ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಸಾವಿನ ಸಂಖ್ಯೆ

ಮತ್ತೆ ಜಿಲ್ಲೆಯಲ್ಲಿ 26 ಮಂದಿಗೆ ಸೋಂಕು; ಇನ್ನೂ ಬಾಕಿ ಇದೆ 2,526 ಮಾದರಿಗಳ ವರದಿ
Last Updated 1 ಜುಲೈ 2020, 16:52 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಬುಧವಾರ ಮತ್ತೆ 26 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದ್ದು 7 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಇಡೀ ಜಿಲ್ಲೆಯ ಎಲ್ಲೆಡೆ ಸೋಂಕು ಈಗಾಗಲೇ ವ್ಯಾಪಿಸಿದೆ. ಗ್ರಾಮೀಣ ಭಾಗಗಳಲ್ಲಿ ಪತ್ತೆಯಾಗಿರುವ ಸೋಂಕು ತನ್ನ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ನಗರದ ಮರಳೂರು ದಿಣ್ಣೆಯ 11 ವರ್ಷದ ಬಾಲಕಿ ರಾಯಚೂರಿನಿಂದ ನಗರಕ್ಕೆ ಬಂದಿದ್ದು ಇವರಲ್ಲಿ ಸೋಂಕು ಪತ್ತೆಯಾಗಿದೆ. ಅಶೋಕ ನಗರದ 27ವರ್ಷದ ಮಹಿಳೆ, ಡಿ.ಎಸ್‌.ಪಾಳ್ಯದ 60 ವರ್ಷದ ಮಹಿಳೆ, ಸಿ.ಎಂ.ಬಡಾವಣೆಯ 54 ವರ್ಷದ ಪುರುಷ, ಸಿದ್ಧಗಂಗಾ ಬಡಾವಣೆಯ 34 ವರ್ಷದ ಪುರುಷ, ಸಿದ್ಧಾರ್ಥನಗದ 47 ವರ್ಷದ ಮಹಿಳೆಯಲ್ಲಿ ಸೋಂಕು ದೃಢವಾಗಿದೆ. ಒಡಿಶಾದಿಂದ ನಗರಕ್ಕೆ ಬಂದ ಮಂಚಕಲ್ ಕುಪ್ಪೆಯ 39 ವರ್ಷದ ಪುರುಷ, ಹೆಬ್ಬಾಕದ 45 ವರ್ಷದ ವ್ಯಕ್ತಿಯಲ್ಲೂ ಕೊರೊನಾ ಪತ್ತೆಯಾಗಿದೆ.

26 ಮಂದಿಯನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಕಿ ಇದೆ 2,500 ವರದಿ: ಕೊರೊನಾ ಪ್ರಕರಣಗಳು ಮತ್ತಷ್ಟು ಹೆಚ್ಚುವುದು ಖಚಿತ. ಅದಕ್ಕೆ ಕಾರಣ ಇನ್ನೂ 2,526 ಮಾದರಿಗಳ ವರದಿಗಳು ಬಾಕಿ ಇವೆ. ಈ ವರದಿಗಳಲ್ಲಿ ಗಣನೀಯವಾಗಿ ಸೋಂಕಿತರು ಇದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಇದರ ಜತೆಗೆ ದಿನದಿಂದ ದಿನಕ್ಕೆ ಶಂಕಿತರ ಗಂಟಲು ಸ್ರಾವ ಸಂಗ್ರಹವೂ ಹೆಚ್ಚುತ್ತಿದೆ. ಬುಧವಾರ ಒಂದೇ ದಿನ 649 ಮಾದರಿಗಳನ್ನು ಸಂಗ್ರಹಿಸಲಾಗಿದೆ.

ತಾಲ್ಲೂಕು;ಸಂಖ್ಯೆ
ತುಮಕೂರು;8
ಶಿರಾ;2
ಪಾವಗಡ;3
ಮಧುಗಿರಿ;4
ಕುಣಿಗಲ್;6
ಗುಬ್ಬಿ;2
ಚಿ.ನಾ.ಹಳ್ಳಿ;1

***

10 ಮಂದಿ ಬಿಡುಗಡೆ

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ಮಂದಿ ರೋಗಿಗಳನ್ನು ಬುಧವಾರ ಬಿಡುಗಡೆ ಮಾಡಲಾಯಿತು. ಇವರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇವರೂ ಸೇರಿದಂತೆ ಜಿಲ್ಲೆಯಲ್ಲಿ 49 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ 83 ಸಕ್ರಿಯ ಪ್ರಕರಣಗಳು ಇವೆ.

***

ಜಿ.ಪಂ ಸ್ಯಾನಿಟೈಸ್

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಯಿತು. ಕುಣಿಗಲ್ ತಾಲ್ಲೂಕು ಜಿನ್ನಾಗರ ಗ್ರಾಮ ಪಂಚಾಯಿತಿ ಸಿಬ್ಬಂದಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಆ ಸಿಬ್ಬಂದಿ ಜಿಲ್ಲಾ ಪಂಚಾಯಿತಿ ಕಚೇರಿಗೆ ಬಂದಿರಬಹುದು ಎಂಬ ಶಂಕೆಯಿಂದ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಕಚೇರಿಯ ಒಳಗೆ ಮತ್ತು ಹೊರಗೆ ಸೋಂಕು ನಿವಾರಕ ಸಿಂಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT