ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಸಿದ್ಧಗಂಗಾ ಮಠದ ಹೋರಿ ₹ 1.10 ಲಕ್ಷಕ್ಕೆ ಮಾರಾಟ

ಕಳೆಗಟ್ಟುತ್ತಿದೆ ಜಾನುವಾರು ಜಾತ್ರೆ
Last Updated 14 ಫೆಬ್ರುವರಿ 2020, 11:00 IST
ಅಕ್ಷರ ಗಾತ್ರ
ADVERTISEMENT
""

ತುಮಕೂರು: ಎಷ್ಟು ಹಲ್ಲು ನೋಡು ಸರಿಯಾಗಿ... ಸುಳಿ ನೋಡು, ಏ... ಈ ದನಕ್ಕೆ ತುಟಿ ಇಲ್ಲ, ಬಾಲ ಮೋಟ, ಅಬ್ಬ ಏನ್‌ ಅಚ್ಚುಕಟ್ಟಾಗಿ ಕೊಂಬು ಎರೆದಿದ್ದಾರೆ. ರಾಸುಗಳ ಖರೀದಿಗೆ ಬಂದವರು ಅದರ ಅಂದ ಚೆಂದವನ್ನು ವರ್ಣಿಸುತ್ತಿದ್ದರೆ ‘ನೋಡಪ್ಪ ನಿನಗೆ ದನ ಇಷ್ಟ ಆದ್ರೆ ಸಂತೋಷ ಅಂತ ಹೇಳು’ ಎಂದು ದುಂಬಾಲು ಬೀಳುತ್ತಿದ್ದರು ದಲ್ಲಾಳಿಗಳು.

ಇದು ಸಿದ್ಧಗಂಗಾ ಮಠದ ಜಾತ್ರೆ ಬಯಲಿನಲ್ಲಿ ಆರಂಭವಾಗಿರುವ ಜಾನುವಾರುಗಳ ಜಾತ್ರೆಯಲ್ಲಿ ಕೇಳಿ ಬರುವ ಮಾತುಗಳಿವು.

ಜಾತ್ರೆಯಲ್ಲಿ ದನಕರುಗಳ ಮಾರಾಟಕ್ಕೆ ರೈತರ, ದಲ್ಲಾಳಿಗಳ ಹಿಂಡು ನೆರೆದಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ರಾಸುಗಳು ಇಲ್ಲಿವೆ. ಗೋಸಲ ಸಿದ್ದೇಶ್ವರ ವಸತಿ ನಿಲಯದ ಪಕ್ಕದ ಮೈದಾನದಲ್ಲಿ ರಾಸುಗಳದ್ದೇ ದರ್ಬಾರು ಎನ್ನುವಂತೆ ಆಗಿದೆ.

ಗುರುವಾರ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ರೈತ ಶಿವಪ್ಪ ₹ 1.10 ಲಕ್ಷಕ್ಕೆ ಮಠದ ಹೋರಿಗಳನ್ನು ಖರೀದಿಸಿದರು.

‘ಉಳುಮೆ ಮಾಡುವ ಎತ್ತುಗಳು ಕನಿಷ್ಠ ₹ 50 ಸಾವಿರದಿಂದ ₹ 2.50 ಲಕ್ಷದವರೆಗೆ ಬೆಲೆ ಬಾಳುತ್ತವೆ. ನಾವು ಈಗ ದನ ಸಾಕ್ತಾ ಇಲ್ಲ. ಆದರೂ ಮನಸ್ಸು ತಡೆಯಲ್ಲ. ಅದಕ್ಕೆ ನೋಡಿಕೊಂಡು ಹೋಗೋಣ ಅಂತ ಬಂದಿದ್ದೇವೆ’ ಎಂದು ಕೊರಟಗೆರೆ ತಾಲ್ಲೂಕಿನ ಕುರುಡುಗಾನಹಳ್ಳಿಯ ಮಲೆರಂಗಯ್ಯ ಮತ್ತು ತಿಮ್ಮರಾಯಪ್ಪ ಮಾಹಿತಿ ನೀಡಿದರು.

ತುಮಕೂರು ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಹಾಸನ ಹೀಗೆ ಹಳೇ ಮೈಸೂರು ಭಾಗದ ರೈತರು ಜಾನುವಾರು ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳ ರೈತರು ಸಹ ವ್ಯಾಪಾರಕ್ಕೆ ಬಂದಿದ್ದಾರೆ.

ರೈತರು, ಖರೀದಿದಾರರು ಹಾಗೂ ಮಧ್ಯವರ್ತಿಗಳ ಹೊಟ್ಟೆ ತಣಿಸಲು ತಟ್ಟೆ ಇಡ್ಲಿ ಅಂಗಡಿಗಳ ಸಾಲೇ ಇಲ್ಲಿ ಎದ್ದಿದೆ. ದನಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ಮೇವಿನ ವ್ಯವಸ್ಥೆಯನ್ನು ಮಾಲೀಕರೇ ಮಾಡಿಕೊಂಡಿದ್ದಾರೆ. ಸುಮಾರು ₹ 2 ಕೋಟಿಗಿಂತ ಹೆಚ್ಚು ವಹಿವಾಟು ನಡೆಯಬಹುದು ಎಂದು ಜಾನುವಾರು ಜಾತ್ರೆ ಸಂಘಟಕರು ತಿಳಿಸಿದರು.

ನೊಗ, ಮೂಗು ದಾರ, ಹಗ್ಗ, ಕಣ್ಣಿ ಕಡ್ಡಿ, ಜೂಲು, ಬಾರು ಕೋಲು, ಗೆಜ್ಜೆ– ಗಂಟೆ ಸರ, ಗೊಂಡೇವು ಹೀಗೆ ದನಗಳ ಮೇಕಪ್‌ ವಸ್ತುಗಳ ಮಾರಾಟಗಾರರು ಸಹ ಭರ್ಜರಿ ವ್ಯಾಪಾರ ಮಾಡುತ್ತಿದ್ದಾರೆ.

ಸುಳಿ ನೋಡಿ ಬೆಲೆ...
ಸಾರ್‌ ಮೊದಲು ದನಗಳ ಕೂಟು (ಜೋಡಿ) ನೋಡಲು ಚೆನ್ನಾಗಿರಬೇಕು. ಹಲ್ಲು ನೋಡಿ ವಯಸ್ಸನ್ನು ತಿಳಿದುಕೊಳ್ಳುತ್ತಾರೆ. ಗೊರಸು ನೋಡುತ್ತಾರೆ, ಸುಳಿ ನೋಡುತ್ತಾರೆ. ಕೆಲವರು ಸುಳಿ ನೋಡಿ ಬೆಲೆ ಕಟ್ಟುತ್ತಾರೆ. ಒಳ್ಳೆಯ ಹೆಣ್ಣು ನೋಡಿ ಹೇಗೆ ಮದುವೆ ಆಗುತ್ತಾರೋ ಇಲ್ಲಿಯೂ ಅದೇ ರೀತಿ ಬೀಜ ಕಟ್ಟಿಸುವಾಗ ಒಳ್ಳೆಯ ಜೋಡಿ ನೋಡಲಾಗುತ್ತದೆ ಎಂದು ಕಠಾರಿವೀರನಹಳ್ಳಿ ರೈತ ಹೊನ್ನೇಶಪ್ಪ ವಿವರಿಸಿದರು.

ಉಳುಮೆಗೆ, ಕಠಿಣ ಕೆಲಸಕ್ಕೆ ಒಳ್ಳೆಯ ದನಗಳು ಬೇಕು ಎಂದರೆ ಬೀಜ ಕಟ್ಟಿಸಿರಬೇಕು. ಅದರಲ್ಲೂ ಕೆಲವು ಒಂಟಿ ಬೀಜ ಇರುವ ದನ ಇರುತ್ತವೆ. ಅದನ್ನು ಪರೀಕ್ಷಿಸಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಎತ್ತುಗಳು ಸಮೃದ್ಧಿಯಾಗಿ ಬೆಳವಣಿಗೆ ಆಗುವುದಿಲ್ಲ ಎಂದರು.

ಭರ್ಜರಿ ಹೋರಿಗಳ ಮಾಸ್ಟರ್‌
ನಿವೃತ್ತ ತಹಶೀಲ್ದಾರ್‌ ಆದ ಹಾಸನದ ಚಿಕ್ಕೇಗೌಡರನ್ನು ಜಾತ್ರೆಗೆ ಬಂದಿದ್ದ ಪ್ರತಿಯೊಬ್ಬರೂ ಗುರುತು ಹಿಡಿದು ಮಾತನಾಡಿಸುತ್ತಾರೆ. ದನಗಳ ವಿಷಯದಲ್ಲಿ ಅಷ್ಟು ಪರಿಣಿತರು ಇವರು. ಪ್ರತಿ ವರ್ಷ ಕನಿಷ್ಠ 20 ಜಾತ್ರೆಗಳನ್ನಾದರೂ ಸುತ್ತುತ್ತಾರೆ. ಇವರ ಬಳಿ ಕಳೆದ ವರ್ಷದವರೆಗೂ ಸುಮಾರು 15 ರಿಂದ 20 ಜತೆ ರಾಸುಗಳಿದ್ದವು. ಈ ವರ್ಷ ಎರಡು ಜತೆ ಹೋರಿಗಳನ್ನು ಮಾತ್ರ ಜಾತ್ರೆಗೆ ತಂದಿದ್ದಾರೆ.

ಪ್ರತಿನಿತ್ಯ ರವೆ ಬೂಸ, ಹಾಲು, ಬೆಣ್ಣೆಗಳನ್ನು ನೀಡಿ ಪೋಷಿಸಲಾಗುತ್ತದೆ. ನನ್ನ ಬಳಿ ಇದ್ದ ಎತ್ತುಗಳನ್ನು ₹ 6.30 ಲಕ್ಷಕ್ಕೆ ಮಾರಿದ ಉದಾಹರಣೆ ಇದೆ. ಈ ಕಾಯಕವನ್ನು 1969 ಇಸವಿಯಿಂದ ಮಾಡಿಕೊಂಡು ಬರುತ್ತಿದ್ದೇನೆ ಎಂದು ಹೇಳಿದರು.

*
ಉಳುಮೆ ಮಾಡೋಕೆ ದನ ಬೇಕು ಅಂದರೆ ₹ 50 ಸಾವಿರದಿಂದ ₹ 1 ಲಕ್ಷದ ವರೆಗೂ ಖರ್ಚು ಮಾಡಿ ತೆಗೆದುಕೊಳ್ಳಬಹುದು. ಸುಮ್ಮನೆ ಸಾಕುವವರು ಇದ್ದಾರೆ. ಅವರೆಲ್ಲ ₹ 5 ಲಕ್ಷ ಇದ್ದರೂ ತೆಗೆದುಕೊಳ್ಳುತ್ತಾರೆ.
–ನಾಗರಾಜು, ನೆಲಮಂಗಲ

ರಾಸುಗಳ ದರ ನಿಗದಿ ಮಾಡುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT