ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಕೊರೊನಾ: ಮತ್ತೆ 3 ಮಂದಿ ಸಾವು

ಭಾನುವಾರ 46 ಮಂದಿಗೆ ಸೋಂಕು ದೃಢ; ಸಾವಿನ ಸಂಖ್ಯೆ 23ಕ್ಕೆ ಏರಿಕೆ
Last Updated 19 ಜುಲೈ 2020, 17:24 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಲೇ ಇದೆ. ಭಾನುವಾರ ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಸೋಂಕಿತರ ಮಾಹಿತಿ ವರದಿಯಲ್ಲಿ ಮತ್ತೆ ಮೂರು ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

ಕಳೆದ 10 ದಿನಗಳಿಂದ ನಿತ್ಯವೂ ಕೊರೊನಾ ಸೋಂಕಿನಿಂದ ಮೃತಪಡುತ್ತಿರುವ ಪ್ರಕರಣಗಳು ವರದಿ ಆಗುತ್ತಲೇ ಇವೆ. ಶನಿವಾರ ಸೋಂಕಿನಿಂದ ಬಳಲುತ್ತಿದ್ದ ಇಬ್ಬರು ಮೃತಪಟ್ಟಿದ್ದರು. ಜಿಲ್ಲೆಯಲ್ಲಿ ಸೋಂಕಿತ ಸಂಖ್ಯೆ ಹೆಚ್ಚುತ್ತಿರುವಂತೆ ಮೃತರ ಸಂಖ್ಯೆಯೂ ಏರುಗತಿಯಲ್ಲಿದೆ.

ತುಮಕೂರು ತಾಲ್ಲೂಕು ಭೀಮಸಂದ್ರ ಗ್ರಾಮದ 62 ವರ್ಷದ ವ್ಯಕ್ತಿ ಜ್ವರ, ತೀವ್ರ ಉಸಿರಾಟದ ತೊಂದರೆಯಿಂದ ಜುಲೈ 16 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಜು.17 ರಂದು ಮೃತಪಟ್ಟಿದ್ದರು. ಇವರ ಗಂಟಲುಸ್ರಾವವನ್ನು ಪರೀಕ್ಷೆ ಕಳುಹಿಸಲಾಗಿತ್ತು. ಭಾನುವಾರ ಬಂದ ವರದಿಯಲ್ಲಿ ಇವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಇವರು ಸಹ ಜ್ವರ, ಉಸಿರಾಟದ ತೊಂದರೆಗೆ ಒಳಗಾಗಿದ್ದರು. ಜುಲೈ 13 ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ. ಪಾವಗಡ ತಾಲ್ಲೂಕು ಹೊಸಹಳ್ಳಿ ತಾಂಡಾ 60 ವರ್ಷದ ವ್ಯಕ್ತಿಯೂ ಸೋಂಕಿನಿಂದ ಮೃತಪಟ್ಟಿದ್ದಾರೆ.

ತುಮಕೂರು ನಗರದಲ್ಲಿ ಹೆಚ್ಚು: ತುಮಕೂರು ನಗರದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಈವರೆಗೆ ದೃಢಪಟ್ಟಿರುವ ಸೋಂಕಿತರಲ್ಲಿ ಶೇ 60 ರಷ್ಟು ಮಂದಿ ತುಮಕೂರು ನಗರದವರೇ ಇದ್ದಾರೆ. ಭಾನುವಾರ ಒಂದೇ ದಿನ 25 ಮಂದಿಗೆ ಸೋಂಕು ತಗುಲಿದೆ. ಈವರೆಗೆ ನಗರದಲ್ಲಿ 316 ಮಂದಿಗೆ ಸೋಂಕು ತಗುಲಿದೆ.

ತುಮಕೂರು ನಗರದಲ್ಲಿ ಭಾನುವಾರ ಮರಳೂರು ದಿಣ್ಣೆಯ 16 ವರ್ಷದ ಬಾಲಕ, ನಾಗವಲ್ಲಿ ಕೆರೆ ರಸ್ತೆಯ 35 ವರ್ಷದ ಮಹಿಳೆ, ವಿನಾಯಕನಗರದ 70 ವರ್ಷದ ವೃದ್ಧ, ಗಾಂಧಿನಗರದ 35 ವರ್ಷದ ಪುರುಷ, ಮಾನಂಗಿ ಮುಖ್ಯರಸ್ತೆಯ 48 ವರ್ಷದ ಮಹಿಳೆ, ವಿನಾಯಕನಗರದ 65 ವರ್ಷದ ಪುರುಷ, ಮರಳೂರು ದಿಣ್ಣೆಯ 30 ವರ್ಷದ ಮಹಿಳೆ, ಉಪ್ಪಾರಹಳ್ಳಿಯ 38 ವರ್ಷದ ಪುರುಷ, ಹೆಗ್ಗೆರೆಯ 20, 23 ವರ್ಷದ ಯುವತಿಯರು, 45 ವರ್ಷದ ಮಹಿಳೆ, ಜಯನಗರದ 20 ವರ್ಷದ ಯುವಕ, ಹನುಮಂತಪುರದ 15 ವರ್ಷದ ಯುವಕನಿಗೆ ಸೋಂಕು ತಗುಲಿದೆ.

ಪೊಲೀಸ್‌ ಸಿಬ್ಬಂದಿಗೆ ಸೊಂಕು: ತುಮಕೂರು ಟೌನ್‌ ಪೊಲೀಸ್‌ ಠಾಣೆಯ 29 ವರ್ಷದ ಮಹಿಳಾ ಸಿಬ್ಬಂದಿಗೆ ಸೋಂಕು ತಗುಲಿದೆ. ಬೆಳಗುಂಬ ರಸ್ತೆ ಜ್ಯೋತಿಪುರದ 55 ವರ್ಷದ ಮಹಿಳೆ, ಅಂತರಸನಹಳ್ಳಿಯ 30 ವರ್ಷದ ಯುವಕ, ಶಾರದದೇವಿ ನಗರದ 30 ವರ್ಷದ ಯುವಕ, ಸಿದ್ಧರಾಮೇಶ್ವರ ಬಡಾವಣೆಯ 30 ವರ್ಷದ ಮಹಿಳೆ, ದಿಬ್ಬೂರಿನ 53 ವರ್ಷದ ಮಹಿಳೆ, ಬಟವಾಡಿಯ 69 ವರ್ಷದ ಪುರುಷ, ನಂದಿಹಳ್ಳಿಯ 40 ಹಾಗೂ 36 ವರ್ಷದ ಪುರುಷರು, ಮೆಳೆಕೋಟೆಯ 55 ವರ್ಷದ ಮಹಿಳೆ, ಎಸ್‌ಐಟಿಯ 59 ವರ್ಷದ ಪುರುಷ, ಶಾಂತಿನಗರದ 38 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ನಾಲ್ವರಿಗೆ ಸೋಂಕು ದೃಢ

ಕುಣಿಗಲ್‌:ಪಟ್ಟಣದ ಮದ್ದೂರು ರಸ್ತೆಯ 62 ವರ್ಷದ ವ್ಯಕ್ತಿಗೆ, ಅಗ್ರಹಾರದ 45 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಅಲ್ಲದೆ ಚುಂಚನಗಿರಿ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಪಟ್ಟಣದ ವ್ಯಾಪಾರಿಯ ಪತ್ನಿಗೆ ಸೋಂಕು ತಗುಲಿದ್ದು, ನಂತರ ಪತಿಗೂ ಸೋಂಕು ದೃಢಪಟ್ಟಿದೆ. ಇಬ್ಬರೂ ಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂವರಿಗೆ ಸೋಂಕು

ಮಧುಗಿರಿ: ತಾಲ್ಲೂಕಿನಲ್ಲಿ ಮೂರು
ಮಂದಿಗೆ ಕೊರೊನಾ ಸೋಂಕು
ದೃಢಪಟ್ಟಿದೆ.

ತಾಲ್ಲೂಕು ಕೊಂಡವಾಡಿ ಗ್ರಾಮ‌
ಪಂಚಾಯಿತಿಯ ಚಿನ್ನಿಗಿರಿಪಾಳ್ಯ ಗ್ರಾಮದ
20 ವರ್ಷದ ಯುವತಿ, ಪಟ್ಟಣದ ಪುರಸಭೆ ರಸ್ತೆಯಲ್ಲಿರುವ 62 ವರ್ಷದ
ವೃದ್ಧ ಹಾಗೂ 26 ವರ್ಷದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

---

71 ಮಂದಿ ಗುಣಮುಖ

ಭಾನುವಾರ ಒಂದೇ ದಿನ 71 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 358 ಮಂದಿ ಗುಣಮುಖರಾಗಿದ್ದಾರೆ. 318 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.

---

ಒಂದೇ ತಿಂಗಳಲ್ಲಿ 650 ಮಂದಿಗೆ ಸೋಂಕು

ತುಮಕೂರು ಜಿಲ್ಲೆಯಲ್ಲಿ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಸೋಂಕಿತರ ಸಂಖ್ಯೆ 30 ದಾಟಿರಲಿಲ್ಲ. ಜೂನ್ 20ಕ್ಕೆ ಈ ಸಂಖ್ಯೆ 50ಕ್ಕೆ ಏರಿಕೆಯಾಗಿ ಇಬ್ಬರು ಮೃತಪಟ್ಟಿದ್ದರು. ನಂತರದ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ಕಳೆದ ಒಂದು ತಿಂಗಳಲ್ಲಿ 649 ಮಂದಿಗೆ ಸೋಂಕು ತಗುಲಿ, 23 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT