ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಿರಿ– ವಕೀಲ ಪ್ರೊ.ರವಿವರ್ಮಕುಮಾರ್‌

ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್‌ ಟೀಕೆ
Published 14 ಏಪ್ರಿಲ್ 2024, 4:49 IST
Last Updated 14 ಏಪ್ರಿಲ್ 2024, 4:49 IST
ಅಕ್ಷರ ಗಾತ್ರ

ತುಮಕೂರು: ದ್ವೇಷ ರಾಜಕಾರಣ ಮಾಡುವ, ಅತ್ಯಂತ ಭ್ರಷ್ಟ ಪಕ್ಷ ಬಿಜೆಪಿ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ವಾಧಿಕಾರಿ ಧೋರಣೆಯಿಂದ ರಾಷ್ಟ್ರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದು ವಕೀಲ ಪ್ರೊ.ರವಿವರ್ಮಕುಮಾರ್‌ ಇಲ್ಲಿ ಶನಿವಾರ ಮನವಿ ಮಾಡಿದರು.

‘ಭ್ರಷ್ಟ, ಜನ ವಿರೋಧಿ ಕೇಂದ್ರ ಸರ್ಕಾರವನ್ನು ಬುಡ ಸಮೇತ ಕಿತ್ತೊಗೆದು, ಹೊಸ ಸರ್ಕಾರದ ಅಸ್ತಿತ್ವಕ್ಕೆ ಅಣಿಯಾಗಬೇಕು. ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅವರಿಗೆ ಅವಕಾಶ ಕೊಟ್ಟರೆ ಮನುಸ್ಮೃತಿ ಜಾರಿಗೆ ತರುತ್ತಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ, ಕಪ್ಪು ಹಣ ವಾಪಸ್, ರೈತರ ಆದಾಯ ದ್ವಿಗುಣ ಸೇರಿದಂತೆ ಯಾವುದೇ ಭರವಸೆ ಈಡೇರಿಲ್ಲ. ಬಿಜೆಪಿಗೆ 2018ರ ಹೊತ್ತಿಗೆ ತನ್ನ ದಿವಾಳಿತನದ ಅರಿವಾಗಿ ಚುನಾವಣಾ ಬಾಂಡ್‌ ಯೋಜನೆ ಜಾರಿಗೆ ಮುಂದಾಯಿತು. ದೇಣಿಗೆ ಹಣದಲ್ಲಿ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ₹25 ಕೋಟಿ ನೀಡಿ, 2019ರ ಚುನಾವಣೆಯಲ್ಲಿ ಗೆಲುವು ಸಾಧಿಸಿತು ಎಂದು ಆರೋಪಿಸಿದರು.

ಎಲ್ಲ ವಿಷಯಗಳನ್ನು ಗೌಪ್ಯವಾಗಿ ಇಡುವುದು ಪ್ರಧಾನಿ ಮೋದಿಯ ದೊಡ್ಡ ಸಾಧನೆ. ಕೋವಿಡ್‌ ಸಮಯದಲ್ಲಿ ಶುರು ಮಾಡಿದ ಪಿ.ಎಂ ಕೇರ್ಸ್‌ ನಿಧಿಯಲ್ಲಿ ಎಷ್ಟು ಖರ್ಚಾಯಿತು, ಹೇಗೆ ಖರ್ಚಾಯಿತು, ಯಾರಿಗೆ ಖರ್ಚು ಮಾಡಿದರು ಎಂಬ ಮಾಹಿತಿಯನ್ನೇ ನೀಡಿಲ್ಲ. ಮೋದಿ ‘ಇದು ಸರ್ಕಾರದ ನಿಧಿಯಲ್ಲ, ಮಾಹಿತಿ ಕೊಡಲು ಆಗುವುದಿಲ್ಲ’ ಎಂದು ಎಲ್ಲ ಪ್ರಶ್ನೆಗಳಿಗೆ ತಿಲಾಂಜಲಿ ಹಾಡಿದ್ದಾರೆ ಎಂದು ಟೀಕಿಸಿದರು.

ಮೋದಿಯ ಭರವಸೆಗಳ‌ ಸುಳ್ಳಿನ ಕಂತೆಗೆ ಮಹಿಳಾ ಮೀಸಲಾತಿ ಹೊಸ ಸೇರ್ಪಡೆ. ಮಹಿಳೆಯರಿಗೆ ಸದ್ಯಕ್ಕೆ ಮೀಸಲಾತಿ ಸಿಗುವುದಿಲ್ಲ. ಕ್ಷೇತ್ರ ಮರು ವಿಂಗಡಣೆಯಾದರೆ ಮಾತ್ರ ಮೀಸಲಾತಿ ಸೌಲಭ್ಯ ದೊರೆಯುತ್ತದೆ. ಕ್ಷೇತ್ರ ಮರು ವಿಂಗಡಣೆಗೆ ಜನಗಣತಿ ನಡೆಯಬೇಕು. 2025ರ ನಂತರ ಕ್ಷೇತ್ರ ಮರು ವಿಂಗಡಣೆ ಆಗಬಹುದು. ಅಲ್ಲಿಯವರೆಗೆ ಮೀಸಲಾತಿ ಸಿಗುವುದಿಲ್ಲ ಎಂದು ಹೇಳಿದರು.

ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಈ ಹಿಂದೆ ಚುನಾವಣೆಯ ಸಮಯದಲ್ಲಿ ನಗರಕ್ಕೆ ಭೇಟಿ ನೀಡಿದಾಗ ‘ಯಾವುದೇ ಕಾರಣಕ್ಕೂ ಬಿಜೆಪಿ ಜತೆಗೆ ಹೋಗುವುದಿಲ್ಲ’ ಎಂದಿದ್ದರು. ಇವತ್ತು ಅದೇ ‘ಮೈತ್ರಿ’ಯ ಭಾಗವಾಗಿದ್ದಾರೆ. ಸುಳ್ಳುಗಾರ, ಅವಕಾಶವಾದಿ ರಾಜಕಾರಣಿ‌. ಕೇವಲ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿದ್ದಾರೆ. ಅವರ ಪಕ್ಷ ಸರ್ವನಾಶ ಆಗುತ್ತದೆ ಎಂದು ಗೊತ್ತಾಗಿ ಅಳಿಯನನ್ನು ಬಿಜೆಪಿಯಿಂದ ಕಣಕ್ಕೆ ಇಳಿಸಿದ್ದಾರೆ’ ಎಂದು ತಿಳಿಸಿದರು.

ವೈದ್ಯ ಬಸವರಾಜ್, ಮುಖಂಡರಾದ ಎಚ್.ವಿ.ಮಂಜುನಾಥ್, ನಟರಾಜಪ್ಪ ಹಾಜರಿದ್ದರು.

ಜಾಗ ಇಲ್ಲದೆ ಹಕ್ಕುಪತ್ರ: ದೊರೈರಾಜ್‌

‘ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ವರಿಗೂ ಮೀಸಲಾತಿಯ ಸೌಲಭ್ಯ ಕೊಟ್ಟಿದ್ದೇವೆ ಎಂದು ಹೇಳುವ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ಹಿಂದೆ ಬಿದ್ದಿದೆ. ಸಾವಿರಾರು‌ ಉದ್ಯೋಗ ಸೃಷ್ಟಿ ಮಾಡುವ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದೆ. ಇದು ಜಾಗ ಇಲ್ಲದೆ ಹಕ್ಕುಪತ್ರ ಕೊಟ್ಟಂತಾಗಿದೆ’ ಎಂದು ಚಿಂತಕ ಕೆ.ದೊರೈರಾಜ್‌ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ನೀತಿಗಳು ಬಡವರನ್ನು ಆರ್ಥಿಕ ಗುಲಾಮಗಿರಿಗೆ ತಳ್ಳುತ್ತಿವೆ. ಗುತ್ತಿಗೆ ಆಧಾರದ ಮೇಲೆ ದುಡಿಸಿಕೊಳ್ಳುವುದು ಜಾಸ್ತಿಯಾಗುತ್ತಿದೆ. ಬಂಡವಾಳ ಶಾಹಿಗಳಿಗೆ ಬೇಕಾದ ರೀತಿಯಲ್ಲಿ ಕಾರ್ಮಿಕರ ಕಾಯ್ದೆಗಳನ್ನು ತಿದ್ದುಪಡಿ ಮಾಡಿದ್ದಾರೆ. ಪ್ರಶ್ನೆ ಮಾಡಿದವರನ್ನು ಜೈಲಿಗೆ ಹಾಕಿ ಹೋರಾಟ ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಆರ್‌ಎಸ್‌ಎಸ್‌ ಎಬಿವಿಪಿ ಸಂಘಟನೆಗಳು ಯುವ ಸಮೂಹದಲ್ಲಿ ಜಾತಿ ಧರ್ಮದ ಅಮಲು ತುಂಬುತ್ತಿವೆ. ಕೋಮುವಾದ ಎಂಬ ಭೂತ ಬಿಟ್ಟು ತಮ್ಮ ಪರವಾಗಿ ಮತ ಹಾಕಿಸಿಕೊಳ್ಳುತ್ತಿದೆ. ಇದು ನಾಗರಿಕ ಸಮಾಜಕ್ಕೆ ಆತಂಕಕಾರಿ ಎಂದರು. ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡ ಅವರಿಗೆ ಬೌದ್ಧಿಕ ಸಾಮರ್ಥ್ಯ ಜನಪರ ಕಾಳಜಿ ಸಂಸತ್ತಿನಲ್ಲಿ ಧ್ವನಿ ಎತ್ತುವ ಜ್ಞಾನ ಇದೆ. ಅವರೇ ನಮ್ಮ ಮುಂದಿರುವ ಆಯ್ಕೆ. ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸುವಂತೆ ಕೇಳಿಕೊಂಡರು. ಲೇಖಕಿ ಬಾ.ಹ.ರಮಾಕುಮಾರಿ ‘ಸದ್ಯ ಪ್ರಜಾಪ್ರಭುತ್ವದ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಗಾಂಧಿ ಅಂಬೇಡ್ಕರ್‌ ಪ್ರಶ್ನೆ ಮಾಡುವ ಸತ್ಯದ ಹಾದಿಯಲ್ಲಿ ನಡೆಯುವುದನ್ನು ಹೇಳಿದ್ದಾರೆ. ಪ್ರಸ್ತುತ ಸತ್ಯ ಹೇಳಿದರೆ ಪ್ರಶ್ನೆ ಮಾಡಿದರೆ ನಮ್ಮ ಸ್ಥಿತಿ ಏನಾಗುತ್ತದೆ‌ ಎಂದು ಹೆದರಿಕೊಳ್ಳುವ ಸಮಯ ಬಂದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT