ಬುಧವಾರ, ಜನವರಿ 29, 2020
30 °C
ಜನರಿಗೆ ಸಂಕಷ್ಟ; ದೇವಾಲಯಗಳ ಆದಾಯ ವೃದ್ಧಿ!

ಆರ್ಥಿಕ ಹಿಂಜರಿತ: ಬೆಲೆ ಏರಿಕೆ ಮಧ್ಯೆಯೂ ಮುಜರಾಯಿ ಹುಂಡಿಗಳಿಗೆ ಭಾರಿ ಕಾಣಿಕೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ದೇಶದ ಆರ್ಥಿಕ ಪರಿಸ್ಥಿತಿ ಕುಸಿತ, ಬೆಲೆ ಏರಿಕೆ ಬವಣೆಯ ಮಧ್ಯೆಯೂ ಜಿಲ್ಲೆಯ ದೇವಾಲಯಗಳ ಆದಾಯ ಗಣನೀಯ ಏರಿಕೆಯಾಗಿರುವುದು ಮುಜರಾಯಿ ಅಧಿಕಾರಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಆರ್ಥಿಕ ಹಿಂಜರಿತ, ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿರುವ ಸಾರ್ವಜನಿಕರು ಸಂಕಷ್ಟ ಪರಿಹಾರಕ್ಕೆ ದೇವಾಲಯಗಳಿಗೆ ಎಡತಾಕಿ, ಭರ್ಜರಿ ಕಾಣಿಕೆ ಅರ್ಪಿಸುತ್ತಿದ್ದಾರೆ ಎಂಬ ಅಂಶ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳ ಹುಂಡಿ ಎಣಿಕೆ ಕಾರ್ಯದ ನಂತರ ಬಯಲಾಗಿದೆ.

ಶಿವಮೊಗ್ಗ ನಗರದ ಕೋಟೆ ಸೀತಾ ರಾಮಾಂಜನೇಯ ದೇವಸ್ಥಾನ, ಸಾಗರದ ಮಹಾಗಣಪತಿ ದೇವಸ್ಥಾನ, ಶಿಕಾರಿಪುರದ ಹುಚ್ಚೂರಾಯಸ್ವಾಮಿ ದೇವಸ್ಥಾನ, ಸೊರಬದ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನ, ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ ಕಟ್ಟೆಯ ಭೂತರಾಯಸ್ವಾಮಿ, ಚೌಡೇಶ್ವರಿ, ಸೈಯದ್ ಸಾದತ್ ದರ್ಗಾ ಮತ್ತಿತರ ದೇವಸ್ಥಾನಗಳ ಹುಂಡಿಗಳಲ್ಲಿ ಸಾಕಷ್ಟು ಹಣ ಸಂಗ್ರಹವಾಗಿದೆ.

ಶಿಕಾರಿಪುರ ಹುಚ್ಚೂರಾಯಸ್ವಾಮಿ ದೇವಸ್ಥಾನದಲ್ಲಿ 2018 ಮಾರ್ಚ್‌ನಲ್ಲಿ ನಡೆದ ಎಣಿಕೆಯಲ್ಲಿ ₹ 5,23,330, 2019ರ ಏಪ್ರಿಲ್‌ನಲ್ಲಿ ನಡೆದ ಎಣಿಕೆಯಲ್ಲಿ ₹ 10,42,992 ಹಾಗೂ 2019 ಸೆಪ್ಟಂಬರ್‌ನಲ್ಲಿ ನಡೆದ ಎಣಿಕೆಯಲ್ಲಿ ₹ 16,13,210 ಸಂಗ್ರಹವಾಗಿದೆ. ತೀರ್ಥಹಳ್ಳಿಯ ಭೂತರಾಯ ಚೌಡೇಶ್ವರಿ ಸೈಯದ್ ಸಾದತ್ ದರ್ಗಾದಲ್ಲಿ 2019 ಫೆಬ್ರವರಿಯಲ್ಲಿ ₹ 30,30,060, ಜೂನ್‌ನಲ್ಲಿ ₹ 44,62,340 ಹಾಗೂ ಸೆಪ್ಟೆಂಬರ್‌ನಲ್ಲಿ ₹ 28,20,904 ಸಂಗ್ರಹವಾಗಿದೆ. ಸೊರಬ ಚಂದ್ರಗುತ್ತಿಯ ರೇಣುಕಾಂಬ ದೇವಸ್ಥಾನದಲ್ಲಿ ಜೂನ್‌ನಲ್ಲಿ ₹ 8,56,481, ಜುಲೈನಲ್ಲಿ ₹ 28,76,100 ಸಂಗ್ರಹವಾಗಿದೆ. ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ 2018 ಮಾರ್ಚ್‌ನಲ್ಲಿ ₹ 6,05,730, 2019 ಫೆಬ್ರುವರಿಯಲ್ಲಿ 6,40,785 ಸಂಗ್ರಹವಾಗಿದೆ.

ಎಲ್ಲೆಡೆ ಮೂಲ ಸೌಕರ್ಯ ಕೊರತೆ: ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಿಂದ ಸರ್ಕಾರಕ್ಕೆ ಸಾಕಷ್ಟು ಆದಾಯ ಬರುತ್ತಿದ್ದರೂ, ಅಗತ್ಯ ಸೌಕರ್ಯ ಕಲ್ಪಿಸಿಲ್ಲ. ಸದಾ ಜನ ಸಂದಣಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಹಣಗೆರೆಕಟ್ಟೆ, ಚಂದ್ರಗುತ್ತಿ ದೇವಾಲಯಗಳಲ್ಲೂ ಕನಿಷ್ಠ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಿಲ್ಲ. ಬರುವ ಭಕ್ತರಿಗೆ ನೀರು, ಶೌಚಾಲಯ, ಸ್ನಾನ ಗೃಹ, ತಂಗುವ ಸ್ಥಳ ಕಲ್ಪಿಸುವಲ್ಲಿ ಇಲಾಖೆ ವಿಫಲವಾಗಿದೆ.

ಎಣಿಕೆ ದಾಖಲಿಸದ ಸಿಸಿಟಿವಿ ಕ್ಯಾಮೆರಾ
ದೇವಸ್ಥಾನಗಳಲ್ಲಿ ಹಣದ ದುರುಪಯೋಗ ತಡೆಯಲು ಮುಜರಾಯಿ ಇಲಾಖೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದೆ. ಹಣ ಎಣಿಕೆ ಕಾರ್ಯ ಕ್ಯಾಮೆರಾ ಮುಂದೆ ನಡೆಯಬೇಕು ಎಂಬ ನಿಯಮವಿದೆ. ಆದರೆ, ಯಾವ ಕ್ಯಾಮೆರಾಗಳು ಸರಿ ಇಲ್ಲ. ಬಹುತೇಕ ದುರಸ್ತಿಗೆ ಬಂದಿವೆ. ಇದರ ಹಿಂದೆ ಸ್ಥಳೀಯರ ಕೈವಾಡವಿದೆ ಎಂಬ ಆರೋಪವಿದೆ. ಸಿಸಿಟಿವಿ ಕ್ಯಾಮೆರಾಗಳು ಸರಿ ಇದ್ದರೆ ಇನ್ನಷ್ಟು ಆದಾಯ ನಿರೀಕ್ಷಿಸಬಹುದು ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಮುಜರಾಯಿ ಇಲಾಖೆ ಸಿಬ್ಬಂದಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು