ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್: ಹಸಿರು ದಾಸೋಹಕ್ಕೆ ಕೈಜೋಡಿಸಿದ ಯುವಶಕ್ತಿ

Last Updated 5 ಜೂನ್ 2021, 6:05 IST
ಅಕ್ಷರ ಗಾತ್ರ

ಕುಣಿಗಲ್: ಗ್ರಾಮೀಣ ಯುವಶಕ್ತಿ ಸಂಘಟಿತರಾದರೆ ಪರಿಸರ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿ ಸಾಧ್ಯ ಎನ್ನುವುದನ್ನ ಸಾಬೀತು ಪಡಿಸಿದೆ ತಾಲ್ಲೂಕಿನ ದೊಡ್ಡೆಗೌಡನಪಾಳ್ಯದ ನಂದಿ ಬಸವೇಶ್ವರ ಯುವಕ ಸಂಘ.

ಸಂತೆಮಾವತ್ತೂರು ಗ್ರಾಮಪಂಚಾಯಿತಿಯ ದೊಡ್ಡೆಗೌಡನಪಾಳ್ಯದ ಸಮಾನಮನಸ್ಕ ಯುವಕರು 2013ರಲ್ಲಿ ಈ ಸಂಘವನ್ನು ಸ್ಥಾಪಿಸಿದ್ದರು. ಗ್ರಾಮದ ಬಸವೇಶ್ವರಸ್ವಾಮಿ ದೇವಾಲಯ ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಮುಂದಾದಾಗ ಗ್ರಾಮಸ್ಥರಿಂದ ಎದುರಾದ ತಿರಸ್ಕಾರದ ಮಾತುಗಳೇ ಯುವಕರ ಸಾಧನೆಗೆ ಸ್ಪೂರ್ತಿಯಾಗಿದೆ.

ಯಾರ ಬಳಿಯೂ ದೇಣಿಗೆ ಯಾಚಿಸದೆ, ಮೊದಲಿಗೆ ಬಸವೇಶ್ವರಸ್ವಾಮಿ ಟ್ರಸ್ಟ್ ಪದಾಧಿಕಾರಿಗಳ ಅನುಮತಿ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.

ದೇವಾಲಯದ 17 ಎಕರೆ ಜಮೀನಿನಲ್ಲಿ 2014ರಲ್ಲಿ 6 ಎಕರೆ ಜಾಗದಲ್ಲಿ ಸಿಲ್ವರ್, ಬೇವು, ಹಲಸು ಬೆಳೆಸಿದರು. 2015ರಲ್ಲಿ 2 ಎಕರೆಯಲ್ಲಿ 200 ಮಾವಿನಗಿಡ, 2018ರಲ್ಲಿ 180 ತೆಂಗು ಮತ್ತು 700 ಬಾಳೆಗಿಡಗಳನ್ನು ನೆಟ್ಟಿದ್ದಾರೆ. ಈ ಕಾರ್ಯಕ್ಕೆ ನರೇಗಾ ಹಣದ ಜತೆ ಸಂಘದ ಹಣವನ್ನು ವಿನಿಯೋಗಿಸಲಾಗಿದೆ. ಇದರಿಂದಾಗಿ ಬರಡಾಗಿದ್ದ ಈ ಭಾಗ ಹಚ್ಚಹಸಿರಿನಿಂದಾಗಿ ಕಂಗೊಳಿಸುತ್ತಿದೆ. ಬರುವ ಆದಾಯವನ್ನು ಕಲ್ಯಾಣಿ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.

ಚೋಳರ ಕಾಲದ ಇತಿಹಾಸ ಪ್ರಸಿದ್ಧ ಬಸವಣ್ಣ ದೇವಾಲಯದ ದೇವಮೂಲೆಯಲ್ಲಿದ್ದ ಕಲ್ಯಾಣಿ ಮುಚ್ಚಿಹೋಗಿದ್ದು, ನಂದಿ ಬಸವೇಶ್ವರ ಯುವಕ ಸಂಘದ ಪದಾಧಿಕಾರಿಗಳಾದ ಲೋಕೇಶ್, ನಾಗೇಶ್, ತಿಮ್ಮಯ್ಯ, ಚಂದ್ರಶೇಖರ್ ಮತ್ತು ವೆಂಕಟೇಶ್ ಸೇರಿ ಕಲ್ಯಾಣಿ ಪುನಶ್ಚೇತನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. 2016ರಲ್ಲಿ ಚಾಲನೆ ನೀಡಿದ್ದು 5,550 ಚದರ ಅಡಿ, 18 ಅಡಿ ಆಳದ
ಕಲ್ಯಾಣಿಯನ್ನು ನರೇಗಾದ ₹9 ಲಕ್ಷ ಹಣದೊಂದಿಗೆ ಸಂಘದ ಸದಸ್ಯರು ಸೇರಿ ₹23 ಲಕ್ಷದ ವೆಚ್ಚದಲ್ಲಿ ಸುಂದರ ಕಲ್ಯಾಣಿ ನಿರ್ಮಿಸಿದ್ದಾರೆ.

ದೇಗುಲದ ಸುತ್ತಲಿನ ಹತ್ತು ಎಕರೆ ಪ್ರದೇಶ ಹಸಿರಿನ ಬನದಂತಾಗಿದೆ. ಕೋವಿಡ್‌ ನಂತರ ಮತ್ತಷ್ಟು ಇಂತಹ ಕಾರ್ಯಗಳಿಗೆ ತೊಡಗಿಕೊಳ್ಳುವ ಇರಾದೆ ಯುವಕರದ್ದು.

ದೊಡ್ಡೆಗೌಡನ ಪಾಳ್ಯದ ಯುವಕರ ಕಾಳಜಿಗೆ ಸಂತೆಮಾವತ್ತೂರು ಗ್ರಾಮಪಂಚಾಯಿತಿಯೂ ಕೈಜೋಡಿಸಿದೆ. ನರೇಗಾದಿಂದ ಅಗತ್ಯ ಸೌಲಭ್ಯ ನೀಡಲಾಗಿದೆ. ಕಲ್ಯಾಣಿಯ ಸುತ್ತ ಉದ್ಯಾನ ನಿರ್ಮಾಣಕ್ಕೂ ಸಹಕರಿಸಲಾಗುವುದು ಎನ್ನುತ್ತಾರೆ ಪಿಡಿಒ ಕಾಂತರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT