ತುಮಕೂರು: ಬುಗುಡನಹಳ್ಳಿ ಕೆರೆಯಲ್ಲಿ ಅಳವಡಿಸಿದ್ದ ಮೂರು ಮೋಟಾರ್ ಪಂಪ್‌ಗಳು ವಾರದಿಂದ ಕೆಟ್ಟು ನಿಂತಿದ್ದು, ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
ಬುಗುಡನಹಳ್ಳಿ ಕೆರೆಯಿಂದ ನೀರು ಪಂಪ್‌ಮಾಡಿ, ನಂತರ ಶುದ್ಧೀಕರಿಸಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಒಮ್ಮೆಲೆ ಎಲ್ಲ ಮೂರು ಪಂಪ್‌ಗಳು ಹಾಳಾಗಿದ್ದು, ಒಂದು ವಾರದಿಂದ ದುರಸ್ತಿ ಮಾಡಿಸಲು ಮಹಾನಗರ ಪಾಲಿಕೆ ಅಧಿಕಾರಿಗಳು ಪರದಾಡುತ್ತಿದ್ದಾರೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಸರಿಪಡಿಸಿ, ಅವುಗಳನ್ನು ಅಳವಡಿಸಿ ನೀರು ಸರಬರಾಜು ಮಾಡಲು ಇನ್ನೂ ನಾಲ್ಕೈದು ದಿನಗಳು ಹಿಡಿಯುತ್ತದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಈ ಮೋಟಾರ್ ಪಂಪ್‌ಗಳ ದುರಸ್ತಿಗೆ ಬೇಕಾದ ಬಿಡಿ ಭಾಗಗಳನ್ನು ಅಹಮದಾಬಾದ್‌ನಿಂದ ತರಿಸಬೇಕಿದ್ದು, ಅಲ್ಲಿಂದ ಬಂದ ನಂತರ ದುರಸ್ತಿ ಮಾಡಬೇಕಿದೆ. ನಗರದಲ್ಲಿ ಒಂದು ಹಾಗೂ ಬೆಂಗಳೂರಿನಲ್ಲಿ ಎರಡು ಮೋಟಾರ್ ಪಂಪ್ ರಿಪೇರಿ ಮಾಡಲಾಗುತ್ತಿದೆ. ಸೋಮವಾರದ ವೇಳೆಗೆ ಒಂದು ಪಂಪ್ ರಿಪೇರಿಯಾಗಬಹುದು. ಉಳಿದೆರಡು ಪಂಪ್‌ಗಳನ್ನು ಸರಿಪಡಿಸಲು ಇನ್ನಷ್ಟು ಸಮಯ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.
ಸಾಮಾನ್ಯವಾಗಿ ಒಂದು ಮೋಟಾರ್ ಪಂಪ್ ಕೈಕೊಟ್ಟರೆ ಉಳಿದ ಎರಡರಲ್ಲಿ ನೀರು ಸರಬರಾಜು ಮಾಡಲಾಗುತಿತ್ತು. ಆದರೆ ಈ ಬಾರಿ ಮೂರೂ ಪಂಪ್‌ಗಳು ಒಟ್ಟಿಗೆ ಕೈಕೊಟ್ಟಿರುವುದು ಪಾಲಿಕೆ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 2019ರಲ್ಲಿ ಜಲಮಂಡಲಿ ಈ ಮೋಟಾರ್ ಪಂಪ್‌ಗಳನ್ನು ಅಳವಡಿಸಿತ್ತು.
ಪರ್ಯಾಯ ವ್ಯವಸ್ಥೆ: ನಗರದ ಹೊರ ವಲಯದ ಕುಪ್ಪೂರು ಸಮೀಪ ಅಳವಡಿಸಿರುವ ಮೋಟಾರ್ ಪಂಪ್‌ಗಳಿಂದ ನೀರನ್ನು ಪಂಪ್‌ಮಾಡಿ ಸಿ.ಎನ್.ಆರ್ ಪಾಳ್ಯದ ಬಳಿ ಇರುವ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿ ಬಿಡಲಾಗುತ್ತಿದೆ. ಈ ಹಿಂದೆ ಇಲ್ಲಿರುವ 5 ಪಂಪ್‌ಗಳ ಮೂಲಕ 16 ಗಂಟೆ ಕಾಲ ನೀರು ಪಂಪ್ ಮಾಡಲಾಗುತಿತ್ತು. ಆದರೆ ಈಗ 24 ಗಂಟೆಗಳ ಕಾಲ ಪಂಪ್ ಮಾಡುತ್ತಿದ್ದು, ಇವುಗಳ ಮೇಲೂ ಒತ್ತಡ ಹೆಚ್ಚಾಗಿದೆ.
ನಗರಕ್ಕೆ ಪ್ರತಿ ದಿನವೂ 60ರಿಂದ 70 ಎಂಎಲ್‌ಡಿ ನೀರಿಗೆ ಬೇಡಿಕೆ ಇದ್ದು, ಸಿ.ಎನ್.ಆರ್ ಪಾಳ್ಯದಿಂದ 35ರಿಂದ 40 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಕೊರತೆ ನೀರನ್ನು ನಗರದಲ್ಲಿರುವ ಕೊಳವೆ ಬಾವಿಗಳ ಮೂಲಕ ಪೂರೈಸಲಾಗುತ್ತಿದೆ. ಆದರೆ ಬೇಡಿಕೆಯಷ್ಟು ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಕೆಲವು ಬಡಾವಣೆಗಳಿಗೆ ಅಲ್ಪ ಪ್ರಮಾಣದಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.
ದುರಸ್ತಿಗೆ ಪ್ರಯತ್ನ ಮೋಟಾರ್ ಪಂಪ್‌ಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದ್ದು ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ. ಸದ್ಯಕ್ಕೆ ಸಿ.ಎನ್.ಆರ್ ಪಾಳ್ಯದಿಂದ ನೀರು ಪಂಪ್ ಮಾಡಲಾಗುತ್ತಿದೆ. ನಗರದಲ್ಲಿರುವ 631 ಕೊಳವೆ ಬಾವಿಗಳಿಂದ 22 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಸ್ಪಷ್ಟಪಡಿಸಿದರು. 2019ರಲ್ಲಿ ಜಲಮಂಡಲಿಯು ಮೋಟಾರ್ ಪಂಪ್ ಅಳವಡಿಸಿಕೊಟ್ಟಿದ್ದು ಅಂದಿನಿಂದಲೂ ಸಮಸ್ಯೆ ಇದ್ದೇ ಇದೆ. ಸರಿಯಾದ ವ್ಯವಸ್ಥೆಯಲ್ಲಿ ಅಳವಡಿಸದಿರುವುದು ಸಮಸ್ಯೆಗೆ ಕಾರಣವಾಗಿದೆ. ವಾರಕ್ಕೆ ಒಮ್ಮೆ ಕೆಟ್ಟು ನಿಲ್ಲುತ್ತವೆ. ಪದೇಪದೇ ದುರಸ್ತಿ ಮಾಡಿಸುವುದೇ ಕೆಲಸವಾಗಿದೆ. ಆದರೆ ಸಿ.ಎನ್.ಆರ್ ಪಾಳ್ಯದಲ್ಲಿ 2013ರಲ್ಲಿ ಅಳವಡಿಸಿರುವ ಮೋಟಾರ್ ಪಂಪ್‌ಗಳು ಚೆನ್ನಾಗಿ ಕೆಲಸ ನಿರ್ವಹಿಸುತ್ತಿವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.