ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಹಾಲುಗೋಣದ ಆಲಮ್ಮ...

Last Updated 24 ಜುಲೈ 2020, 9:09 IST
ಅಕ್ಷರ ಗಾತ್ರ
ADVERTISEMENT
"ನಾನು ಹಾಲುಗೋಣದ ಆಲಮ್ಮ..."

ತುಮಕೂರು ಜಿಲ್ಲೆ ಚಿಕ್ಕನಾಯ್ಕಹಳ್ಳಿ ತಾಲ್ಲೂಕಿನ ಹಾಲುಗೊಣದಲ್ಲಿ ಇನ್ನೂರು ವರ್ಷಗಳಷ್ಟು ಹಳೆಯದಾದ ಬೃಹತ್ ಆಲದ ಮರವಿತ್ತು. ಹೆದ್ದಾರಿ ಅಭಿವೃದ್ಧಿಗೆ ಆ ಮರ ಬಲಿಯಾಗುತ್ತಿದೆ. ಇವತ್ತೋ ನಾಳೆಯೋ, ಆ ಮರವನ್ನು ಪೂರ್ಣವಾಗಿ ತೆಗೆದು ಹಾಕಲಿದ್ದಾರೆ. ಹೀಗೆ ಅಳಿಯುತ್ತಿರುವ ಆಲದ ಮರವೊಂದು ತನ್ನ ದುರಂತದ ಕಥೆಯನ್ನು ಮನುಕುಲದ ಎದುರು ಹೇಳಿಕೊಂಡಂತೆ ಇಲ್ಲಿ ನಿರೂಪಿಸಿದ್ದಾರೆ ಕೃಷ್ಣಿ ಶಿರೂರು.

ನಾನು ತುಮಕೂರು ಜಿಲ್ಲೆಯ ಹಾಲುಗೊಣದ ಆಲಮ್ಮ. ನನಗೆ ಅಂದಾಜು 200 ವರ್ಷಗಳೇ ಆಗಿರಬಹುದು. ನಾನು ಕೂಡ ಎಲ್ಲರಂತೆ ಒಂದು ಬೀಜದಿಂದ ಜನ್ಮ ತಳೆದು, ಸಾಮಾನ್ಯ ಗಿಡವಾಗಿ ಬೆಳೆದೆ. ಬೆಳೆದಂತೆ ಎಷ್ಟೊಂದು ಬಿಳಲುಗಳು ನನ್ನ ಆವರಿಸಿಕೊಂಡವು. ಹಾಲುಗೋಣದ ಮಂದಿ ನೆರಳನರಸಿ ನನ್ನಡಿಯಲ್ಲಿ ಬಂದು ವಿಶ್ರಮಿಸುತ್ತಿದ್ದರು.

ಎಷ್ಟು ತಲೆಮಾರುಗಳ ಕಂಡಿರುವವಳು ನಾನು. ಅದೆಷ್ಟು ಹಕ್ಕಿಗಳು ನನ್ನ ಒಡಲಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟು, ಮರಿ ಮಾಡಿ ಹಾರಿ ಹೋಗಿದ್ದವೋ? ನಾನೇನು ಲೆಕ್ಕ ಇಟ್ಟಿಲ್ಲ. ಆ ಮರಿಗಳಿಗೆ ಅಮ್ಮ ಹಕ್ಕಿ ಗುಟುಕ ತಂದಾದ ಆ ಎಳೆ ಕೊರಳಿನ ಉಲಿವು ಕೇಳಿ ನಾನೂ ತಾಯ್ತನ ಅನುಭವಿಸುತ್ತಿದ್ದೆ. ಗುಟುಕಿಗಾಗಿ ಆ ಮರಿಗಳು ಪೈಪೋಟಿ ಮಾಡುತ್ತಿದ್ದಾಗ, ಸ್ವಲ್ಪ ದೊಡ್ಡವಾದ ಮೇಲೆ ಹೆರೆಗಳ ಮೇಲೆ ಕೂತು ಆಟವಾಡುವತ್ತಿದ್ದವು. ಇದನ್ನೆಲ್ಲ ನಾನು ನನ್ನ ಪಾಡಿಗೆ ನೋಡುತ್ತ ಖುಷಿಪಡುತ್ತಿದ್ದೆ. ನನ್ನ ಎಲೆಎಲೆಗೂ ಬಿಡುತ್ತಿದ್ದ ಹಣ್ಣುಗಳನ್ನು ಪಕ್ಷಿಗಳು ತಿಂದುಂಡು ಹಾರಿಹೋಗುತ್ತಿದ್ದವು. ನನ್ನ ಎಲೆಗಳಿಂದ ಒಸರುವ ಹಾಲನ್ನು ಸೊರಿಯಾಸಿಸ್‌ನಂಥ ಚರ್ಮದ ಕಾಯಿಲೆಗೂ ಹಚ್ಚಲು ಇಲ್ಲಿನ ಜನರು ಒಯ್ಯುತ್ತಿದ್ದರು.

ಹಾಲುಗೋಣದ ಜನರು ನನ್ನಡಿ ನಿಂತು, ಕುಂತು ಹರಟೆ ಹೊಡೆದಾಗೆಲ್ಲ ನಾನು ಅವರ ಕಷ್ಟ ಸುಖಗಳಿಗೆ ಕಿವಿಯಾಗುತ್ತಿದ್ದೆ. ಬಿಸಿಲಿನಿಂದ ಬಳಲಿ, ನನ್ನ ನೆರಳಡಿ ಬಂದು ‘ಹುಸ್ಸಪ್ಪಾ, ಈಗ ಒಂದಷ್ಟು ತಂಪಾಯ್ತು’ ಎಂದಾಗ ನಾನು ಮನದೊಳಗೆ ಖುಷಿಪಡುತ್ತಿದ್ದೆ. ಮಕ್ಕಳು ನನ್ನ ಬಿಳಲುಗಳನ್ನು ಹಿಡಿದು ಜೋಕಾಲಿ ಆಡುವಾಗ ನಾನು ಮನಸೋಇಚ್ಛೆ ಸಂತೋಷ ಪಡುತ್ತಿದ್ದೆ. ಇತ್ತೀಚೆಗೆಲ್ಲ ನನ್ನ ಮೈಕೈ ಎಲ್ಲ ಸುಕ್ಕುಗಟ್ಟಿದ್ದರೂ ನನ್ನ ತಾಯಿ ಬೇರು ಆಳದಲ್ಲಿ ಇಳಿದಿರುವುದರಿಂದ ನಾನು ಇನ್ನೂ ಗಟ್ಟಿಯಾಗಿಯೇ ಇದ್ದೆ. ಈ ನೆಲದಿಂದ ಋಣ ಕಳಚಿಕೊಳ್ಳುವ ಗತಿ ಬಂದಿರಲಿಲ್ಲ. ಇನ್ನೂ ನೂರಾರು ವರ್ಷ ಚೆನ್ನಾಗಿ ಬಾಳ ಬದುಕುತ್ತಿದ್ದೆನೆನೊ? ಇರುವಷ್ಟು ದಿನ ನನ್ನ ಹಾಲುಗೋಣದ ಮಂದಿಗೆ ನೆರಳಾಗಿರುತ್ತಿದ್ದೆ.

ಗರಗಸ ಹರಿದಾಡಿದಾಗ ನನ್ನ ದುಸ್ಥಿತಿ

ಆದರೆ, ’ಬೀದರ್‌ನಿಂದ ಚಾಮರಾಜನಗರದವರೆಗೆ’ ಹೆದ್ದಾರಿ ನಿರ್ಮಾಣ ಮಾಡುವುದಕ್ಕೆಂದ ಬಂದವರು, ನನ್ನ ಬದುಕಿಗೆ ಕೊಡಲಿ ಏಟು ಹಾಕಿದ್ದಾರೆ. ಈ ಹಿಂದೆ ರಸ್ತೆ ಅಭಿವೃದ್ಧಿ ಹೆಸರಲ್ಲಿ ಬೇರೆ ಬೇರೆ ಕಡೆ ನನ್ನ ಕುಟುಂದವರನ್ನು ಹೀಗೆ ಕೊಂದಿದ್ದರು. ಈಗ ನನ್ನ ಸರದಿ. ಊರಿಗೆ ರಾಣಿಯಂತೆ ಮೆರೆದ ನನ್ನನ್ನು ಹೀನಾಯವಾಗಿ ಬಲಿಕೊಡುತ್ತಿದ್ದಾರೆ. ಮೊದಲು ಒಂದೊಂದೇ ಅಂಗಾಂಗವನ್ನು (ಹೆಗರೆಯನ್ನು) ಕಡಿದು ಕಡಿದು ತುಂಡು ತುಂಡಾಗಿಸಿದರು. ಸ್ವಯಂಚಾಲಿತ ದೊಡ್ಡ ದೊಡ್ಡ ಗರಗಸಗಳು ನನ್ನ ಮೇಲೆ ಹರಿದಾಡುವಾಗ ಅದೆಷ್ಟು ನೋವು, ವೇದನೆ ಅನುಭವಿಸಿದೆ. ಒಂದೊಂದು ಗರಗಸಕ್ಕೂ ಚಿತ್ಕರಿಸುವಾಗ ನನ್ನ ನೋವಿನ ಕೂಗು ಯಾರಿಗೂ ಕೇಳದಾಯಿತು.

ಸುರಿದ ಕಣ್ಣೀರು, ರಕ್ತವನ್ನು ಯಾರೂ ನೋಡದಾದರು. ನನ್ನ ತಂಪಾದ ನೆರಳು ಕೂಡ ಯಾರಿಗೂ ನೆನಪಿಗೆ ಬರಲಿಲ್ಲ. ನಾನು ಈ ಊರಿನ ಹಿರಿತಲೆಯಾಗಿದ್ದೆ. ನಾನು ಈ ಊರಿನ ಹೆಮ್ಮೆ ಆಗಿದ್ದೆ. ಆದರೆ ನಾನೀಗ ಈ ಊರಿನ ಇತಿಹಾಸದ ಪುಟ ಸೇರುತ್ತಿರುವ ನಿರ್ಭಾಗ್ಯ ಮರವಾಗುತ್ತಿದ್ದೇನೆ. ಹೆದ್ದಾರಿ ಹೆಸರಲ್ಲಿ ನನ್ನನ್ನು ಕೊಚ್ಚಿಕಡಿದು ನಾಶವಾಗಿಸಿದರು. ಮೊನ್ನೆಮೊನ್ನೆವರೆಗೂ ಆರೋಗ್ಯವಾಗಿದ್ದ ನಾನು ಇಂದು ದೇಹದ ಭಾಗಗಳನ್ನು ಕತ್ತರಿಸಿದ ಅರ್ಧಮರವಾಗಿದ್ದೇನೆ. ನಾಳೆ ನನ್ನ ಅಂತ್ಯವಾಗಲಿದೆ. ಯಾರೂ ಕೂಡ ನನ್ನ ಅಂತ್ಯವನ್ನು ತಡೆಯಲಾಗಲಿಲ್ಲ. ನನ್ನಂಥ ಎಷ್ಟೋ ಮರಗಳನ್ನು ಬಲಿಕೊಟ್ಟು ನಿರ್ಮಿಸಿದ ಈ ಹೆದ್ದಾರಿಯಲ್ಲಿ ಓಡಾಡುವ ಜನರಿಗೆ ಬಿಸಿಲ ತಾಪ ತಟ್ಟುವಾಗಿ ನಾನು ನೆನಪಾಗಬಹುದು. ಆದರೆ ನಿಮಗೆ ತಂಪು ನೀಡಲು ನಾನೇ ಇರುವುದಿಲ್ಲ.

ಇಂತಿ ನಿಮ್ಮ ಹಾಲುಗೊಣದ ಆಲಮ್ಮ

ಚಿತ್ರ: ಸುರೇಶ ಹಳೆಮನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT