ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನನ್ನು ಹುಡುಕಿ ಹೆಣ್ಣು ಕೊಡುವ ಕಾಲ ಸನ್ನಿಹಿತ: ಪ್ರಗತಿಪರ ಕೃಷಿ ಮಹಿಳೆ ಅರುಣಾ

ಕೃಷಿ ಕಾರ್ಯಾಗಾರದಲ್ಲಿ ಅಭಿಪ್ರಾಯ
Published 16 ಜನವರಿ 2024, 14:31 IST
Last Updated 16 ಜನವರಿ 2024, 14:31 IST
ಅಕ್ಷರ ಗಾತ್ರ

ಹುಳಿಯಾರು: ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂಬ ಆತಂಕ ಮೂರ್ನಾಲ್ಕು ವರ್ಷಗಳಲ್ಲಿ ಬದಲಾಗಲಿದೆ. ರೈತರ ಮಕ್ಕಳನ್ನು ಹುಡುಕಿ ಹೆಣ್ಣು ಕೊಡುವ ಕಾಲ ಸನ್ನಿಹಿತವಾಗುತ್ತದೆ ಎಂದು ಯರಬಳ್ಳಿ ಗ್ರಾಮದ ಪ್ರಗತಿಪರ ಕೃಷಿ ಮಹಿಳೆ ಅರುಣಾ ತಿಳಿಸಿದರು.

ಜೆ.ಸಿ.ಪುರದ ಪ್ರಗತಿಪರ ರೈತ ಬಾಳೇಕಾಯಿ ಶಿವನಂಜಪ್ಪ ಅವರ ತೋಟದಲ್ಲಿ ಇತ್ತೀಚೆಗೆ ಅಕ್ಷಯ ಬಳಗದಿಂದ ನಡೆದ ಕೃಷಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಕೃಷಿ ಒಂದು ತಪಸ್ಸು, ಸಾಧನೆಗೆ ತಾಳ್ಮೆ ಮತ್ತು ಶ್ರಮ ಅವಶ್ಯಕ. ನಾನು ಕೂಡ ತಾಯಿಯ ಅಣತೆಯಂತೆ ಶಿಕ್ಷಕ ತರಬೇತಿ ಪಡೆದು ಶಿಕ್ಷಕ ವೃತ್ತಿಗೆ ಹೋಗದೆ ಕೃಷಿಯಲ್ಲಿ ತೊಡಗಿಸಿಕೊಂಡು ಹಲವು ತೊಡಕುಗಳ ನಡುವೆಯೂ ಕೃಷಿ ಕಾಯಕವನ್ನು ಲಾಭದಾಯಕವಾಗಿಸಿಕೊಂಡಿದ್ದೇನೆ. ರೈತ ಎಂದು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿರುವ ಕಾಲಘಟ್ಟದಲ್ಲಿ ಬಹುತೇಕರು ಕೃಷಿಯತ್ತ ಹೊರಳುತ್ತಿದ್ದಾರೆ. ಸಾವಯವ ಹಾಗೂ ಸುಸ್ಥಿರ ಕೃಷಿ ಅಳವಡಿಸಿಕೊಂಡರೆ ಲಾಭದಾಯಕವಾಗಿಸಿಕೊಳ್ಳಬಹುದು’ ಎಂದು ವಿವರಿಸಿದರು.

ಪ್ರಗತಿಪರ ಕೃಷಿಕ ಬಾಳೇಕಾಯಿ ಶಿವನಂಜಪ್ಪ ಮಾತನಾಡಿ, 48 ವರ್ಷಗಳಿಂದ ಉಳುಮೆ ಮಾಡದೆ ತೆಂಗು, ಅಡಿಕೆ, ಬಾಳೆ, ಮೆಣಸು ಸೇರಿದಂತೆ ಇತರ ತೋಟಗಾರಿಕಾ ಬೆಳೆಗಳನ್ನು ಬೆಳೆಯಬಹುದು ಎನ್ನುವುದು ನನ್ನ ತೋಟ ಹೇಳುತ್ತಿದೆ. ಭೂಮಿಯ ತೇವಾಂಶ ಹಿಡಿದಿಡಲು ಮುಚ್ಚಳಿಕೆ ಹಾಕುವುದು ಮುಖ್ಯ ಎಂದರು.

ಸಿರಿಧಾನ್ಯ ಸಂಸ್ಕರಣಾ ಘಟಕದ ಎನ್.ಇಂದಿರಮ್ಮ ಮಾತನಾಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಸಿರಿಧಾನ್ಯದ ಕಣಜವಾಗಿತ್ತು. ಮಳೆಯಾಶ್ರಿತ ಬೆಳೆಯಾಗಿ ರಾಗಿ, ನವಣೆ, ಸಾಮೆ, ಹಾರಕ, ಹುರುಳಿ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸಿ, ತೋಟಗಾರಿಕಾ ಬೆಳೆಗಳತ್ತ ವಾಲುತ್ತಿದ್ದಾರೆ. ಇದು ಮುಂದೆ ಆಹಾರದ ಅಭದ್ರತೆ ಎದುರಾಗಲು ಕಾರಣವಾಗಿದೆ. ಈ ಬಗ್ಗೆ ಸರ್ಕಾರಗಳು ಗಮನಹರಿಸಿ, ಮಳೆಯಾಶ್ರಿತ ಬೆಳೆ ಬೆಳೆಯುವ ರೈತರಿಗೆ ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಗತಿಪರ ರೈತ ಪಂಕಜ, ಮಹಾಲಿಂಗಪ್ಪ, ಕೃಷ್ಣಮೂರ್ತಿ ಬಿಳಿಗೆರೆ, ವಕೀಲ ಎಸ್.ಎಚ್‌.ಚಂದ್ರಶೇಖರಯ್ಯ, ಮರುಳಿಧರ, ಅರುಣ್‌ಭಟ್‌, ಅಕ್ಷಯಕಲ್ಪದ ಕೆ.ಎಸ್.ರಘುರಾಂ ಹಾಗೂ ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT