ಭಾನುವಾರ, ಏಪ್ರಿಲ್ 5, 2020
19 °C
ಶರಾವತಿ ವನ್ಯಜೀವಿ ಸಿಂಗಳಿಕ ಅಭಯಾರಣ್ಯದ ಅರಣ್ಯ ರಕ್ಷಕರ ಕಷ್ಟ

ಮಂಗನಕಾಯಿಲೆ ಬವಣೆಯ ನಡುವೆ ಪ್ರಾಣಿಗಳಿಗೆ ನೀರುಣಿಸುವ ಸವಾಲು

ವಿ. ಸಂತೋಷ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ಶರಾವತಿ ವನ್ಯ ಜೀವಿ ಸಿಂಗಳಿಕ ಅಭಯಾರಣ್ಯದಲ್ಲಿ ಒಂದೆಡೆ ಮಂಗನಕಾಯಿಲೆಯ ಬವಣೆ ಅರಣ್ಯ ರಕ್ಷಕರನ್ನು ಕಾಡಿದರೆ, ಮತ್ತೊಂದೆಡೆ ವನ್ಯ ಪ್ರಾಣಿಗಳಿಗೆ ನೀರು ಪೂರೈಸುವ ಸವಾಲನ್ನೂ ಅವರು ಎದುರಿಸಬೇಕಿದೆ.

ಕೆಎಫ್‌ಡಿ ವೈರಸ್‌ಗಳನ್ನು ಹರಡುವ ಮಂಗಗಳ ಶವಗಳನ್ನು ಹುಡುಕುವ ಕೂಂಬಿಂಗ್ ಕಾರ್ಯಾಚರಣೆಯ ಜೊತೆಗೆ ಅರಣ್ಯದ ಆಯ್ದ ಪ್ರದೇಶಗಳಲ್ಲಿ ಇಲಾಖೆಯಿಂದ ನಿರ್ಮಾಣ ಮಾಡಿರುವ ಕೆರೆ, ಕಟ್ಟೆಗಳನ್ನು ಸಂರಕ್ಷಣೆ ಮಾಡುತ್ತ, ಕೃತಕವಾಗಿ ನಿರ್ಮಿಸಿರುವ ನೀರಿನ ಕೊಳಗಳನ್ನು ಭರ್ತಿ ಮಾಡಬೇಕಾದ ಅನಿವಾರ್ಯ ಇಲಾಖೆಯ ಸಿಬ್ಬಂದಿಯನ್ನು ಕಾಡುತ್ತಿದೆ.

ಮಂಗನ ಕಾಯಿಲೆಯ ಆರಂಭದೊಂದಿಗೆ ಅರಣ್ಯವಾಸಿಗಳು ಕಾಡಿಗೆ ಬೆಂಕಿ ಇಡುವ ಕೆಲಸವನ್ನು ಅಲ್ಲಲ್ಲಿ ಆರಂಭಿಸುತ್ತಾರೆ. ಹೀಗಾಗಿ ಜನವರಿಯಿಂದ ಮಳೆಗಾಲದ ಆರಂಭದವರೆಗೂ ದಿನದ 24 ಗಂಟೆಗಳ ಕಾಲ ಕಾಡಿಗೆ ಬೆಂಕಿ ಬೀಳುವುದನ್ನು ತಪ್ಪಿಸಲು ಅರಣ್ಯ ಕಾವಲು ಪಡೆ ಹರಸಾಹಸ ಪಡಬೇಕಾಗುತ್ತದೆ. ಈ ಮಧ್ಯೆ ವಲಯದ ಗಡಿ ಭಾಗಗಳಲ್ಲಿ ವನ್ಯ ಮೃಗಗಳ ಶಿಕಾರಿಗೆ ಬರುವವರನ್ನು ಸುಲಭವಾಗಿ ಪತ್ತೆಹಚ್ಚಲು ಅರಣ್ಯದ ಮಧ್ಯ ಕ್ಯಾಮೆರಾಗಳನ್ನು ಇರಿಸಲಾಗಿದೆ. ಇದರಿಂದ ವನ್ಯಜೀವಿ ಸಂರಕ್ಷಣೆಗೆ ಹೆಚ್ಚಿನ ಬಲ ಬಂದಿದೆ.

ಶರಾವತಿ ಕಣಿವೆಯ ಅಭಯಾರಣ್ಯದಲ್ಲಿ ಕ್ರೂರ ಮೃಗಗಳಾದ ಹುಲಿ, ಚಿರತೆ, ಕಪ್ಪು ಚಿರತೆ, ಕರಡಿ, ಹಂದಿ, ಸೀಳು ನಾಯಿ, ತೋಳ, ನರಿ ಮುಂತಾದವುಗಳನ್ನು ಹೇರಳವಾಗಿ ಸಂರಕ್ಷಣೆ ಮಾಡಲಾಗಿದೆ. ಇವುಗಳ ಜೊತೆಯಲ್ಲಿಯೇ ಸಾಧು ಪ್ರಾಣಿಗಳಾದ ಕಾಡು ಕೋಣ, ಜಿಂಕೆ, ಕಡವೆ, ಕಾಡು ಕುರಿ, ಬರ್ಕಾ, ಮುಂಗುಸಿ, ಉಡ, ಅಳಿಲು, ಕೆಂದಳಿಲು, ಮೊಲಗಳು ಹೇರಳವಾಗಿವೆ. ಉರಗ ಸಂತತಿಗಳಾದ ಕಾಳಿಂಗ ಸರ್ಪ, ಹೆಬ್ಬಾವು, ನಾಗರ ಹಾವು, ಕೆರೆಹಾವು, ಕೊಳಕು ಮಂಡಲ, ಹಸಿರು ಹಾವು ಮೊದಲಾದ ಪ್ರಾಣಿಗಳ ನೆಲೆಬೀಡು ಇಲ್ಲಿಯ ದಟ್ಟ ಕಾಡು. ಹಿನ್ನೀರಿನ ವ್ಯಾಪ್ತಿಯ ಇಲ್ಲಿಯ ಅರಣ್ಯಕ್ಕೆ ವರದಾಯಕವಾದ ಸಂಪತ್ತು. ಉಭಯವಾಸಿಗಳಾದ ಮೊಸಳೆಯನ್ನು ಇಲ್ಲಿ ಕಾಣಬಹುದು. ನವಿಲು, ಹಾರ್ನ್‌ಬಿಲ್, ನೀರು ಕಾಗೆ ಇಲ್ಲಿಯ ಪ್ರಮುಖ ಪಕ್ಷಿ ಸಂಕುಲಕ್ಕೆ ಸೇರಿವೆ. ಭೀಮೇಶ್ವರ ಕಾಡಿನಲ್ಲಿ ಸಸ್ತನಿ ಜಾತಿಯ ಬಾವಲಿಗಳನ್ನು ಕಾಣಬಹುದು. ಉಳಿದಂತೆ ದಟ್ಟ ಕಾಡಿನ ನಡುವೆ ಸಿಂಗಳಿಕ, ಕೃಷಿ ಆಧಾರಿತ ಪ್ರದೇಶಗಳಲ್ಲಿ ಕಪ್ಪು ಮೂತಿ ಮತ್ತು ಬಿಳಿ ಮೂತಿಯ ಮಂಗಗಳು ಬಹಳಷ್ಟು ಇವೆ. ಇವುಗಳ ಮಧ್ಯ ಭಾಗವನ್ನು ಕೇಂದ್ರೀಕರಿಸಿಕೊಂಡು ಆನೆ ಕಾರಿಡಾರ್ ಕೂಡ ಇಲ್ಲಿಯ ಕಾಡಿನಲ್ಲಿರುವುದು ವೈಶಿಷ್ಟ್ಯ.

ಈ ಅಮೂಲ್ಯ ಕಾಡುಪ್ರಾಣಿಗಳು ಮತ್ತು ಮನುಷ್ಯರ ನಡುವೆ ನಡೆಯುವ ಸಂಘರ್ಷವನ್ನು ತಡೆದು, ಅರಣ್ಯ ಸಂಪತ್ತು, ವನ್ಯಜೀವಿಗಳನ್ನು ಕಾಪಾಡಲು ಮಾರಕ ವೈರಸ್‌ಗಳ ನಡುವೆ ಜೀವನ್ಮರಣದ ಹೋರಾಟ ಮಾಡುವ ಅನಿವಾರ್ಯತೆ ಇಲ್ಲಿಯ ಅರಣ್ಯ ಇಲಾಖೆಯ ಸಿಬ್ಬಂದಿಯದ್ದು.

ಈ ಮಧ್ಯೆ ಕೊರೊನಾ ಸೋಂಕಿನ ಭೀತಿಯಿಂದ ಬೆಂಗಳೂರು ಹಾಗೂ ದೊಡ್ಡ ಪಟ್ಟಣಗಳಿಂದ ವಾಪಸ್‌ ಆಗಿರುವ ಯುವಜನರು ಅಭಯಾರಣ್ಯ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಮೋಜು ಮಸ್ತಿಗೆ ಬರುವ ಸಂಭವವಿರುವ ಕಾರಣ ಆಯ್ದ ಮುಖ್ಯ ಪ್ರವೇಶ ದ್ವಾರಗಳಲ್ಲಿ ಸಿಬ್ಬಂದಿಯ ಕಾವಲು ನಿಯೋಜಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು