ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲು ಮುಚ್ಚಿದ ಡಿ.ಇಡಿ ಕಾಲೇಜು

ಜಿಲ್ಲೆಯಲ್ಲಿ 45ಕ್ಕೂ ಹೆಚ್ಚು ಕಾಲೇಜು ಬಂದ್, ಉಳಿದಿರುವುದು ಐದೇ ಕಾಲೇಜು
Published 11 ಜೂನ್ 2024, 6:05 IST
Last Updated 11 ಜೂನ್ 2024, 6:05 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಡಿ.ಇಡಿ ಪ್ರವೇಶಾತಿ ಪಡೆಯುವವರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದ್ದು, ವಿದ್ಯಾರ್ಥಿಗಳಿಲ್ಲದೆ ಕಳೆದ ಹತ್ತು ವರ್ಷದಲ್ಲಿ 45ಕ್ಕೂ ಹೆಚ್ಚು ಡಿ.ಇಡಿ ಕಾಲೇಜುಗಳು ಬಾಗಿಲು ಮುಚ್ಚಿವೆ.

ಸದ್ಯ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಸಿದ್ಧಗಂಗಾ ಶಿಕ್ಷಣ ಸಂಸ್ಥೆಯಿಂದ ತಲಾ 2, ಶಿರಾ ತಾಲ್ಲೂಕು ಚಿಕ್ಕನಹಳ್ಳಿಯಲ್ಲಿ ಒಂದು ಸರ್ಕಾರಿ ತರಬೇತಿ ಸಂಸ್ಥೆ ಸೇರಿದಂತೆ 5 ಕಾಲೇಜುಗಳು ಅಸ್ತಿತ್ವ ಉಳಿಸಿಕೊಂಡಿವೆ. ಈಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಕಚೇರಿ ಇರುವ ಸ್ಥಳದಲ್ಲಿ ಈ ಹಿಂದೆ ಡಿ.ಇಡಿ ಕಾಲೇಜು ನಡೆಯುತ್ತಿತ್ತು. ದಿನಗಳು ಉರುಳಿದಂತೆ ಇಲ್ಲಿ ದಾಖಲಾತಿ ಪಡೆಯುವವರ ಸಂಖ್ಯೆ ಕಡಿಮೆಯಾಯಿತು. ಇದರ ಪರಿಣಾಮವಾಗಿ ಕಾಲೇಜಿನ ಪ್ರವೇಶಾತಿ ನಿಲ್ಲಿಸಲಾಯಿತು. ಇದೇ ರೀತಿಯಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿದ್ದ ಡಿ.ಇಡಿ ಕಾಲೇಜುಗಳನ್ನು ಮುಚ್ಚಲಾಗಿದೆ.

ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿಯ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ದಾಖಲಾತಿ ಪಡೆಯುವವರ ಸಂಖ್ಯೆ ತೀವ್ರವಾಗಿ ಕುಸಿತ ಕಂಡಿದೆ. 2020–21ರಲ್ಲಿ 15, 2021–22ರಲ್ಲಿ 9, 2022–23ರಲ್ಲಿ 8, 2023–24ರಲ್ಲಿ 17 ಮಂದಿ ದಾಖಲಾಗಿದ್ದಾರೆ. ಮೂರು ವರ್ಷಗಳಿಗೆ ಹೋಲಿಸಿದರೆ ಕಳೆದ ವರ್ಷ ಪ್ರವೇಶಾತಿ ಪಡೆದವರ ಸಂಖ್ಯೆ ಕೊಂಚ ಏರಿಕೆ ಕಂಡಿದೆ. ಇಲ್ಲಿ ಆಂಗ್ಲ ಭಾಷೆಯಲ್ಲಿ ತರಬೇತಿ ನೀಡುತ್ತಿದ್ದು, ಪ್ರವೇಶಾತಿ ಕಡಿಮೆಯಾಗಲು ಇದೂ ಒಂದು ಕಾರಣ ಎನ್ನಲಾಗಿದೆ.

ಪ್ರಸ್ತುತ ಚಿಕ್ಕನಹಳ್ಳಿಯಲ್ಲಿ 21, ತಿಪಟೂರು ತಾಲ್ಲೂಕಿನ ಹುಚ್ಚಗೊಂಡನಹಳ್ಳಿಯ ಸಿದ್ಧಾರ್ಥ ಕಾಲೇಜಿನಲ್ಲಿ 17, ತುಮಕೂರಿನ ಸಿದ್ಧಾರ್ಥ ನಗರದ ಕಾಲೇಜಿನಲ್ಲಿ 31, ನಗರದಲ್ಲಿ ನಡೆಯುತ್ತಿರುವ ಸಿದ್ಧಗಂಗಾ ಕಾಲೇಜುಗಳ ಪೈಕಿ ಒಂದರಲ್ಲಿ 51, ಮತ್ತೊಂದರಲ್ಲಿ 32 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಆದರೆ ಖಾಸಗಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವವರ ಸಂಖ್ಯೆ ಕೊಂಚ ಏರಿಳಿಕೆಯಾಗುತ್ತಿದೆ. ಅಗತ್ಯ ಸೌಲಭ್ಯ, ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ಕಾರಣಕ್ಕೆ ಹಲವರು ಖಾಸಗಿ ಕಾಲೇಜುಗಳ ಮೊರೆ ಹೋಗುತ್ತಿದ್ದಾರೆ. ಒಂದು ಕಾಲದಲ್ಲಿ ಬಹು ಬೇಡಿಕೆಯ ಕೋರ್ಸ್‌ ಆಗಿದ್ದ ಡಿ.ಇಡಿಗೆ ಈಗ ಅರ್ಜಿ ಸಲ್ಲಿಸುವವರು ಇಲ್ಲದಂತಾಗಿದ್ದಾರೆ.

ಮಾಧ್ಯಮಿಕ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿದ್ದು, ಡಿಇಡಿ ಬದಲಿಗೆ ಬಿಇಡಿ ಶಿಕ್ಷಣ ಪಡೆದವರ ನೇಮಕ, ಸರ್ಕಾರದ ಹಂತದಲ್ಲಿ ತಗ್ಗಿದ ನೇಮಕಾತಿ, ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು, ಖಾಸಗಿ ಶಾಲೆಗಳಲ್ಲಿ ಬಿಇಡಿ ಶಿಕ್ಷಣ ಪಡೆದವರ ನೇಮಕಕ್ಕೆ ಆದ್ಯತೆ, ಅನುದಾನಿತ ಶಾಲೆಗಳಲ್ಲಿ ಸ್ಥಗಿತಗೊಂಡ ನೇಮಕಾತಿ, ಪಿಯುಸಿ ನಂತರ ಉನ್ನತ ಶಿಕ್ಷಣ ಪಡೆಯಲು ಆಸಕ್ತಿ ತೋರುತ್ತಿದ್ದಾರೆ.

ತಾಂತ್ರಿಕ ಕೋರ್ಸ್‌ಗಳಿಗೂ ಪ್ರವೇಶ ಪಡೆಯುವ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದರಿಂದ ಡಿಇಡಿ ಶಿಕ್ಷಣದತ್ತ ಬರುವವರ ಸಂಖ್ಯೆ ಕಡಿಮೆಯಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಒಲವು ತೋರುತ್ತಿಲ್ಲ’ ಎಂದು ಉಪನ್ಯಾಸಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಇತರೆ ಕೋರ್ಸ್‌ಗಳಿಗೆ ಒಲವು

ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಏರಿಳಿತವಾಗುತ್ತಿದೆ. ಒಂದು ಕಾಲೇಜಿನಲ್ಲಿ ಕಡಿಮೆಯಾದರೆ ಮತ್ತೊಂದು ಕಡೆ ಜಾಸ್ತಿಯಾಗುತ್ತದೆ. ಈಗಿನ ವಿದ್ಯಾರ್ಥಿಗಳು ಡಿ.ಇಡಿ ಕೋರ್ಸ್‌ ಸೇರಲು ಆಸಕ್ತಿ ತೋರುತ್ತಿಲ್ಲ. ಇತರೆ ಕೋರ್ಸ್‌ಗಳಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಇದರಿಂದ ಪ್ರವೇಶಾತಿ ಕಡಿಮೆಯಾಗುತ್ತಿದೆ. ಮಂಜುನಾಥ್‌ ಪ್ರಾಂಶುಪಾಲ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT