ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಎಸ್ಎಲ್ ಕಾರ್ಮಿಕರ ಮೊಗದಲ್ಲಿ ಮಂದಹಾಸ

2020ರ ಮಧ್ಯ ಭಾಗದಿಂದ ಕಾರ್ಖಾನೆಯ ಉತ್ಪಾದನೆ, ಲಾಭದಲ್ಲೂ ಮುನ್ನಡೆ
Last Updated 15 ಆಗಸ್ಟ್ 2021, 1:04 IST
ಅಕ್ಷರ ಗಾತ್ರ

ಭದ್ರಾವತಿ: ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರು ವರ್ಷದ ಹಿಂದೆ ಎದುರಿಸುತ್ತಿದ್ದ ಕೆಲಸದ ಕೊರತೆ ಸದ್ಯ ದೂರವಾಗಿದೆ. ಉತ್ಪಾದನೆಯಲ್ಲಿನ ಹೆಚ್ಚಳದ ಪರಿಣಾಮ ಕಾರ್ಖಾನೆಯೂ ಲಾಭದ ಹಾದಿಯಲ್ಲಿ ಮುನ್ನಡೆದಿದೆ.

ಒಂದೂವರೆ ಸಾವಿರ ಗುತ್ತಿಗೆ ಕಾರ್ಮಿಕರ ಬದುಕಿನ ಆಸರೆಯ ಕಾರ್ಖಾನೆಯಲ್ಲಿ 2019–20ನೇ ಸಾಲಿನಲ್ಲಿ ಉತ್ಪಾದನೆ ಇಲ್ಲದೆ ಕಾರ್ಮಿಕರು ಕೆಲಸವಿಲ್ಲದೆ ಪರದಾಟ ನಡೆಸಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ಕೇಂದ್ರ ಉಕ್ಕು ಸಚಿವಾಲಯದ ಇಚ್ಛಾಶಕ್ತಿ ಪರಿಣಾಮ 2020ರ ಮಧ್ಯ ಭಾಗದಿಂದ ಕಾರ್ಖಾನೆಯ ಉತ್ಪಾದನಾ ಪ್ರಮಾಣದಲ್ಲಿ ನಿರಂತರ ಏರಿಕೆಯಾಗಿದೆ.

ಉತ್ಪಾದನೆ ಸ್ಥಗಿತ ವೇಳೆಯಲ್ಲಿ ಎಷ್ಟೋ ಜನಕ್ಕೆ ಕೆಲಸವಿಲ್ಲದೆ ತೊಂದರೆ ಎದುರಾಗಿ ಹೋರಾಟ ದಿನನಿತ್ಯದ ಕೆಲಸವಾಗಿತ್ತು. ಇದನ್ನು ಮನಗಂಡ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಉಕ್ಕು ಸಚಿವರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಎಲ್ಲರಿಗೂ 13 ದಿನಗಳ ಕೆಲಸದ ವೇತನ ಕೊಡಿಸಲು ಮಾಡಿದ ಪ್ರಯತ್ನ ಸಫಲ ಕಂಡಿತ್ತು. ಇದರ ನಡುವೆ ಗುತ್ತಿಗೆ ಅವಧಿ ಮುಗಿದ ಕಾರ್ಮಿಕರನ್ನು ಕೆಲಸದಿಂದ ತೆಗೆಯುವ ಪ್ರಯತ್ನ ನಡೆದಿತ್ತು. ಇದನ್ನು ಖಂಡಿಸಿ ಹಲವು ಪ್ರತಿಭಟನೆ ನಡೆದವು. ಅವರನ್ನು ಗುತ್ತಿಗೆ ಅವಧಿಗೆ ಮುಂದುವರಿಸಿ ಕೆಲಸ ಕೊಟ್ಟ ಉದಾಹರಣೆ ಕಾರ್ಖಾನೆ ಇತಿಹಾಸದಲ್ಲಿ ಮೊದಲೆನಿಸಿತು.

‘ಈ ಎಲ್ಲಾ ಹೋರಾಟದ ಫಲವಾಗಿ ಕಳೆದೊಂದು ವರ್ಷದಿಂದ ಉತ್ಪಾದನೆ ಹಾಗೂ ಕೆಲಸ ದಿನಗಳಲ್ಲೂ ಸಾಕಷ್ಟು ಏರಿಕೆಯಾಗಿದೆ’ ಎನ್ನುತ್ತಾರೆ ಗುತ್ತಿಗೆ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್.

‘ಇರುವ 1,500ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರಲ್ಲಿ ಶೇ 80ರಷ್ಟು ಮಂದಿಗೆ ಪೂರ್ಣ ಪ್ರಮಾಣದ ಕೆಲಸ ಸಿಕ್ಕಿದೆ. ಶೇ 20ರಷ್ಟು ಮಂದಿಗೆ 18ರಿಂದ 20 ದಿನ ಕೆಲಸ ಸಿಗುತ್ತಿದೆ. ಮುಂದಿನ ತಿಂಗಳಿಂದ ಅವರಿಗೂ ಪೂರ್ಣ ಪ್ರಮಾಣದಲ್ಲಿ ಕೆಲಸ ಸಿಗಲಿದೆ. ಈಗ ಯಾವುದೇ ಸಮಸ್ಯೆಯಿಲ್ಲ’ ಎನ್ನುತ್ತಾರೆ ಅವರು.

‘ಹಿಂದಿನ ಉಕ್ಕು ಸಚಿವರಾಗಿದ್ದ ಚೌಧರಿ ಬಿರೇಂದ್ರ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಲು ಸಂಸದ ಬಿ.ವೈ.ರಾಘವೇಂದ್ರ ಅವರು ಅನುವು ಮಾಡಿಕೊಟ್ಟ ಬೆನ್ನಲ್ಲೇ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳ ತಂಡ 2019ರ ಮಾರ್ಚ್ 5ರಂದು ನಡೆಸಿದ ಮಾತುಕತೆಯಂತೆ ಈಗ ಭಿಲಾಯ್ ಹಾಗೂ ರೂಲ್ಕೆಲಾ ಪ್ಲಾಂಟ್‌ಗಳಿಂದ ಬಿಲೆಟ್ಸ್, ಇಂಗಾಟ್ ಹಾಗೂ ಇನ್ನಿತರೆ ಕಚ್ಚಾ ಸಾಮಗ್ರಿಗಳು ಕಾರ್ಖಾನೆಗೆ ಬರುತ್ತಿವೆ. ಉತ್ಪಾದನೆ ವೇಗ ಹೆಚ್ಚಲು ಕಾರಣವಾಗಿದೆ’ ಎನ್ನುತ್ತಾರೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್.

‘ಸದ್ಯ ಕಾರ್ಖಾನೆಯ ಮೆಷಿನ್ ಷಾಪ್, ಆರ್‌ಟಿಎಸ್, ಎಚ್‌ಟಿಎಸ್ ಸೇರಿ ಇತರೆ ವಿಭಾಗಗಳ ಕೆಲಸ ನಡೆದಿದ್ದು, ಉತ್ಪಾದನೆ ಹೆಚ್ಚಳದಿಂದಾಗಿ ಗುತ್ತಿಗೆ ಕಾರ್ಮಿಕರ ಕೆಲಸದ ದಿನದಲ್ಲೂ ಏರಿಕೆಯಾಗಿದೆ’ ಎನ್ನುತ್ತಾರೆ ನೌಕರ ಶಶಿಕುಮಾರ್.

ಸದ್ಯ ಇಂಟರ್ ಪ್ಲಾಂಟ್ ಉತ್ಪಾದನೆಯ ಬೇಡಿಕೆ ಜತೆಗೆ ಸ್ವಂತ ಮಾರ್ಕೆಟಿಂಗ್ ಶಕ್ತಿಯನ್ನು ಸಹ ಕಾರ್ಖಾನೆ ಹೆಚ್ಚಿಸಿಕೊಂಡಿದೆ.

‘ಇದೇ ರೀತಿಯಲ್ಲಿ ಕೆಲಸ ಸಿಕ್ಕು ಕಾರ್ಖಾನೆ ಮುನ್ನಡೆದರೆ ಸಹಕಾರಿಯಾಗಲಿದೆ. ಸದ್ಯ ಎರಡು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಬದಲಾಗಿದೆ’ ಎನ್ನುತ್ತಾರೆ ಗುತ್ತಿಗೆ ನೌಕರ ಶ್ರೀಧರ.

‘ಕಾರ್ಖಾನೆ ಉತ್ಪಾದನೆ ಹಾಗೂ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ಮಾಡಿದ ಎರಡು ವರ್ಷಗಳ ಹಿಂದಿನ ಪ್ರಯತ್ನಕ್ಕೆ ಕಳೆದೊಂದು ವರ್ಷದಿಂದ ಚಾಲನೆ ಸಿಕ್ಕಿದೆ. ಇದು ಹೀಗೆಯೇ ಮುಂದುವರಿದಲ್ಲಿ ಉತ್ಪಾದನೆ ಹಾಗೂ ನೌಕರರ ಕೆಲಸ ದಿನಗಳಿಗೆ ತೊಂದರೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ’ ಎನ್ನುತ್ತಾರೆ ಸಂಸದ ಬಿ.ವೈ.ರಾಘವೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT