ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಮದುವೆಗೆ ಮುನ್ನ 400 ಗರ್ಭಿಣಿಯರು: ಪೋಕ್ಸೊ ಅಡಿ 125 ಮಂದಿ ಜೈಲಿಗೆ

Published 13 ಜೂನ್ 2024, 16:27 IST
Last Updated 13 ಜೂನ್ 2024, 16:27 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 400 ಮಂದಿ ಹೆಣ್ಣು ಮಕ್ಕಳು ಮದುವೆಯಾಗದೆ ಗರ್ಭ ಧರಿಸಿದ್ದಾರೆ. ಇವರಲ್ಲಿ ನಾಲ್ಕು ಮಂದಿ 10 ವರ್ಷದವರಿದ್ದಾರೆ. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 125 ಮಂದಿ ಜೈಲು ಪಾಲಾಗಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಆನ್‌ಲೈನ್‌ನಲ್ಲಿ ಲೈಂಗಿಕ ದೌರ್ಜನ್ಯ: ಪೋಕ್ಸೊ ಕಾಯ್ದೆಯಡಿ ತಡೆಗಟ್ಟುವಿಕೆ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೋಕ್ಸೊ ಪ್ರಕರಣದಲ್ಲಿ ಜೈಲಿನಲ್ಲಿರುವ ಹೆಚ್ಚಿನ ಮಂದಿ ಹೆಣ್ಣು ಮಕ್ಕಳ ತಂದೆ, ಅಣ್ಣ, ಸಂಬಂಧಿಕರು, ಶಿಕ್ಷಕರು, ಸ್ವಾಮೀಜಿಗಳು ಇದ್ದಾರೆ. ಕೆಲವರು ಎರಡು ಬಾರಿ ಜೈಲು ಪಾಲಾಗಿದ್ದಾರೆ. ಬಾಲಕಿಯನ್ನು ಮದುವೆಯಾಗಿ, ಲೈಂಗಿಕ ಸಂಬಂಧ ಇಟ್ಟುಕೊಂಡರೆ ಅದು ಅತ್ಯಾಚಾರ ಪ್ರಕರಣವೆಂದೇ ಪರಿಗಣಿಸಲಾಗುತ್ತದೆ. ಜಿಲ್ಲೆಯ ಕುಟುಂಬ ನ್ಯಾಯಾಲಯದಲ್ಲಿ ಒಟ್ಟು 6 ಸಾವಿರ ವಿಚ್ಛೇದನ ಪ್ರಕರಣಗಳು ಚಾಲ್ತಿಯಲ್ಲಿವೆ. ಇವೆಲ್ಲವೂ ಸಮಾಜದ ದುರಂತಗಳು ಎಂದು ವಿಷಾದಿಸಿದರು.

ವಿಡಿಯೊ ಕರೆ ಸ್ವೀಕರಿಸುವಾಗ ಎಚ್ಚರ ವಹಿಸಬೇಕು. ನೀವು ಅಶ್ಲೀಲ ಕರೆಯಲ್ಲಿ ಇರುವಂತೆ ಬಿಂಬಿಸಿ, ನಂತರ ಬೆದರಿಸಿ ಹಣ ವಸೂಲಿ ಮಾಡಬಹುದು. ಸಾಮಾಜಿಕ ಜಾಲ ತಾಣಗಳ ಚಿತ್ರ ಬಳಸಿಕೊಂಡು, ಅಶ್ಲೀಲವಾಗಿ ತಿರುಚಬಹುದು. ಈ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು. ಸೈಬರ್‌ ಅಪರಾಧಿಗೆ ₹10 ಲಕ್ಷ ದಂಡ, 7 ವರ್ಷದಿಂದ 20 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ತಿಳಿಸಿದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ನಾಗರಿಕತೆ ಬೆಳೆದಂತೆ, ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ಅಪರಾಧಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ವಿ.ವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ಪ್ರಾಧ್ಯಾಪಕರಾದ ನೂರ್‌ ಅಫ್ಜಾ, ಮೊನ್ಬಿಂದರ್‌ ಕೌರ್‌, ಎ.ಮೋಹನ್‌ರಾಮ್‌, ಸುನಿತಾ ವಿ.ಗಾಣಿಗೇರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT