ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆ ತೆರೆಯಲು ಒತ್ತಾಯ

ರಾಸುಗಳಿಗೆ ಮೇವಿಲ್ಲ
Published 2 ಮೇ 2024, 7:10 IST
Last Updated 2 ಮೇ 2024, 7:10 IST
ಅಕ್ಷರ ಗಾತ್ರ

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕು ಒಳಗೊಂಡಂತೆ ಹೋಬಳಿ ವ್ಯಾಪ್ತಿಯಲ್ಲಿ ಗೋಶಾಲೆ ಹಾಗೂ ಮೇವು ಬ್ಯಾಂಕ್‌ಗಳನ್ನು ತೆರೆದು ರಾಸುಗಳನ್ನು ಉಳಿಸಿಕೊಳ್ಳಲು ಅನುವು ಮಾಡಿ ಕೊಡುವಂತೆ ರೈತರು ಒತ್ತಾಯಿಸಿದ್ದಾರೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ವರ್ಷ ಸಂಪೂರ್ಣ ಬರಗಾಲ ಆವರಿಸಿದ ಕಾರಣ ಬೆಳೆ ಬಿತ್ತನೆ ಮಾಡಿದ ಕೆಲವೇ ದಿನಗಳಲ್ಲಿ ಒಣಗಿ ಹೋಗಿದೆ. ದವಸ-ಧಾನ್ಯ ಆಗದೆ ಹೋದರೂ ರಾಸುಗಳಿಗೆ ಮೇವಾದರೂ ಲಭ್ಯವಾಗಬಹುದು ಎಂದು ನಂಬಿದ್ದ ರೈತರಿಗೆ ನಿರಾಸೆ ಮೂಡಿಸಿತ್ತು. ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ಅಲ್ಪಸ್ವಲ್ಪ ಮಳೆ ಬಿದ್ದಿದ್ದು ಬಿಟ್ಟರೆ ಉತ್ತಮ ಮಳೆ ಆಗಿಲ್ಲ.

ಕಳೆದ ಸೆಪ್ಟಂಬರ್‌ ತಿಂಗಳಿನಲ್ಲಿ ಬಂದ ಸೋನೆ ಮಳೆ ಬಿಟ್ಟರೆ ಇತ್ತ ಮಳೆಯೇ ಆಗಿಲ್ಲ. ಕಳೆದ ಎರಡು ವರ್ಷಗಳಿಂದಲೂ ರೈತರ ಬಳಿ ಮೇವಿನ ದಾಸ್ತಾನು ಇಲ್ಲದ ಕಾರಣ ರೈತರು ರಾಸುಗಳ ಮೇವಿಗೆ ಪರದಾಡುವಂತಾಗಿದೆ. ರಾಸುಗಳ ಮೇವಿಗಾಗಿ ಜೋಳ ಬಿತ್ತನೆ ಮಾಡಿದ್ದರೂ ಮಳೆಯಾಗದ ಕಾರಣ ಮೊಳಕೆಯಲ್ಲಿಯೇ ಮುದುಡಿ ಹೋಗಿದೆ ಎಂದು ರೈತರು ತಿಳಿಸಿದರು.

ಮೇವು ದುಬಾರಿ: ಕಳೆದ ವರ್ಷ ಜಿಲ್ಲೆಯ ಯಾವ ಭಾಗದಲ್ಲೂ ಮಳೆಯಾಗದ ಕಾರಣ ಮೇವು ಎಲ್ಲಿಯೂ ಲಭ್ಯವಾಗುತ್ತಿಲ್ಲ. ಕೆಲ ಕಡೆ ಸಿಕ್ಕರೂ ದುಬಾರಿ ಬೆಲೆ ಹೇಳುತ್ತಾರೆ ಎಂದು ರೈತರು ಅಳಲು ತೋಡಿಕೊಂಡರು.

ಕೆಲ ರೈತರು ದೂರದ ತಾಲ್ಲೂಕುಗಳಿಂದ ₹300ಕ್ಕೆ ಒಂದು ಹೊರೆ ಮೇವು ತಂದು ರಾಸುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಮಳೆಗಾಲ ಬೇಗ ಆರಂಭವಾಗುತ್ತದೆ ಎಂಬ ನಂಬಿಕೆಯಿಂದ 20 ಹೊರೆ ಮೇವು ತಂದಿದ್ದೆ. ಆದರೆ ಈಗ ಮುಗಿದು ಮುಂದೇನು ಎಂಬ ಪ್ರಶ್ನೆ ಎದುರಾಗಿದೆ ಎಂದು ರಂಗನಕೆರೆ ಗ್ರಾಮದ ರೈತ ಸ್ವಾಮಿ ಹೇಳಿದರು.

ರೈತರ ಬಳಿ ಮೇವು ಖಾಲಿಯಾಗಿರುವ ಕಾರಣ ಅರಳಿ ಮರದ ಸೊಪ್ಪು ಸೇರಿದಂತೆ ಇತರ ಮರಗಳ ಸೊಪ್ಪನ್ನು ಕಡಿದು ರಾಸುಗಳಿಗೆ ಹಾಕುತ್ತಿದ್ದಾರೆ. ಕೂಡಲೇ ಗೋಶಾಲೆ ಹಾಗೂ ಮೇವು ಬ್ಯಾಂಕ್‌ ತೆರೆದು ರೈತರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT