ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳಿಗೆ ಹೆಚ್ಚುವರಿ 2,733 ವಿದ್ಯಾರ್ಥಿಗಳು

ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಡಿಡಿಪಿಐ ರಮೇಶ್ ಮಾಹಿತಿ
Last Updated 10 ನವೆಂಬರ್ 2020, 12:51 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಸಕ್ತ ವರ್ಷ ಸರ್ಕಾರಿ ಶಾಲೆಗಳಿಗೆ 2,733 ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಪ್ರವೇಶ ಪಡೆದಿದ್ದಾರೆ. ಶಾಲೆಗಳು ಆರಂಭವಾದರೆ ದಾಖಲಾತಿ ಮತ್ತಷ್ಟು ಹೆಚ್ಚಳವಾಗಬಹುದು ಎಂದು ಡಿಡಿಪಿಐ ರಮೇಶ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಡಿಸೆಂಬರ್‌ನಿಂದ ಪ್ರೌಢಶಾಲೆ ಆರಂಭಿಸುವ ಕುರಿತು ವಿವಿಧ ಹಂತಗಳಲ್ಲಿ ಈಗಾಗಲೇ ಚರ್ಚೆ ನಡೆದಿದೆ. ಡಿಸೆಂಬರ್‌ನಿಂದ ತರಗತಿಗಳು ಆರಂಭವಾಗುವ ಸಾಧ್ಯತೆ ಇದೆ. ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಶೇ 98ರಷ್ಟು ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದಾಖಲಾತಿಯಲ್ಲಿ ಶೇ 3ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಒಂದರಿಂದ 10ನೇ ತರಗತಿಯವರೆಗೆ 1,18,577 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ವರ್ಷ 1,21,310 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಪಠ್ಯಪುಸ್ತಕ ಪೂರ್ಣ ಪ್ರಮಾಣದಲ್ಲಿ ಸರಬರಾಜಾಗಿದೆ ಎಂದು ಮಾಹಿತಿ ನೀಡಿದರು.

ಅಕ್ಷರ ದಾಸೋಹ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಈ ಸಾಲಿನಲ್ಲಿ 108 ದಿನಗಳ ಅವಧಿಯ ಅಕ್ಕಿ ಮತ್ತು ಬೇಳೆ ನೇರವಾಗಿ ವಿತರಿಸಲಾಗುವುದು. ಪ್ರಸ್ತುತ 53 ದಿನಗಳ ಅವಧಿಯ ಪಡಿತರ ಸರಬರಾಜಾಗಿದೆ. ಒಬ್ಬ ವಿದ್ಯಾರ್ಥಿಗೆ ಒಂದು ದಿನಕ್ಕೆ 100 ಗ್ರಾಂ ಅಕ್ಕಿ ಮತ್ತು 37 ಗ್ರಾಂ ಬೇಳೆಯಂತೆ ಒಂದೇ ಕಂತಿನಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಅಧ್ಯಕ್ಷೆ ಜ್ಯೋತಿ ಕುಮಾರ್ ವಿವರ ನೀಡಿದರು.

ಟ್ಯಾಬ್ ವಿತರಣೆ:

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಟ್ಯಾಬ್ ವಿತರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ 4,800 ಟ್ಯಾಬ್‌ಗಳನ್ನು ವಿತರಿಸಲಾಗುವುದು. ಪಠ್ಯ ಪೂರ್ಣಗೊಂಡ ಬಳಿಕ ಶಾಲೆಗೆ ಹಿಂತಿರುಗಿಸಬೇಕು. ಜಿಲ್ಲೆಯಲ್ಲಿ ಶೇ 12ರಿಂದ 13ರಷ್ಟು ವಿದ್ಯಾರ್ಥಿಗಳ ಮನೆಯಲ್ಲಿ ಟಿ.ವಿಗಳು ಇಲ್ಲದಿರುವುದು ಸಮೀಕ್ಷೆ ಮೂಲಕ ತಿಳಿದಿದೆ ಎಂದರು.

ಬೆಳೆ ವಿಮೆ ಮಂಜೂರು: 2019ನೇ ಮುಂಗಾರು ಹಂಗಾಮಿಗೆ ಜಿಲ್ಲೆಯ 8,950 ರೈತರಿಗೆ ಬೆಳೆವಿಮೆ ಮಂಜೂರಾಗಿದೆ. ₹ 8.56 ಕೋಟಿ ವಾರದ ಒಳಗೆ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 3,796 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಪರಿಹಾರ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ಕುಮಾರ್ ವಿವರ ನೀಡಿದರು.

ಪ್ರಸಕ್ತ ಮುಂಗಾರಿನಲ್ಲಿ 234 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಕಳೆದ ಸಾಲಿನಲ್ಲಿ 21,414 ರೈತರಿಗೆ ₹ 25.94 ಕೋಟಿ ಬೆಳೆ ವಿಮೆ ಮೊತ್ತ ಪಾವತಿಸಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ರಾಮಚಂದ್ರ ಮಡಿವಾಳ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀರಭದ್ರಪ್ಪ ಪೂಜಾರ್, ಸುರೇಶ್ ಸ್ವಾಮಿರಾವ್, ರೇಣುಕಾ ಹನುಮಂತಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT