆಯಲು ಸಾಧ್ಯವೇ ಇಲ್ಲ. ಇದರ ನೈತಿಕ ಹೊಣೆ ಹೊತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ ರಾಜೀನಾಮೆ ಕೇಳಿ ಪಡೆಯಲಿ. ಇಲ್ಲದಿದ್ದರೆ ಬಿಜೆಪಿ ರಾಜ್ಯಾದ್ಯಂತ ಬೃಹತ್ ಹೋರಾಟ ಸಂಘಟಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಕುಟುಂಬ ಸಂಕಷ್ಟದಲ್ಲಿದೆ. ಅವರಿಗೆ ಸರ್ಕಾರ ₹ 25 ಲಕ್ಷ ಪರಿಹಾರ ನೀಡಲಿ ಎಂದು ಒತ್ತಾಯಿಸಿದ ವಿಜಯೇಂದ್ರ, ಸರ್ಕಾರ ಭಂಡತನ ಬಿಟ್ಟು ಪಾರದರ್ಶಕ ತನಿಖೆಗೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪುನರುಚ್ಚರಿಸಿದರು.

ಈ ಹಿಂದೆ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ಸರ್ಕಾರ ಸಿಬಿಐಗೆ ತನಿಖೆಗೆ ವಹಿಸಿರಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಆಗ ಕಾಂಗ್ರೆಸ್‌ನವರು ಸಿಬಿಐ ತನಿಖೆಗೆ ಆಗ್ರಹಿಸಿರಲಿಲ್ಲ. ಅದು ಇಷ್ಟೇ ಗಂಭೀರ ಪ್ರಕರಣವಾಗಿದ್ದರಿಂದ ಸ್ವತಃ ಸರ್ಕಾರವೇ ತನಿಖೆಗೆ ಆದೇಶಿಸಿತ್ತು. ಅದರ ವರದಿ ಕೂಡ ಬಂದಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT