ರಿಪ್ಪನ್‌ಪೇಟೆ: ಕೇರಳದ ವಯನಾಡಿನಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಭೂ ಕುಸಿತದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಇಲ್ಲಿನ ರಾಮಕೃಷ್ಣ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ, ಕಬಡ್ಡಿ ಪಟು ಆರ್. ಶ್ರೇಯಾ ಹಾಗೂ ಆಕೆಯ ಸೋದರ ಶ್ರವಂತ್ ₹ 15,000 ದೇಣಿಗೆ ನೀಡಿದ್ದಾರೆ.
ಈಚೆಗೆ ಹೈದರಾಬಾದ್‌ನಲ್ಲಿ ನಡೆದ 14 ವರ್ಷದೊಳಗಿನ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಶ್ರೇಯಾ ಹಾಗೂ ಇದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶ್ರವಂತ್ ಅವರು ಗ್ರಾಮದ ಸವಿತಾ ಮತ್ತು ರಾಘವೇಂದ್ರ ಅವರ ಮಕ್ಕಳು.
ರಾಜ್ಯ ತಂಡ ಪ್ರತಿನಿಧಿಸಿದ್ದ ಶ್ರೇಯಾಗೆ ರಾಜ್ಯ ಸರ್ಕಾರದಿಂದ ₹ 10,000 ಕ್ರೀಡಾ ವಿದ್ಯಾರ್ಥಿವೇತನ ದೊರೆತಿತ್ತು. ಅದರೊಂದಿಗೆ ಶ್ರವಂತ್ ಕೂಡಿಟ್ಟ ₹ 5,000 ಸೇರಿಸಿ ಇಲ್ಲಿನ ನಾಡಕಚೇರಿಯಲ್ಲಿ ಭಾನುವಾರ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರ ಮೂಲಕ ವಯನಾಡ್ ಸಂತ್ರಸ್ತರ ನಿಧಿಗೆ ದೇಣಿಗೆ ನೀಡಿದರು.