ಶುಕ್ರವಾರ, ಜುಲೈ 23, 2021
23 °C
ಗುಣಮುಖರಾದ 11 ಮಂದಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ

ತುಮಕೂರು ಜಿಲ್ಲೆಯಲ್ಲಿ ದ್ವಿ ಶತಕ ದಾಟಿತು ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು 200 ದಾಟಿದೆ. ಶುಕ್ರವಾರ ಮತ್ತೆ 25 ಮಂದಿಗೆ ಸೋಂಕು ದೃಢವಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 208ಕ್ಕೆ ಏರಿದೆ.

ಗುರುವಾರ ಕೊರಟಗೆರೆ ತಾಲ್ಲೂಕಿನಲ್ಲಿ 19 ಪ್ರಕರಣಗಳು ಪತ್ತೆಯಾಗಿದ್ದವು. ಶುಕ್ರವಾರ ಪಕ್ಕದ ಮಧುಗಿರಿಯಲ್ಲಿ 12 ಮಂದಿಗೆ ಸೋಂಕು ದೃಢಪಟ್ಟಿದ್ದು ಗರಿಷ್ಠ ಸೋಂಕಿತರು ಕಂಡು ಬಂದಿದ್ದಾರೆ.

ಸೋಂಕು ತಗುಲಿರುವ 141 ಮಂದಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ ಬಳಲುತ್ತಿದ್ದ 11 ಮಂದಿ ಗುಣಮುಖರಾಗಿದ್ದು ಅವರನ್ನು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 556 ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 829 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಎಲ್ಲ ತಾಲ್ಲೂಕುಗಳಲ್ಲಿಯೂ ಕೊರೊನಾ ಸೋಂಕು ಪಸರಿಸಿದೆ. ಗ್ರಾಮೀಣ ಭಾಗಗಳ ಒಂದೊಂದೇ ಹಳ್ಳಿಗಳಿಗೆ ಕಾಲಿಡುತ್ತಿದ್ದು, ಆ ಹಳ್ಳಿಗಳ ಜನರು ಮುನ್ನೆಚ್ಚರಿಕೆಯ ಮೊರೆ ಹೋಗಿದ್ದಾರೆ. ಒಂದು ಹಳ್ಳಿಯಲ್ಲಿ ಸೋಂಕು ಕಾಣಿಸಿಕೊಂಡು ಆ ಹಳ್ಳಿ ಇಲ್ಲವೆ ಸೋಂಕಿತ ವ್ಯಕ್ತಿ ವಾಸಿಸುತ್ತಿದ್ದ ಮನೆಯನ್ನು  ಸೀಲ್‌ಡೌನ್ ಮಾಡಿದರೆ, ಸುತ್ತಲಿನ ಹಳ್ಳಿಗಳ ಜನರಲ್ಲಿಯೂ ಕೊರೊನಾ ನಮ್ಮ ಹಳ್ಳಿಗಳಿಗೂ ಪಸರಿಸುತ್ತದೆಯೇ ಎನ್ನುವ ಆತಂಕ ಉಂಟಾಗುತ್ತಿದೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಬೆಂಗಳೂರಿನಲ್ಲಿ ನೆಲೆಸಿದ್ದ ಜನರು ವಾಪಸಾಗುತ್ತಿದ್ದಾರೆ. ಹೀಗೆ ಬರುವವರನ್ನು ಅನುಮಾನದ ಕಣ್ಣಿನಿಂದ ಹಳ್ಳಿ ಜನರು ನೋಡುತ್ತಿದ್ದಾರೆ.

ಕೋವಿಡ್ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯ 

ತುಮಕೂರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ತಿಳಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸಾ ಸೌಲಭ್ಯ ಸಿಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

‘ಎ’ ಸಿಂಟಾಮ್ಯಾಟಿಕ್ ರೋಗಿಗಳಿಗೆ ಇಂಜಿಕ್ಷನ್‍ಗಳ ಅವಶ್ಯಕತೆ ಇಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಔಷಧಿಗಳನ್ನು ಮಾತ್ರ ನೀಡಬೇಕು. ಆ ಕಾರ್ಯವನ್ನು ವೈದ್ಯರ ಸಲಹೆ ಮೇರೆಗೆ ಶುಶ್ರೂಷಕಿಯರು ಮಾಡುತ್ತಿದ್ದಾರೆ. ವೈದ್ಯರು ಪ್ರತಿನಿತ್ಯ 2 ಬಾರಿ ಪ್ರತಿ ರೋಗಿಯ ಆರೋಗ್ಯ ವಿಚಾರಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

ಜಿಲ್ಲಾಡಳಿತದಿಂದ ರೋಗಿಗಳಿಗೆ ನಿತ್ಯ ಊಟ, ಹಾಲು, ಹಣ್ಣು, ಬ್ರೆಡ್ ಹಾಗೂ ಮೊಟ್ಟೆ ನೀಡಲಾಗುತ್ತಿದೆ. ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ 2 ದಿನಗಳ ಹಿಂದೆ ಜಿಲ್ಲಾ ಕೋವಿಡ್ ಆಸ್ಪತ್ರೆಯ ವಾರ್ಡ್‍ನಲ್ಲಿ ಗೀಜರ್ ಹಾಳಾಗಿದೆ. ಅದನ್ನು ಸರಿಪಡಿಸಲು ಪ್ಲಂಬಿಂಗ್‍ನವರ ಅವಶ್ಯಕತೆ ಇದ್ದು ಅವರು ಆಸ್ಪತ್ರೆ ಒಳಗಡೆ ಬರಲು ಹೆದರುತ್ತಿದ್ದಾರೆ. ಅದನ್ನು ಸರಿಪಡಿಸುವುದು ವಿಳಂಬವಾಗಿ ಈ ಎರಡು ದಿನಗಳು ರೋಗಿಗಳಿಗೆ ತೊಂದರೆ ಆಗಿತ್ತು. ಆ ಸಮಸ್ಯೆಯನ್ನು ಕೂಡ ಈಗ ಸರಿಪಡಿಸಿದ್ದೇವೆ ಎಂದು   ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು