ತೋವಿನಕೆರೆ: ಪಂಚಾಯಿತಿ ವ್ಯಾಪ್ತಿಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಮೇವು ಪೂರೈಕೆ ಸವಾಲಾಗಿ ಪರಿಣಮಿಸಿದೆ. ಮೇವಿಗಾಗಿ 10ರಿಂದ 15 ಕಿ.ಮೀ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಚಿಕ್ಕನಹಳ್ಳಿಯಲ್ಲಿ 100 ಕೃಷಿ ಕುಟುಂಬಗಳಿದ್ದು, 120ಕ್ಕೂ ಹೆಚ್ಚು ಮಿಶ್ರತಳಿ, ಎಮ್ಮೆ, ನಾಟಿ ಹಸುಗಳನ್ನು ಸಾಕಿದ್ದಾರೆ. ಗ್ರಾಮಸ್ಥರು ಹಲವು ದಶಕಗಳಿಂದ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹುಣಸೆ ಹಣ್ಣು ಖರೀದಿಸಿ ಶುಚಿ ಮಾಡಿ ಮಾರಾಟ ಮಾಡುತ್ತಿದ್ದರು. ಹುಣಸೆ ಸಂಸ್ಕರಣೆ ಶ್ರಮದಾಯಕ ಎನಿಸಿದಾಗ ಹೆಚ್ಚಿನ ಜನರು ಅಡಿಕೆ ತೋಟದ ಮೊರೆಹೋದರು. ಈ ವರ್ಷ ಪ್ರತಿ ಕುಟುಂಬ 2ರಿಂದ 3 ಮಿಶ್ರ ತಳಿ ಹಸು ಸಾಕಲು ಪ್ರಾರಂಭಿಸಿದ್ದಾರೆ. ನಿತ್ಯ ಸಾವಿರ ಲೀಟರ್ ಹಾಲನ್ನು ಡೇರಿಗೆ ಪೂರೈಸುತ್ತಿದ್ದಾರೆ. ಆದರೆ ಈಗ ಮಳೆ ಕೊರತೆಯಿಂದಾಗಿ ಜಮೀನು, ತೋಟಗಳಲ್ಲಿ ಮೇವು ದೊರೆಯದಂತಾಗಿದೆ.
ಹೈನುಗಾರರು ಗುಂಪು ಗುಂಪಾಗಿ ಅಕ್ಕಪಕ್ಕದ ಅಡಿಕೆ, ತೆಂಗು ತೋಟ ಸೇರಿದಂತೆ ಮೇವು ಸಿಗುವ ಜಾಗಗಳಿಗೆ 8ರಿಂದ 15 ಜನ ಸೇರಿ ಸರಕು ಸಾಗಣೆ ವಾಹನದಲ್ಲಿ 10ರಿಂದ 15 ಕಿ.ಮೀ ದೂರಕ್ಕೆ ತೆರಳುತ್ತಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ಕಟಾವು ಮಾಡಿಕೊಂಡು ಬರುತ್ತಾರೆ. ತುಮಕೂರು, ಶಿರಾ, ಮಧುಗಿರಿ ತಾಲ್ಲೂಕಿನ ಹಳ್ಳಿಗಳಿಗೂ ಮೇವು ಅರಸಿ ಹೋಗುತ್ತಿದ್ದಾರೆ.
‘ಸೆಪ್ಟೆಂಬರ್‌ನಿಂದ ಗೋಶಾಲೆ ಪ್ರಾರಂಭಿಸಿದರೆ ನಾವು ಉಳಿಯಲು ಸಾಧ್ಯ. ಇಲ್ಲದಿದ್ದರೆ ಜೀವನ ನಿರ್ವಹಣೆ ಕಷ್ಟ’ ಎನ್ನುತ್ತಾರೆ ದಶಕದಿಂದ ಹೈನುಗಾರಿಕೆಯಲ್ಲಿ ತೊಡಗಿರುವ ಕಮಲಮ್ಮ.
ಜಮೀನು ಇಲ್ಲದ ಅನೇಕರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಮಳೆ ಬಂದರೆ ಕೆರೆ ಕಟ್ಟೆ ಉಳುಮೆ ಮಾಡದ ಜಮೀನುಗಳಲ್ಲಿ ಮೇಯಿಸುತ್ತಿದ್ದೆವು. ಮಳೆ ಬರದೆ ಮೇವಿನ ಹುಲ್ಲು ಸಿಗುತ್ತಿಲ್ಲ. ಸಾಕು ಪ್ರಾಣಿಗಳನ್ನು ಮಾರಾಟ ಮಾಡುವಂತಾಗಿದೆ.
-ಸಿದ್ಧಗಂಗಯ್ಯ ಚಿಕ್ಕಣನಹಳ್ಳಿ
ಈ ಭಾಗದಲ್ಲಿ ಹೆಚ್ಚು ಅಡಿಕೆ ಬೆಳೆಗಾರರಿದ್ದಾರೆ. ತೋಟದಲ್ಲಿ ಸಾಕಷ್ಟು ಮೇವು ಸಿಗುತ್ತಿತು. ಹೈನುಗಾರಿಕೆ ಮಾಡಿದರೆ ತೋಟಕ್ಕೆ ಬೇಕಾಗುವ ಉತ್ಕೃಷ್ಟ ಗೊಬ್ಬರ ಸಿಗುತ್ತಿತ್ತು. ಆದರೆ ಈ ಬಾರಿ ಮೇವಿಗೆ ತೀವ್ರ ಸಂಕಷ್ಟ ಎದುರಾಗಿದೆ.
-ವೇಣುಗೋಪಾಲ್ ಚಿಕ್ಕಣನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.