ಬುಧವಾರ, ಆಗಸ್ಟ್ 10, 2022
25 °C
ಚಿಕ್ಕನಾಯಕನಹಳ್ಳಿ ಸಂತೆಯಲ್ಲಿ ಭರ್ಜರಿ ವ್ಯಾ‍ಪಾರ: ದುಪ್ಪಟ್ಟು ದರಕ್ಕೆ ಬೆಸ್ತುಬಿದ್ದ ಖರೀದಾರರು

ಕುರಿ, ಮೇಕೆ ಖರೀದಿಗೆ ಮುಗಿಬಿದ್ದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕನಾಯಕನಹಳ್ಳಿ: ‘ಮಾಸ್ಕ್ ಎಂಬುದು ಕೆಲವರಿಗಷ್ಟೇ ಸೀಮಿತ, ಎಸ್.ಓ.ಪಿ.ಗೆ ಇಲ್ಲಿ ಬೆಲೆಯೇ ಇಲ್ಲ. ಇಲ್ಲಿ ಏನೇದಿದ್ದರೂ ಕುರಿಮರಿಗಳ ಕಲರವ. ಟಗರು, ಮೇಕೆಗಳ ಕೂಗಾಟ. ವ್ಯಾಪಾರಸ್ಥರ ಗಲಾಟೆ, ಲಕ್ಷಾಂತರ ರೂಪಾಯಿ ವಹಿವಾಟು. ಅದಕ್ಕೆ ನೂರಾರು ಜನರ ಪರದಾಟ...’

ಇಲ್ಲಿನ ಮಾರುಕಟ್ಟೆಯಲ್ಲಿ ಕಂಡುಬಂದ ದೃಶ್ಯಗಳಿವು. ಕಳೆದ ವಾರ ಕುರಿ ಸಂತೆ ಇರಲಿ, ತರಕಾರಿ ಸಂತೆಗೆ ಮುಕ್ತವಾದ ವಾತಾವರಣವಿಲ್ಲದೆ ವ್ಯಾಪಾರಸ್ಥರು ಹೈರಾಣಾಗಿದ್ದರು. ಯುಗಾದಿ ಹಬ್ಬದ ಸಂಭ್ರಮಾಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಿ ಎಂದು ತಾಲ್ಲೂಕು ಆಡಳಿತ ಕಂಡೂ ಕಾಣದಂತೆ ಇದ್ದಿದ್ದರಿಂದ ಜನರು, ತುಂಬಾ ಲಗುಬಗೆಯಿಂದ ಹಬ್ಬದ ಸಂತೆ ಮಾಡತೊಡಗಿದ್ದರು. ವಿಶೇಷವಾಗಿ ಕುರಿ ಸಂತೆಯಂತೂ ಸೋಮವಾರ ಬೆಳಿಗ್ಗೆ 6 ಗಂಟೆಯಿಂದಲೇ ಆರಂಭವಾಗಿತ್ತು.

ಯುಗಾದಿಗೆ ಮೆರುಗು ತಂದು ಕೊಡುವುದೇ ಮರುದಿನದ ವರ್ಷದ ತೊಡಕು. ಇದರ ಸಿದ್ಧತೆಗೆ ಕುರಿ, ಮೇಕೆ ಮಾರಲು ಹಾಗೂ ಕೊಳ್ಳಲು ಜನರು ಹಳ್ಳಿಗಳಿಂದ ಪಟ್ಟಣದ ಎಪಿಎಂಸಿ ಕುರಿ ಸಂತೆಗೆ ಆಗಮಿಸಿದ್ದರು. ಈ ವೇಳೆ ಕುರಿ ಮಾರಾಟದ ಬೆಲೆ ಹೆಚ್ಚಾಗಿಯೂ ಇತ್ತು.

ಯುಗಾದಿ ಹಬ್ಬದ ಮಾರಾಟಕ್ಕಾಗಿಯೇ ಕೆಲವು ರೈತರು ಕುರಿ, ಮೇಕೆಗಳನ್ನು ಸಾಕುತ್ತಾರೆ. ಉಪ ಕಸುಬುಗಳನ್ನು ಮಾಡುವ ರೈತರು ಕುರಿ, ಮೇಕೆಗಳನ್ನು ಸಾಕಿ ಮಾರಾಟ ಮಾಡಿ ಈ ಮೂಲಕವೂ ತಮ್ಮ ಜೀವನ ನಡೆಸುತ್ತಾರೆ. ತಾಲ್ಲೂಕಿನ ಗೋಡೆಕೆರೆ, ಸೊಂಡೇನಹಳ್ಳಿ, ತಿಮ್ಮನಹಳ್ಳಿ, ಕಂದಿಕೆರೆ, ಕಾತ್ರಿಕೆಹಾಳ್ ಹಾಗೂ ಕುಪ್ಪೂರು ಭಾಗಗಳಿಂದ ಹೆಚ್ಚಿನ ರೈತರು ತಾವು ಸಾಕಿರುವ ಕುರಿ, ಮೇಕೆಗಳನ್ನು ಮಾರಲು ಪಟ್ಟಣದ ಎ.ಪಿ.ಎಂ.ಸಿ ಕುರಿ ಸಂತೆಗೆ ಮುಂಜಾನೆಯೇ ಆಗಮಿಸಿದ್ದರು.

‘ಪ್ರತಿವಾರ ಇದ್ದ ಕುರಿ ಬೆಲೆಗಿಂತ ಈ ವಾರ ಬೆಲೆಯನ್ನು ಮಾರಾಟಗಾರರು ಹೆಚ್ಚಾಗಿಯೇ ಹೇಳುತ್ತಿದ್ದರು. 18 ರಿಂದ 20 ಕೆ.ಜಿ.ತೂಗುವ ಕುರಿ, ಮೇಕೆಗೆ ₹ 10 ಸಾವಿರದಿಂದ ₹ 15 ಸಾವಿರ ಬೆಲೆಗೆ ಮಾರಾಟವಾಗುತ್ತಿದೆ ಎಂದು ಸೊಂಡೇನಹಳ್ಳಿ ಸಣ್ಣೇಗೌಡ’ ತಿಳಿಸಿದರು.

ಕುರಿ, ಮೇಕೆ ಬೆಲೆ ಹೆಚ್ಚಳವಾದರೆ ಮಟನ್ ಅಂಗಡಿಗಳಲ್ಲಿ ಮಟನ್ ಬೆಲೆಯೂ ಹೆಚ್ಚಾಗಲಿದೆ. ಒಂದು ಕೆಜಿಗೆ ₹ 600ನಿಂದ ₹ 700 ವರೆಗೆ ಮಟನ್ ಮಾರಾಟವಾಗುತ್ತಿದೆ. ಆದರೂ ಜನರು ಕುರಿ, ಮೇಕೆಗಳನ್ನು ಕೊಳ್ಳಲು ಮುಂದಾಗುತ್ತಾರೆ. ಕೆಲವರು ಮಟನ್ ಸಹವಾಸವೇ ಬೇಡ ಕಡಿಮೆ ಬೆಲೆಗೆ ಸಿಗುವ ಕೋಳಿಯನ್ನೇ ಕೊಳ್ಳೋಣ ಎಂದು ಮಾತನಾಡಿಕೊಳ್ಳುತ್ತಿದ್ದರು. ಪಟ್ಟಣದ ಕೋಳಿ ಅಂಗಡಿಗಳಲ್ಲೂ ಜನರು ತುಂಬಿರುತ್ತಾರೆ. ಮಟನ್ ಬೆಲೆ ಹೆಚ್ಚಾದಂತೆ ಕೋಳಿ ಬೆಲೆಯೂ ಹೆಚ್ಚಾಗುವ ನಿರೀಕ್ಷೆ ಇದೆ.

ಯುಗಾದಿಗಾಗಿಯೇ ಪಟ್ಟಣ ಮಾತ್ರವಲ್ಲದೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಮಟನ್ ಚೀಟಿ ಹಾಕಿ ತಿಂಗಳಿಗೊಮ್ಮೆ ಇಂತಿಷ್ಟು ಹಣ ಕೂಡಿಟ್ಟು ಹಬ್ಬದ ದಿನದಂದು ಕುರಿ, ಮೇಕೆ ತಂದು ಚೀಟಿ ಹಾಕಿದ ಜನರೆಲ್ಲೂ ಭಾಗ ಮಾಡಿಕೊಂಡು ಮಟನ್ ಪಡೆಯುವುದು ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು