ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ದೌರ್ಜನ್ಯ ಆರೋಪ: ಪ್ರತಿಭಟನೆ

Last Updated 4 ಸೆಪ್ಟೆಂಬರ್ 2021, 3:59 IST
ಅಕ್ಷರ ಗಾತ್ರ

ಗುಬ್ಬಿ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವ ಸಾಗಿಸಲು ನಿರಾಕರಿಸಿದ ತರಕಾರಿ ಸಾಗಣೆ ವಾಹನ ಚಾಲಕನ ವಿರುದ್ಧ ಅನಗತ್ಯ ಪ್ರಕರಣ ದಾಖಲಿಸಲಾಗಿದೆ. ಇಡೀ ದಿನ ವಾಹನವನ್ನು ಠಾಣೆಯಲ್ಲಿರಿಸಿಕೊಂಡು ಪೊಲೀಸರು ತೊಂದರೆ ನೀಡಿದ್ದಾರೆ ಎಂದು ಆರೋಪಿಸಿ ತರಕಾರಿ ಸಾಗಣೆ ವಾಹನಗಳ ಚಾಲಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕು ಲಿಂಗದಹಳ್ಳಿಯ 22 ತರಕಾರಿ ಸಾಗಣೆ ವಾಹನ ಚಾಲಕರು ಪ್ರತಿಭಟನೆ ನಡೆಸಿ ಎಸ್‌ಐ ವಿರುದ್ಧ ಕಿಡಿಕಾರಿದರು.

ಶವ ಸಾಗಿಸಲು ನಿರಾಕರಿಸಿದ ಕಾರಣಕ್ಕೆ ಪೊಲೀಸ್ ಠಾಣೆ ಬಳಿ ವಾಹನ ಜಪ್ತಿ ಮಾಡಿದ್ದಾರೆ. ಸೀಟ್ ಬೆಲ್ಟ್ ಹಾಗೂ ಯೂನಿಫಾರಂ ಹಾಕಿಲ್ಲ ಎನ್ನುವ ಕಾರಣ ನೀಡಿ ವಾಹನವನ್ನು ಠಾಣೆಯಲ್ಲೇ ನಿಲ್ಲಿಸಿಕೊಂಡಿದ್ದರು. ಕಾನೂನು ರೀತಿ ದಂಡ ಕಟ್ಟುವುದಾಗಿ ಮನವಿ ಮಾಡಿದ್ದರೂ ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದರು.

‘ಕೇವಲ ₹100ರ ದಂಡದ ರಸೀದಿ ಹಾಕಿ, ₹7,000ವನ್ನು ಫೋನ್ ಪೇ ಮೂಲಕ ಪಡೆಯಲಾಗಿದೆ. ಲಂಚ ಪಡೆದ ನಂತರವೂ ವಾಹನ ಬಿಡಲಿಲ್ಲ’ ಎಂದು ಕಿಡಿಕಾರಿದರು.

ನಿತ್ಯ ಬೆಂಗಳೂರಿಗೆ ತರಕಾರಿ ಸಾಗಿಸುವ 40 ವಾಹನಗಳು ಇದೇ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ಎಲ್ಲ ವಾಹನಗಳ ದಾಖಲೆಗಳು ಸರಿಯಾಗೇ ಇವೆ. ಕಾನೂನು ರೀತಿ ಮಾತನಾಡಿದ್ದಕ್ಕೆ ವಾಹನದಲ್ಲಿ ಮದ್ಯದ ಬಾಟಲ್ ಇರಿಸಿ, ಜೈಲಿಗೆ ಹಾಕುವ ಬೆದರಿಕೆ ಹಾಕಿದ್ದಾರೆ ಎಂದು ಚಾಲಕ ಯೂನಸ್ ದೂರಿದರು.

ನಿತ್ಯ ಲಕ್ಷಾಂತರ ರೂಪಾಯಿ ತರಕಾರಿ ಸಾಗಿಸುವ ಈ ಗೂಡ್ಸ್ ವಾಹನ ಇಡೀ ದಿನ ಠಾಣೆ ಮುಂದೆ ನಿಂತಿರುವ ಕಾರಣ ಈ ದಿನದ ದುಡಿಮೆಯನ್ನು ಪೊಲೀಸ್ ಇಲಾಖೆ ಕಟ್ಟಿಕೊಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಧರಣಿ ಆರಂಭಿಸಿದ ನಂತರ ಫೋನ್ ಪೇ ಮೂಲಕ ಪಡೆದಿದ್ದ ₹7,000ವನ್ನು ವಾಪಸ್ ಕೊಡಲಾಯಿತು. ವಾಹನದ ದುಡಿಮೆ ಮತ್ತು ಚಾಲಕರ ಕೂಲಿ ಯಾರು ನೀಡುತ್ತಾರೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಚಾಲಕರಾದ ಮುರುಗೇಶ್, ಅಬ್ಜಲ್‌ಖಾನ್, ಬಾಬು, ರಫೀಕ್, ಮಂಜು, ಶಕೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT