ಶನಿವಾರ, ಅಕ್ಟೋಬರ್ 23, 2021
25 °C

ಕನಿಷ್ಠ ವೇತನ, ಪಿಂಚಣಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಸ್ಕೀಮ್’ ನೌಕರರ ಅಖಿಲ ಭಾರತ ಹೋರಾಟದ ಭಾಗವಾಗಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಿಐಟಿಯು ಅಂಗನವಾಡಿ ನೌಕರರ ಸಂಘ, ಎಐಟಿಯುಸಿ ಬಿಸಿಯೂಟ ನೌಕರರ ಸಂಘ, ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಗಳು ಜಂಟಿಯಾಗಿ ಹೋರಾಟ ಸಂಘಟಿಸಿದ್ದವು. ಕನಿಷ್ಠ ವೇತನ ನೀಡಬೇಕು, ಸಾಮಾಜಿಕ ಭದ್ರತೆ ಕಲ್ಪಿಸಿ, ಪಿಂಚಣಿ ನೀಡುವಂತೆ
ಒತ್ತಾಯಿಸಿದರು.

ಮುಂಚೂಣಿ ಕೆಲಸಗಾರರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಬೇಕು; ಆರೋಗ್ಯ ವಲಯಕ್ಕೆ ಜಿಡಿಪಿಯ ಶೇ 6ರಷ್ಟು ಅನುದಾನ ಮೀಸಲಿರಿಸಬೇಕು, ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಬಲಪಡಿಸಬೇಕು; ಕರ್ತವ್ಯದಲ್ಲಿದ್ದಾಗ ಮುಂಚೂಣಿ ಕೆಲಸಗಾರರು ಮೃತಪಟ್ಟರೆ ₹50 ಲಕ್ಷ ವಿಮೆ ರಕ್ಷಣೆ ಒದಗಿಸಬೇಕು; ಕೋವಿಡ್ ಕೆಲಸದಲ್ಲಿ ತೊಡಗಿರುವ ಗುತ್ತಿಗೆ, ಸ್ಕೀಮ್ ಕೆಲಸಗಾರರಿಗೆ ತಿಂಗಳಿಗೆ ₹10 ಸಾವಿರ ಹೆಚ್ಚುವರಿ ಅಪಾಯ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.

ಎಲ್ಲಾ ಸ್ಕೀಮ್ ನೌಕರರಿಗೆ ಬಾಕಿ ವೇತನ, ಭತ್ಯೆಗಳನ್ನು ತಕ್ಷಣವೇ ಪಾವತಿಸಬೇಕು; ಕರ್ತವ್ಯದಲ್ಲಿದ್ದಾಗ ಸೋಂಕಿಗೆ ಒಳಗಾದವರಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು; ಕಾರ್ಮಿಕ ವಿರೋಧಿ ಕಾಯ್ದೆ ಹಿಂತೆಗೆದುಕೊಳ್ಳಬೇಕು; ಸ್ಕೀಮ್ ಕೆಲಸಗಾರರಾದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರು ಎಂದು ಪರಿಗಣಿಸಿ ಕನಿಷ್ಠ ವೇತನ ತಿಂಗಳಿಗೆ ₹21 ಸಾವಿರ, ಪಿಂಚಣಿ ₹10 ಸಾವಿರ ನೀಡುವುದೂ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಸಿಐಟಿಯು ಅಂಗವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಜಿ.ಕಮಲ, ತಾಲ್ಲೂಕು ಘಟಕದ ಅಧ್ಯಕ್ಷೆ ಗೌರಮ್ಮ, ಕಾರ್ಯದರ್ಶಿ ವಿನೋದಾ, ಎಐಟಿಯುಸಿ ಬಿಸಿಯೂಟ ನೌಕರ ಸಂಘದ ಕಂಬೇಗೌಡ, ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಂಚಾಲಕಿ ಮಂಜುಳ ಗೋನಾವರ, ಕಲ್ಯಾಣಿ ಮತ್ತಿತರರು ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು