ಕಗ್ಗಂಟಾದ ಎತ್ತಿನಹೊಳೆ ಯೋಜನೆ

ಕೊರಟಗೆರೆ: `ಸ್ವಾಮೀ.. ನಮ್ಗೆ ಹೊಲ, ಮನೆ ಇಲ್ಲ. ಯಾರೋ ಪುಣ್ಯಾತ್ಮರು ಹಳೆ ಮನೆ ಕೊಟ್ಟಿದ್ದಾರೆ. ಒಂದೆರಡು ಕುರಿ ಮೇಯಿಸ್ತಾ, ಕೂಲಿ ಮಾಡ್ಕಂಡ್ ಬುದಕುತ್ತಿದ್ದೇವೆ. ಈಗ ಎತ್ತಿನಹೊಳೆಗಾಗಿ ಊರು ಬಿಡಿಸ್ತಾರಂತೆ. ಹೊಲ, ಮನೆ ಇರುವವರಿಗೆ ಸರ್ಕಾರ ದುಡ್ಡು ಕೊಡುತ್ತೆ. ನಮ್ಮ ಗತಿ ಏನು...’
ತಾಲ್ಲೂಕಿನ ಕೋಳಾಲ ಹೋಬಳಿಯ ಸುಂಕದಹಳ್ಳಿ ಪುಟ್ಟಮ್ಮ ಅವರ ಪ್ರಶ್ನೆ ಇದು.
ಎತ್ತಿನಹೊಳೆ ಬಫರ್ ಡ್ಯಾಂ ನಿರ್ಮಾಣದಿಂದಾಗಿ ಈ ಭಾಗದ ಐದು ಗ್ರಾಮಗಳು ಮುಳುಗಡೆಯಾಗಲಿವೆ. ಇಲ್ಲಿನ ಸಾವಿರಾರು ಕುಟುಂಬಗಳು ಇಂತಹದೇ ಆತಂಕ ಸ್ಥಿತಿಯಲ್ಲಿವೆ.
ಕೋಳಾಲ ವ್ಯಾಪ್ತಿಯಲ್ಲಿ 5 ಸಾವಿರ ಎಕರೆ ಭೂ ಪ್ರದೇಶವನ್ನು ಈಗಾಗಲೇ ಗುರುತು ಮಾಡಿದ್ದು, ಕಾಮಗಾರಿ ಪ್ರಾರಂಭಿಸಬೇಕಿದೆ. ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿ ಜಮೀನಿಗೆ ಬೆಲೆ ನಿಗದಿ ಮಾಡಲಾಗಿದೆ. ಬಫರ್ ಡ್ಯಾಂ ನಿರ್ಮಾಣದ ಜಾಗದಲ್ಲಿ ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲ್ಲೂಕಿನ ಭೂಮಿಗೆ ಭಿನ್ನ ಬೆಲೆ ನಿಗದಿಪಡಿಸಲಾಗಿದೆ. ಹಾಗಾಗಿಯೇ ಜನರು ಭೂಮಿ ಬಿಟ್ಟುಕೊಡುವಲ್ಲಿ ಅಪಸ್ವರ ಎತ್ತಿದ್ದಾರೆ.
ಒಂದೇ ಬದುವಿನ ಅಕ್ಕಪಕ್ಕದಲ್ಲಿ ಒಂದು ಕಡೆ ಹೆಚ್ಚು, ಇನ್ನೊಂದು ಕಡೆ ಕಡಿಮೆ ಬೆಲೆ ನಿಗದಿ ಮಾಡಲಾಗಿದೆ. ಇದು ಅವೈಜ್ಞಾನಿಕ, ತಾರತಮ್ಯ ಮಾಡಲಾಗಿದೆ ಎನ್ನುವುದು ಸ್ಥಳೀಯರ ದೂರು.
ತಾಲ್ಲೂಕಿನ 5 ಗ್ರಾಮ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ 2 ಗ್ರಾಮದ ಜನರಿಗೆ ಪುನರ್ವಸತಿ ನಿರ್ಮಾಣದ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಕೇವಲ ಸ್ವಾಧೀನ ಪಡಿಸಿಕೊಳ್ಳಲಿರುವ ಭೂಮಿಗೆ ಹಣ ನೀಡುವುದಾಗಿ ಹೇಳಲಾಗುತ್ತಿದೆ.
ತಾಲ್ಲೂಕಿನ ವೀರಸಾಗರ, ಲಕ್ಕಮುತ್ತನಹಳ್ಳಿ, ಸುಂಕದಹಳ್ಳಿ, ಗೆಜಮೇನಹಳ್ಳಿ, ಬೆಲ್ಲದಹಳ್ಳಿ ಸಂಪೂರ್ಣ ಮುಳುಗಡೆಯಾಗಲಿದೆ. ಸಾವಿರಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸವಿದ್ದು, 7 ಸಾವಿರ ಜನಸಂಖ್ಯೆ ಇದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಗರುಡಗಲ್ಲು, ಲಕ್ಕೇನಹಳ್ಳಿ ಗ್ರಾಮದಲ್ಲಿ 450 ಕಟುಂಬಗಳಿಂದ 1,500 ಜನಸಂಖ್ಯೆ ಇದೆ. ಈ ಕುಟುಂಬಗಳನ್ನು ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಬೇಕಿದೆ. ಆದರೆ ಈವರೆಗೆ ಜಾಗ ಗುರುತಿಸಿಲ್ಲ.
ಎತ್ತಿನಹೊಳೆ ಯೋಜನೆಗೆ ಒಳಪಡುವ ಬಹುತೇಕ ಜಮೀನ ಫಲವತ್ತಾಗಿದ್ದು, ಕೃಷಿಯನ್ನೆ ನಂಬಿ ಬದುಕುತ್ತಿದ್ದಾರೆ. ಅಡಿಕೆ, ತೆಂಗು,
ಬಾಳೆ, ಮಾವು, ಹುಣಸೇ ಸೇರಿದಂತೆ ವಾಣಿಜ್ಯ ಬೆಳೆ ಬೆಳೆದಿದ್ದಾರೆ. ನೂರಾರು ಕೊಳವೆ ಬಾವಿಗಳಲ್ಲಿ ನೀರು ಸಮೃದ್ಧವಾಗಿದೆ. ಇಂತಹ ಐದು ಸಾವಿರ ಎಕರೆ ಭೂಮಿ ಎತ್ತಿನಹೊಳೆ ಕಾಮಗಾರಿಗೆ ಮುಳುಗಡೆಯಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಸಂತ್ರಸ್ತರು ಪರ್ಯಾಯ ಭೂಮಿ ನೀಡಬೇಕು ಎಂದು ಪಟ್ಟುಹಿಡಿದಿದ್ದಾರೆ. ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ, ಕುಟುಂಬಗಳು ವ್ಯವಸ್ಥಿತವಾಗಿ ನೆಲೆ ಕಂಡುಕೊಳ್ಳುವವರೆಗೆ ಪ್ರತಿ ತಿಂಗಳು ನಿರ್ದಿಷ್ಟ ಹಣ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ.
ಯೋಜನೆಗಾಗಿ ಈ ಹಿಂದೆ ₹13 ಸಾವಿರ ಕೋಟಿ ಮೀಸಲಿಡಲಾಗಿತ್ತು. ಈಗ ಅದು ₹20 ಸಾವಿರ ಕೋಟಿಗೆ ಏರಿದೆ. ಎರಡೂ ತಾಲ್ಲೂಕಿಗೂ ಏಕರೂಪ ಬೆಲೆ ನಿಗದಿಯಾದರೆ ಹೆಚ್ಚುವರಿಯಾಗಿ ₹500ರಿಂದ ₹600 ಕೋಟಿ ಬೇಕಾಗುತ್ತದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.