ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ: ನಾಫೆಡ್ ಕೇಂದ್ರಕ್ಕೆ ಬೇಡಿಕೆ

ಖರೀದಿ ಸ್ಥಗಿತ: ಕ್ವಿಂಟಲ್‌ಗೆ ₹7,500ಕ್ಕೆ ತಲುಪಿದ ಕೊಬ್ಬರಿ ದರ
Published 27 ಡಿಸೆಂಬರ್ 2023, 18:58 IST
Last Updated 27 ಡಿಸೆಂಬರ್ 2023, 18:58 IST
ಅಕ್ಷರ ಗಾತ್ರ

ತುಮಕೂರು: ಕೇಂದ್ರ ಸರ್ಕಾರ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ₹250 ಹೆಚ್ಚಳ ಮಾಡಿ, ₹12 ಸಾವಿರಕ್ಕೆ ನಿಗದಿಪಡಿಸಿದರೂ ಅದರ ಪ್ರಯೋಜನ ತೆಂಗು ಬೆಳೆಗಾರರಿಗೆ ಇಲ್ಲವಾಗಿದೆ.

ಬೆಂಬಲ ಬೆಲೆ ಹೆಚ್ಚಳ ಮಾಡುವುದರ ಜತೆಗೆ ಸರ್ಕಾರ ಮಾರುಕಟ್ಟೆಗೆ ಪ್ರವೇಶ ಮಾಡಿ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ (ನಾಫೆಡ್) ಮೂಲಕ ಕೊಬ್ಬರಿ ಖರೀದಿಸಲು ಆರಂಭಿಸಿದರಷ್ಟೇ ರೈತರಿಗೆ ಅನುಕೂಲವಾಗಲಿದೆ. ಇಲ್ಲವಾದರೆ ಬೆಂಬಲ ಬೆಲೆ ಹೆಚ್ಚಳ ಘೋಷಣೆಗಷ್ಟೇ ಸೀಮಿತವಾಗಲಿದೆ.

ಈ ಹಿಂದೆ ಒಂದು ಕ್ವಿಂಟಲ್‌ ಉಂಡೆ ಕೊಬ್ಬರಿಗೆ ಬೆಂಬಲ ಬೆಲೆಯನ್ನು ₹11,750 ನಿಗದಿಪಡಿಸಿದರೂ ಮಾರುಕಟ್ಟೆಯಲ್ಲಿ ಧಾರಣೆ ತೀವ್ರವಾಗಿ ಕುಸಿತ ಕಂಡಿತ್ತು. ಮುಂಗಾರು ಹಂಗಾಮಿನ ಸಮಯದಲ್ಲಿ ಬೆಲೆ ₹10ಸಾವಿರಕ್ಕಿಂತ ಕಡಿಮೆಯಾಗಿತ್ತು. ಆಗ ಕೇಂದ್ರ ಸರ್ಕಾರ ನಾಫೆಡ್ ಕೇಂದ್ರಗಳನ್ನು ತೆರೆದು ಕೊಬ್ಬರಿ ಖರೀದಿಸಿತ್ತು.

ಇದರಿಂದಾಗಿ ಮಾರುಕಟ್ಟೆಯಲ್ಲಿ ಧಾರಣೆ ಅಲ್ಪಮಟ್ಟಿಗೆ ಚೇತರಿಸಿಕೊಂಡಿತ್ತು. ಆದರೆ, ನಾಫೆಡ್ ಕೇಂದ್ರಗಳು ಖರೀದಿ ಸ್ಥಗಿತಗೊಳಿಸಿದ ನಂತರ ಬೆಲೆ ಕುಸಿಯುತ್ತಲೇ ಸಾಗಿದ್ದು, ಪ್ರಸ್ತುತ ದರ ಕ್ವಿಂಟಲ್‌ಗೆ ₹7,500ಕ್ಕೆ ತಲುಪಿದೆ.

ಬೆಂಬಲ ಬೆಲೆ ಹೆಚ್ಚಳ ಮಾಡಿ, ನಾಫೆಡ್ ಮೂಲಕ ಕೊಬ್ಬರಿ ಖರೀದಿಸುವಂತೆ ರೈತರು ಸತತವಾಗಿ ಒತ್ತಡ ಹಾಕುತ್ತಲೇ ಬಂದಿದ್ದಾರೆ. ಕಳೆದ ವಾರ ತುಮಕೂರು, ಹಾಸನ ಜಿಲ್ಲೆಯ ಜನಪ್ರತಿನಿಧಿಗಳು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಈ ಎರಡು ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದ್ದರು.

ಈಗ ಬೆಂಬಲ ಬೆಲೆಯಲ್ಲಿ ಹೆಚ್ಚಳ ಮಾಡಿದ್ದರೂ ಮಾರುಕಟ್ಟೆಯಲ್ಲಿ ಧಾರಣೆ ಸುಧಾರಿಸುವುದಿಲ್ಲ. ನಾಫೆಡ್ ಕೇಂದ್ರ ತೆರೆದು ಖರೀದಿಸಿದರಷ್ಟೇ ರೈತರಿಗೆ ಅನುಕೂಲವಾಗಲಿದೆ ಎಂಬುದು ಕೊಬ್ಬರಿ ಬೆಳೆಗಾರರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT