ತೀರ್ಥಹಳ್ಳಿ: ಗುಡ್ಡೇಕೊಪ್ಪ ಗ್ರಾಮದಲ್ಲಿ ಕೃಷಿಕ ವಿಶ್ವನಾಥ ಅವರಿಗೆ ಸೇರಿದ್ದ ಜಮೀನಿನಲ್ಲಿ ಅರ್ಧ ಮಣ್ಣಿನಲ್ಲಿ ಹೂತು ಹೋಗಿದ್ದ ವಿಜಯನಗರ ಕಾಲದ ಅಪೂರ್ವ ದಾನ ಶಾಸನ ಪತ್ತೆಯಾಗಿದೆ. ಗ್ರಾಮಸ್ಥರು ಚೌಡಿ ಕಲ್ಲು ಎಂದು ತಿಳಿದು ಈ ಶಾಸನಕ್ಕೆ ಪೂಜೆ ಸಲ್ಲಿಸುತ್ತಿದ್ದರು.
14, 15ನೇ ಶತಮಾನದ ಶಾಸನ ಇದಾಗಿದ್ದು 47 ಸಾಲುಗಳ ಅಕ್ಷರಗಳು ಇಲ್ಲಿ ಕಾಣಬಹುದು. ಕೆಲವು ಸಾಲುಗಳಲ್ಲಿ ಅಕ್ಷರಗಳು ಅಲ್ಲಲ್ಲಿ ಅಳಿಸಿ ಹೋಗಿದ್ದು ಭೂಮಿ ದಾನಕೊಟ್ಟ ಮಾಹಿತಿಗಳು ಉಲ್ಲೇಖವಾಗಿದೆ. ಶಾಸನ ಯಾವ ರಾಜರ ಕಾಲದಲ್ಲಿ ಬರೆಯಲಾಗಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಎಪಿಗ್ರಾಫಿಯಾ ಕರ್ನಾಟಕ ಗ್ರಂಥದ ಸಂಪುಟ 13ರ ಪುಟ 416 ರಲ್ಲಿ ದಾಖಲಾಗಿರುವಂತೆ ಒಂದಿಷ್ಟು ವಿವರಗಳು ಶಾಸನದಲ್ಲಿ ಕಾಣಬಹುದಾಗಿದೆ.
‘ತಲೆಊರ ಬ್ರಹ್ಮಮಸಿಯ ಬ್ರಾಹ್ಮರ ಅಗ್ರಹಾರ.. ತೆಂಕಲು ನಟ್ಟ ವಾಮನ ಮುದ್ರೆಯ ಕಲು ಯಿಂತೀ ಚತುಸ್ಸೀಮೆಯ ದಲೆಊರ ಗ್ರಾ.. ಮಳಲಿಯಗ್ರಾಮದ ಚತುಸ್ಸೀಮೆ.. ಯ ವಿವರ ಮೂಡಲು ಅಖಂಡಬ್ರಹ್ಮೇಶ್ವರದೇವರ ಅಮ್ರುತಪಡಿಗೆ ಕೊಟ್ಟು ಯಿಹ ಅಗಸಡಿಯ ಗ್ರಾಮದ ಸೀಮೆಯಲು ಮಳಲಿಯಗ್ರಾಮಕೆ..’ ಹೀಗೆಂದು ಶಿಲಾಶಾಸನದಲ್ಲಿ ಅಕ್ಷರಗಳನ್ನು ಗುರುತಿಸಲಾಗಿದೆ.
ಸಂಶೋಧಕ ಎಲ್.ಎಸ್. ರಾಘವೇಂದ್ರ ಮತ್ತು ಪತ್ರಕರ್ತ ಜಿ.ಆರ್. ಸತ್ಯನಾರಾಯಣ ಶಾಸನದ ವಿವರಗಳನ್ನು ಸಂಗ್ರಹಿಸಿದ್ದಾರೆ. ಸ್ಥಳದಲ್ಲಿ ವಾಮನಮುದ್ರೆ ಕಲ್ಲು ದೊರಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.