ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋವಿನಕೆರೆ | ಎಂಜಿನಿಯರ್ ದಂಪತಿಯ ಕೃಷಿ ಕನವರಿಕೆ

ಕೊರೊನಾ ಲಾಕ್‌ಡೌನ್‌ ಪರಿಣಾಮ: ಲ್ಯಾಪ್‌ಟಾಪ್‌ ಬಿಟ್ಟು ಜಮೀನಿನತ್ತ ಮುಖ ಮಾಡಿದ ಪತಿ– ಪತ್ನಿ
Last Updated 23 ಜುಲೈ 2020, 19:31 IST
ಅಕ್ಷರ ಗಾತ್ರ

ತೋವಿನಕೆರೆ: ಲಾಕ್‌ಡೌನ್‌ ಸಮಯದಲ್ಲಿ ಹಳ್ಳಿಗೆ ಹಿಂದಿರುಗಿದ ಎಂಜಿನಿಯರ್‌ ದಂಪತಿ ಈಗ ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿದ್ದಾರೆ.

ತೋವಿನಕೆರೆ ಸಮೀಪದ ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜುಂಜರಾಮನಹಳ್ಳಿಯ ಎನ್.ನಿಖಿಲ್ ಹಾಗೂ ಪತ್ನಿ ಎಸ್.ಕೆ.ಲತಾ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಮಾರ್ಚ್‌ ತಿಂಗಳಲ್ಲಿ ಲಾಕ್‌ಡೌನ್‌ನಿಂದಾಗಿ ಹಳ್ಳಿಗೆ ಹಿಂದಿರುಗಿದ್ದರು. ಲತಾ ಮನೆಯಿಂದ ಕಂಪನಿ ಕೆಲಸ ಮಾಡುತ್ತಿದ್ದರು. ನಿಖಿಲ್ ಜಮೀನಿನ ಕಡೆ ಚಿತ್ತ ಹರಿಸಿದ್ದರು. ಅಷ್ಟರಲ್ಲಿ ಲತಾ ಅವರನ್ನು ಕಂಪನಿಯವರು ಕೆಲಸದಿಂದ ಬಿಡುಗಡೆ ಮಾಡಿದರು. ಬಳಿಕ ದಂಪತಿ ಯೋಚಿಸಿ ಕೃಷಿ ಚಟುವಟಿಕೆಯನ್ನು ಮುಂದುವರಿಸಲು ನಿರ್ಧರಿಸಿದರು.

ತಂದೆ ನರಸಿಂಹಮೂರ್ತಿ ಬಹಳ ವರ್ಷಗಳಿಂದ ಕೃಷಿ ಮಾಡುತ್ತಿದ್ದರು. ತೆಂಗು, ಅಡಿಕೆ ಮರ ಬೆಳೆಸಿದ್ದರು. ನೀರಿಗಾಗಿ 17 ಕೊಳವೆ ಬಾವಿ ಕೊರೆಸಿದ್ದರೂ ಪ್ರತಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಕಾಡುತ್ತಿತ್ತು. ಆತಂಕದಲ್ಲಿ ಬೇರೆ ಬೆಳೆ ಬೆಳೆಯಲು ಮುಂದಾಗುತ್ತಿರಲಿಲ್ಲ. ಮಳೆ ಆಶ್ರಯದಲ್ಲಿ ತೊಗರಿಯನ್ನು ನಿರಂತರವಾಗಿ ಬೆಳೆಯುತ್ತಿದ್ದರು.

ಕೃಷಿಗೆ ಇಳಿದ ದಂಪತಿ ನೀರಿನ ಸಮಸ್ಯೆಗೆ ಪರಿಹಾರ ಹುಡುಕಲು ಆರಂಭಿಸಿದರು. ಕನಿಷ್ಠ ಪ್ರಮಾಣದಲ್ಲಿ ನೀರು ಬರುತ್ತಿದ್ದ ಎರಡು ಕೊಳವೆಬಾವಿಗಳಿಗೆ ಇಂಗು ಗುಂಡಿ ನಿರ್ಮಿಸಿದರು. ಜಮೀನಿನ ಪಕ್ಕ ಹರಿಯುತ್ತಿದ್ದ ಹಳ್ಳದ ಸ್ವಲ್ಪ ನೀರು ಸಂಗ್ರಹಿಸಲು 40 ಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಿಸಿದರು. ಉತ್ತಮ ಮಳೆಯಾಗಿ ಕೃಷಿ ಹೊಂಡ ತುಂಬಿದರೆ ಬೇಸಿಗೆಯಲ್ಲಿ ತೆಂಗು, ಅಡಿಕೆ ಮರಗಳಿಗೆ ಹನಿ ನೀರಾವರಿ ಮೂಲಕ ನೀರು ಹರಿಸಲು ಯೋಚಿಸಿದ್ದಾರೆ. ಈಗಾಗಲೇ ಕೃಷಿ ಹೊಂಡಕ್ಕೆ 30 ಲಕ್ಷ ಲೀಟರ್ ನೀರು ಬಂದಿದೆ. ಜಮೀನಿನಲ್ಲಿ ಬಿದ್ದ ಮಳೆ ನೀರು ಹೊರಗೆ ಹರಿಯದಂತೆ ಬದುಗಳನ್ನು ನಿರ್ಮಿಸುತ್ತಿದ್ದಾರೆ.

ಹಲವು ದಶಕಗಳಿಂದ ಹಸಿರು ಮನೆಯಲ್ಲಿ ತರಕಾರಿ ಬೆಳೆಯುತ್ತಿರುವ ತುಮಕೂರು ತಾಲ್ಲೂಕು ದೊಡ್ಡನಾರವಂಗಲದಲ್ಲಿರುವ ಅಣ್ಣ ನರಸಿಂಹರಾಜು ಮಾರ್ಗದರ್ಶನದಲ್ಲಿ ಅಡಕೆ ಗಿಡಗಳ ಮಧ್ಯದಲ್ಲಿ ಬಳ್ಳಿ ಹುರುಳಿಕಾಯಿ, ಟೊಮೆಟೊ ನಾಟಿ ಮಾಡಿಸಿದ್ದಾರೆ. ಹುರುಳಿಕಾಯಿ ಬೆಳೆ ಬರಲು ಆರಂಭವಾಗಿದೆ.

ದಂಪತಿ ಬೆಳಿಗ್ಗೆ ಜಮೀನಿನ ಕಡೆ ಹೋದರೆ ಮನೆಗೆ ಹಿಂದಿರುಗುವುದು ಸಂಜೆ. ತರಕಾರಿ ಬಿಡಿಸುವುದು ಸೇರಿದಂತೆ ಇತರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೆಚ್ಚು ಕೆಲಸಗಳು ಇದ್ದಾಗ ಕೃಷಿ ಕಾರ್ಮಿಕರ ಮೊರೆ ಹೋಗುತ್ತಾರೆ.

ಕೃಷಿ ಸುಲಭವಲ್ಲ
‘ಈಗ ಹುರುಳಿಕಾಯಿ ಕೂಯ್ಲಿಗೆ ಬಂದಿದೆ. ಆದರೆ ಬೆಲೆ ಇಲ್ಲ. ಖರ್ಚು ಹೆಚ್ಚಾಗಿದೆ. ನೀರು, ವಿದ್ಯುತ್, ಮಾರುಕಟ್ಟೆ, ಬೆಲೆ, ಕಾರ್ಮಿಕರು ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳನ್ನು ಕೃಷಿ ಒಳಗೊಂಡಿದೆ. ಸಮಸ್ಯೆಗಳಿಗೆ ಪರಿಹಾರ ಸಿಕ್ಕರೆ ಮಾತ್ರ ಕೃಷಿಯಲ್ಲಿ ಮುಂದುವರಿಯುವ ಆಸಕ್ತಿ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಕೃಷಿ ಸುಲಭವಲ್ಲ’ ಎನ್ನುತ್ತಾರೆ ಕೃಷಿಕರಾಗಿರುವ ಎಂಜಿನಿಯರ್ ಎಸ್.ಕೆ.ಲತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT