ಗುರುವಾರ , ಅಕ್ಟೋಬರ್ 1, 2020
24 °C
ಕೊರೊನಾ ಸೋಂಕಿನ ಭೀತಿಯಿಂದ ಪಾರಾಗಲು ರೋಗ ನಿರೋಧಕ ಮಾತ್ರೆಗಳತ್ತ ಒಲವು

ತುಮಕೂರು: 4 ಲಕ್ಷ ಮಾತ್ರೆಗಳಿಗೆ ಆಯುಷ್ ಬೇಡಿಕೆ

ಅನಿಲ್ ಕುಮಾರ್ ಜಿ. Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರಿಂದ ಪಾರಾಗಲು ಅನೇಕರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆಗಳನ್ನು ಸೇವಿಸಲು ಮುಂದಾಗಿದ್ದಾರೆ. ಹಾಗಾಗಿ ಈ ಮಾತ್ರೆಗಳಿಗೆ ಬೇಡಿಕೆ ಹೆಚ್ಚಿದ್ದು, ಜಿಲ್ಲಾ ಆಯುಷ್ ಇಲಾಖೆಯು ಹೆಚ್ಚುವರಿ 4 ಲಕ್ಷ ಮಾತ್ರೆಗಳಿಗೆ ಬೇಡಿಕೆ ಸಲ್ಲಿಸಿದೆ.

ಕೊರೊನಾ ಕಾರಣಕ್ಕೆ ಜಿಲ್ಲಾ ಆಯುಷ್ ಇಲಾಖೆಗೆ 56 ಸಾವಿರ ಮಾತ್ರೆಗಳು ಬಂದಿದ್ದು, ಜಿಲ್ಲೆಯಲ್ಲಿ ವಿತರಿಸಲಾಗಿದೆ. ಬಹುಪಾಲು ಮಾತ್ರೆಗಳು ಪೊಲೀಸ್, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ, ಬೆಸ್ಕಾಂ, ತಹಶೀಲ್ದಾರ್ ಕಚೇರಿ, ಆರೋಗ್ಯ ಸಿಬ್ಬಂದಿಗೆ ಹಂಚಲಾಗಿದೆ. ಉಚಿತವಾಗಿ ಔಷಧ ವಿತರಿಸುತ್ತಿದ್ದು, ಬೇಡಿಕೆ ಹೆಚ್ಚಿದ್ದು, ಮತ್ತಷ್ಟು ಔಷಧಗಳ ಪೂರೈಕೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

4 ಲಕ್ಷಕ್ಕೆ ಬೇಡಿಕೆ: ಆಯುರ್ವೇದಿಕ್ ಮಾತ್ರೆಗಳಿಗೆ ಸಾರ್ವಜನಿಕರಿಂದಲೂ ಬೇಡಿಕೆ ಬಂದಿದೆ. ಹಾಗಾಗಿ ಜಿಲ್ಲಾ ಆಯುಷ್ ಇಲಾಖೆಯು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2 ಲಕ್ಷ ಮಾತ್ರೆಗಳನ್ನು ನೀಡಲು ತೀರ್ಮಾನಿಸಿದೆ. ಇದಕ್ಕಾಗಿ ಮಹಾನಗರ ಪಾಲಿಕೆ ಆಯುಕ್ತರಿಗೆ 2 ಲಕ್ಷ, ಜಿಲ್ಲಾಡಳಿತಕ್ಕೆ 1 ಲಕ್ಷ, ಸರ್ಕಾರಕ್ಕೆ 1 ಲಕ್ಷ ಮಾತ್ರೆಗಳಿಗೆ ಬೇಡಿಕೆ ಸಲ್ಲಿಸಿದೆ.

3 ಮಾತ್ರೆಗಳು: ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆರ್ಸೆನಿಕ್ ಆಲ್ಬಂ 30 (ಹೋಮಿಯೋಪತಿ), ಸಂಶಮನವಟಿ (ಆಯುರ್ವೇದ) ಹಾಗೂ ಆರ್ಕೆ ಅಝೀಬ್ (ಯುನಾನಿ) ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ಆಯುಷ್ ಇಲಾಖೆ ವ್ಯಾಪ್ತಿಯ 30 ಚಿಕಿತ್ಸಾಲಯಗಳ ಮೂಲಕ ಅವಶ್ಯಕತೆ ಇರುವವರಿಗೆ ವಿತರಿಸಲಾಗುತ್ತಿದೆ.

ಹೇಗೆ ಸೇವಿಸಬೇಕು: ಸಂಶಮನವಟಿ ಮಾತ್ರೆಯನ್ನು ಬಿಸಿ ನೀರಿನೊಂದಿಗೆ 15 ದಿನಗಳವರೆಗೆ ದಿನಕ್ಕೆ ಎರಡು ಬಾರಿಯಂತೆ ತೆಗೆದುಕೊಳ್ಳಬೇಕು.  ಆರ್ಸೆನಿಕ್ ಆಲ್ಬಂ ಮಾತ್ರೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿರಂತರವಾಗಿ ಮೂರು ದಿನ ತೆಗೆದುಕೊಳ್ಳಬೇಕು. ಮತ್ತೆ ಅದನ್ನು ಒಂದು ತಿಂಗಳ ನಂತರ ಪಡೆಯಬೇಕು. ಮಾತ್ರೆ ನುಂಗಿದ ಬಳಿಕ ಅರ್ಧ ಗಂಟೆ ಏನನ್ನೂ ಸೇವಿಸಬಾರದು. ಆರ್ಕೆ ಅಝೀಬ್ ಮಾತ್ರೆಯನ್ನು 2 ಹನಿ ಬಿಸಿ ನೀರಿಗೆ ಹಾಕಿ ಹಬೆ ತೆಗೆದುಕೊಳ್ಳಬೇಕು. ಇಲ್ಲವೇ ಕರವಸ್ತ್ರಕ್ಕೆ ಹಾಕಿಕೊಂಡು ವಾಸನೆ ಪಡೆಯಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಚ್.ಸಂಜೀವಮೂರ್ತಿ ತಿಳಿಸಿದರು.

300 ಮಂದಿ ಭೇಟಿ: ಆಯುರ್ವೇದಿಕ್‌ ಮಾತ್ರೆಗಳಿಗಾಗಿ ಪ್ರತಿದಿನ ಸರಾಸರಿ 300 ಮಂದಿ ಆಯುಷ್‌ ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ಒಮ್ಮೊಮ್ಮೆ ಈ ಸಂಖ್ಯೆ 500 ದಾಟುತ್ತದೆ. ಇವರೆಲ್ಲರಿಗೂ ನೀಡುವುದು ಕಷ್ಟವಾಗುತ್ತಿದೆ. ಹಾಗಾಗಿ ಹೆಚ್ಚಿನ ಮಾತ್ರೆಗಳು ಪೂರೈಕೆಯಾದಲ್ಲಿ ಬೇಡಿಕೆಗೆ ತಕ್ಕಂತೆ ನೀಡಲು ಅನುಕೂಲ ವಾಗುತ್ತದೆ ಎಂದು ಹೇಳಿದರು.

***

ಅರಿಸಿನದಲ್ಲಿ ಔಷಧಿ ಗುಣ
ಕೊರೊನಾದ ವಿರುದ್ಧ ಹೋರಾಡುವಲ್ಲಿ ಅರಿಸಿನ ಮುಖ್ಯವಾದ ಪಾತ್ರ ವಹಿಸುತ್ತದೆ. ಅರಿಸಿನದಲ್ಲಿ ಪೌಷ್ಟಿಕಾಂಶದ ಅಂಶಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಸಮೃದ್ಧವಾಗಿವೆ. ಅರಿಸಿನವನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ದೇಹದಲ್ಲಿ ಔಷಧೀಯ ಗುಣಮಟ್ಟ ಹೆಚ್ಚಾಗುತ್ತದೆ.

ಅರಿಸಿನವನ್ನು ಬೆಚ್ಚಗಿನ ನೀರಿನಲ್ಲಿ ಬೆರಸಿ ಕುಡಿಯುವುದರಿಂದ ಗಂಟಲಿನ ಸೋಂಕು ನಿವಾರಣೆಯಾಗುತ್ತದೆ. ಒಂದು ಲೋಟ ಬಿಸಿ ನೀರಿಗೆ ಐದಾರು ತುಳಸಿ ಎಲೆ ಹಾಕಿ ತಣ್ಣಗಾದ ನಂತರ ಕುಡಿಯಬೇಕು. ಅಮೃತಬಳ್ಳಿಯನ್ನು ಒಂದು ಲೋಟ ನೀರಿಗೆ ಹಾಕಿ ಚನ್ನಾಗಿ ಕುದಿಸಿ, ಕಷಾಯ ತಯಾರಿಸಿ ಕುಡಿಯಬೇಕು. ಶುಂಠಿ, ಕರಿಮೆಣಸು, ಪತ್ರೆ ಕಷಾಯ, ನಿಂಬೆಹಣ್ಣು ಹೆಚ್ಚು ಸೇವನೆ ಮಾಡುವುದರಿಂದ ಬಹುಪಾಲು ರೋಗಗಳಿಂದ ದೂರ ಇರಬಹುದು ಎನ್ನುವುದು ಆಯುಷ್ ವೈದ್ಯರ ಸಲಹೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು