ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಚೆ ಜತೆಗೆ ಅಲೆಮಾರಿಗಳ ಜೀವನ

ಸಾಂಕ್ರಾಮಿಕ ರೋಗಗಳ ಭೀತಿ; ಪರಿಹಾರಕ್ಕೆ ಒತ್ತಾಯ
Last Updated 2 ಮಾರ್ಚ್ 2020, 11:47 IST
ಅಕ್ಷರ ಗಾತ್ರ

ಕೊಲ್ಹಾರ: ಪಟ್ಟಣದ ವಾರ್ಡ್‌ ನಂ.14ರ ವ್ಯಾಪ್ತಿಯ ಸ್ಲಂ ನಿವಾಸಿಗಳು ಮೂಲಸೌಕರ್ಯ ಕೊರತೆಯಿಂದ ಚರಂಡಿ ನೀರಿನ ಮಧ್ಯೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲೇ ಜೀವನ ನಡೆಸುವಂತಾಗಿದೆ.

ಹಳೆ ಕೊಲ್ಹಾರದಿಂದ ಹೊಸ ಕೊಲ್ಹಾರ ಪಟ್ಟಣಕ್ಕೆ ಪುನರ್ವಸತಿಗೊಂಡ ದಿನದಿಂದಲೂವಾರ್ಡ್‌ ನಂ.14ರ ವ್ಯಾಪ್ತಿಯ ನಿವಾಸಿಗಳ ಬವಣೆ ತಪ್ಪಿಲ್ಲ. ಚರಂಡಿ ನೀರು ಸಂಗ್ರಹವಾಗಿ ಕೆರೆಯಂತಾಗಿದ್ದು, ಅದರ ಪಕ್ಕದಲ್ಲೇ ಹಂದಿ ಜೋಗಿ ಸಮುದಾಯದ 30 ರಿಂದ 40 ಕುಟುಂಬಗಳ 250ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಜಾತಿ ಪ್ರಮಾಣ ಪತ್ರ, ಮೂಲ ಸೌಕರ್ಯ ಹಾಗೂ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

‘ನಾವು ಬದುಕು ಸಾಗಿಸಬೇಕೋ ಅಥವಾ ಸಾಯಬೇಕೋ ತಿಳಿಯುತ್ತಿಲ್ಲ. ಚರಂಡಿ ನೀರು ಸುಮಾರು ಎರಡು ಎಕರೆಯಷ್ಟು ಜಾಗದಲ್ಲಿ ಸಂಗ್ರಹವಾಗಿ ಇಡೀ ಕಾಲೊನಿ ಗಬ್ಬೆದ್ದು ನಾರುತ್ತಿದೆ. ಅಡುಗೆ ಮಾಡುವುದು, ಊಟ, ನಿದ್ದೆ ಇಡೀ ಜೀವನ ಇದರಲ್ಲೇ ನಡೆಯುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಮಾ.3 ರಂದು ತಹಶೀಲ್ದಾರ್‌ ಕಚೇರಿ ಎದುರು ಸ್ಲಂ ನಿವಾಸಿಗಳ ಸಮಸ್ಯೆಗಳಿಗೆ ಮುಕ್ತಿ ಸಿಗುವವರೆಗೂ ಅನಿರ್ದಿಷ್ಟಾವಧಿಧರಣಿ ನಡೆಸಲು ನಿರ್ಧರಿಸಲಾಗಿದೆ’ ಎಂದು ಕಾಲೊನಿ ಮಹಿಳೆ ಗಂಗವ್ವ ಗೊಲ್ಲರ, ಯಲ್ಲವ್ವ ಗೊಲ್ಲರ ಹೇಳಿದರು.

‘ಸ್ಲಂ ನಿವಾಸಿಗಳು ನಿತ್ಯ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿಜೀವನ ನಡೆಸಬೇಕಿದೆ. ನಾವುಗಳು ಪರಿಶಿಷ್ಟ ಜಾತಿಯ ಹಂದಿಜೋಗಿ ಸಮುದಾಯದ ಅನಕ್ಷರಸ್ಥ ಅಲೆಮಾರಿ ಜನಾಂಗದವರಾಗಿದ್ದು, ನಮ್ಮನ್ನು ಸಾಮಾನ್ಯ ವರ್ಗದ ಹನುಮ ಗೊಲ್ಲರ ಜನಾಂಗಕ್ಕೆ ಸೇರಿಸಲಾಗಿದೆ. ಇದರಿಂದ ನಮಗೆ ಸರ್ಕಾರದಿಂದ ವಸತಿ, ಶಿಕ್ಷಣ, ಉದ್ಯೋಗ ಮೀಸಲಾತಿ ಸಿಗದೆ ಕಷ್ಟದ ಜೀವನ ನಡೆಸುತ್ತಿದ್ದೇವೆ’ ಎಂದು ಲಕ್ಷ್ಮಣ ಗೊಲ್ಲರ ತಿಳಿಸಿದರು.

‘ಪಟ್ಟಣ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ಬಂದರೂ, ನಾನು ಬಿಜೆಪಿ ಸದಸ್ಯನಾಗಿರುವ ಕಾರಣ ನನ್ನ ವಾರ್ಡ್ ಅಭಿವೃದ್ಧಿಗೆ ಅನುದಾನ ನೀಡಲು ನಿರ್ಲಕ್ಷಿಸಲಾಗಿದೆ. ಬೇಸತ್ತು ನಿವಾಸಿಗಳ ಅನಿರ್ದಿಷ್ಟಾವಧಿಧರಣಿಯಲ್ಲಿ ನಾನೂ ಪಾಲ್ಗೊಳ್ಳುತ್ತಿದ್ದೇನೆ’ ಎಂದು ವಾರ್ಡ್‌ ನಂ.14ರ ಸದಸ್ಯ ವಿರೂಪಾಕ್ಷಿ ಕೊಲಕಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT