ಭಾನುವಾರ, ಸೆಪ್ಟೆಂಬರ್ 26, 2021
21 °C

ಕೊರೊನಾ ಭೀತಿಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ಮಾಡಲಾಗಲಿಲ್ಲ: ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲಾಡಳಿತದಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ನಗರದ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು 'ಈ ದೇಶದಲ್ಲಿ ಯಾರು ಅವಕಾಶದಿಂದ ವಂಚಿತರಾಗಬಾರದು, ಈ ದಿಕ್ಕಿನಲ್ಲಿ ನಾವು ಸಾಗಬೇಕಿದೆ. ನಾವಿಂದು ಜಾತಿ ರಹಿತ ಸಮಾಜವನ್ನು ಸ್ವಲ್ಪ ಮಟ್ಟಿಗೆ ಸೃಷ್ಟಿಸಿದ್ದೇವೆ. ಆದರೆ, ದುರದೃಷ್ಟವಶಾತ್ ನಾವು ನಮ್ಮೊಳಗೆ ವರ್ಗ ಸಮಾಜವನ್ನು ಸೃಷ್ಟಿಸಿಕೊಂಡಿದ್ದೇವೆ. ನಮ್ಮಲ್ಲಿ ಮೊದಲು ಶ್ರೀಮಂತ-ಬಡವ, ಮೇಲು-ಕೀಳು ಎನ್ನುವ ಮನೋಭಾವ ಹೋಗಬೇಕಿದೆ' ಎಂದರು.

ತುಮಕೂರು ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿ ಡಾ.ಶಿವಕುಮಾರ್ ಸ್ವಾಮೀಜಿ ಕಾಲದಿಂದ ಆಗಿದೆ. ಕುಡಿಯುವ ನೀರಿಗೆ, ಶುಚಿತ್ವಕ್ಕೆ ಆಧ್ಯತೆ ನೀಡಿದ್ದೇವೆ. ಗ್ರಾಮೀಣ ಅಭಿವೃದ್ಧಿಗೆ ನಾವು ಹೆಚ್ಚು ಆಧ್ಯತೆ ನೀಡುತ್ತಿದ್ದೇವೆ. ಒಂದು ಕಾಲದಲ್ಲಿ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದ ನಾವು ಈಗ ಪಾವಗಡದಲ್ಲಿ ಸೋಲಾರ್ ಪ್ಲಾಂಟೇಷನ್ ನಿರ್ಮಾಣದಿಂದಾಗಿ ಬೇರೆ ಕಡೆಗೂ ವಿದ್ಯುತ್ ಪೂರೈಕೆ ಮಾಡುವ ಮಟ್ಟಿಗೆ ಬೆಳೆದಿದ್ದೇವೆ. ನೀರಿನ ಅಭಾವ ಕಾಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿದ ಕಾರಣ ಜನ, ಜಾನುವಾರುಗಳು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದರು.

ಅತಿಹೆಚ್ಚು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಸರ್ಕಾರದಿಂದ ಕೈಗಾರಿಕಾ ನೀತಿ ಘೊಷಣೆ ಮಾಡಿದ್ದು, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಿಟ್ಟು ರಾಜ್ಯದಾದ್ಯಂತ  ಕೈಗಾರಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದೇವೆ. ಜಿಲ್ಲೆಯಲ್ಲೂ ವಸಂತ ನರಸಾಪುರ ಕೈಗಾರಿಕಾ ಪ್ರದೇಶವನ್ನು ಮತ್ತಷ್ಟು ಅಭಿವೃದ್ದಿಪಡಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲೂ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ಹಂಚುವ ಕೆಲಸ ಮಾಡುವಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಿದರು. ರಾಜ್ಯದಲ್ಲಿ 9.74 ಲಕ್ಷ ಮನೆಗಳ ನಿರ್ಮಾಣಕ್ಕಾಗಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು. 

ಕೊರೊನಾ ಸೋಂಕಿನ ಭೀತಿಯಿಂದಾಗಿ ನಾವು ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ಮಾಡಲಾಗಲಿಲ್ಲ ಎಂಬ ನೋವು ನಮಗಿದೆ. ಪ್ರಾಣದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಡುತ್ತಿರುವವರನ್ನು ನಾನು ಅಭಿನಂದಿಸುತ್ತೇನೆ ಎಂದರು. 

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಫರಿದಾಬೇಗಂ ಮತ್ತಿತರರು ಇದ್ದರು.

ಈ ವೇಳೆ ನಾಗರಿಕ ಪೊಲೀಸ್ ತಂಡ, ಸಶಸ್ತ್ರ ಮೀಸಲು ಪಡೆ, ಕಲ್ಪತರು ಪಡೆಯಿಂದ ಕವಾಯತು ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು