ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ರಾಗಿ ಕೇಂದ್ರದಿಂದ ದೂರ ಉಳಿದ ರೈತರು

Published 4 ಜನವರಿ 2024, 6:17 IST
Last Updated 4 ಜನವರಿ 2024, 6:17 IST
ಅಕ್ಷರ ಗಾತ್ರ

ತುಮಕೂರು: ಕಳೆದ ವರ್ಷ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಲು ಪೈಪೋಟಿ ನಡೆಸಿ, ಹಗಲು–ರಾತ್ರಿ ಕಾದು ಕುಳಿತಿದ್ದ ರೈತರು ಈ ಬಾರಿ ರಾಗಿ ಖರೀದಿ ಕೇಂದ್ರಗಳತ್ತ ಮುಖ ಮಾಡುತ್ತಿಲ್ಲ. ಖರೀದಿ ಕೇಂದ್ರಗಳು ಆರಂಭವಾಗಿದ್ದರೂ ಅತ್ಯಲ್ಪ ಮಂದಿ ಮಾತ್ರ ಮಾರಾಟಕ್ಕೆ ಆಸಕ್ತಿ ತೋರುತ್ತಿದ್ದಾರೆ.

ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟ ಮಾಡಲು ನೋಂದಣಿಗೆ ಡಿಸೆಂಬರ್ ಆರಂಭದಲ್ಲೇ ಚಾಲನೆ ನೀಡಲಾಗಿದ್ದು, ಕಳೆದ ಒಂದು ವಾರದಿಂದ ಖರೀದಿ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಒಂದು ತಿಂಗಳು ಸಮಯ ನೀಡಿದ್ದರೂ ಈವರೆಗೂ ಕೇವಲ 10 ಸಾವಿರ ರೈತರು ನೋಂದಣಿ ಮಾಡಿಕೊಂಡಿದ್ದು, 2.42 ಲಕ್ಷ ಕ್ವಿಂಟಲ್ ಮಾರಾಟ ಮಾಡುವ ಭರವಸೆ ಸಿಕ್ಕಿದೆ. ನೋಂದಣಿ ಮಾಡಿಕೊಂಡ ಎಲ್ಲರೂ ರಾಗಿ ಮಾರಾಟ ಮಾಡುವುದು ಅನುಮಾನ. ಸುಮಾರು 2 ಲಕ್ಷ ಕ್ವಿಂಟಲ್ ಖರೀದಿಯಾಗಬಹುದು ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಹಿಂದಿನ ವರ್ಷ 65,714 ರೈತರು ನೋಂದಣಿ ಮಾಡಿಕೊಂಡು, ಅದರಲ್ಲಿ 61,555 ಮಂದಿ ಮಾತ್ರ ಖರೀದಿ ಕೇಂದ್ರಕ್ಕೆ ರಾಗಿ ತಂದಿದ್ದರು. ಒಟ್ಟು 8.95 ಲಕ್ಷ ಕ್ವಿಂಟಲ್ ಖರೀದಿಸಿದ್ದು, ರೈತರಿಗೆ ₹320.54 ಕೋಟಿ ಹಣ ಪಾವತಿಸಲಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾಲ್ಕನೇ ಒಂದು ಭಾಗಷ್ಟು ರಾಗಿಯೂ ಖರೀದಿ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಹಿಂದಿನ ವರ್ಷ ಉತ್ತಮ ಮಳೆಯಾಗಿದ್ದು, ಯಥೇಚ್ಛವಾಗಿ ರಾಗಿ ಬೆಳೆದಿದ್ದರು. ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ರೈತರು ಖರೀದಿ ಕೇಂದ್ರಕ್ಕೆ ತಂದು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿದ್ದರು. ಕೆಲವು ಕಡೆಗಳಲ್ಲಿ ವಾರಗಟ್ಟಲೆ ಸರದಿಯಲ್ಲಿ ನಿಂತು, ಒತ್ತಡ ತಂದು ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು. ರೈತರ ಒತ್ತಡದಿಂದಾಗಿ ಏಪ್ರಿಲ್ ಅಂತ್ಯದ ವರೆಗೂ ಸಮಯ ವಿಸ್ತರಿಸಿ ಖರೀದಿಸಲಾಗಿತ್ತು.

ಈ ಬಾರಿ ತೀವ್ರವಾದ ಬರ ಆವರಿಸಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಸಾಕಷ್ಟು ಕಡೆಗಳಲ್ಲಿ ಬಿತ್ತಿದ ಬೀಜ ಭೂಮಿಯಿಂದ ಮೇಲೇಳಲಿಲ್ಲ. ಹಲವೆಡೆ ರಾಗಿ ಪೈರು ಒಣಗಿತ್ತು. ಅಲ್ಲಲ್ಲಿ ಬಿದ್ದ ಅಲ್ಪಸ್ವಲ್ಪ ಮಳೆ, ನೀರಾವರಿ ಸೌಲಭ್ಯ ಇದ್ದವರು ಮಾತ್ರ ಬೆಳೆದಿದ್ದಾರೆ. ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ರೈತರ ಬಳಿ ರಾಗಿ ಇಲ್ಲದೆ ಮಾರಾಟ ಕೇಂದ್ರಗಳಿಗೆ ಬರುತ್ತಿಲ್ಲ. ಅಲ್ಪ ಪ್ರಮಾಣದಲ್ಲಿ ಬೆಳೆದವರು, ಹಿಂದಿನ ವರ್ಷದ ದಾಸ್ತಾನು ಇದ್ದವರು ಮಾತ್ರ ಮಾರಾಟ ಮಾಡುತ್ತಿದ್ದಾರೆ. ಇಳುವರಿ ತೀವ್ರವಾಗಿ ಕುಸಿತ ಕಂಡಿರುವುದರಿಂದ ಸಾಕಷ್ಟು ಮಂದಿ ಮನೆ ಬಳಕೆಗೆ ಇಟ್ಟುಕೊಂಡಿದ್ದಾರೆ.

ಬೆಲೆ ಏರಿಕೆ

ಬರದಿಂದ ರಾಗಿ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಹೆಚ್ಚು ಬೆಲೆ ಸಿಗುತ್ತಿದ್ದು, ಮಾರಾಟಕ್ಕೆ ಮುಂದಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳು ಸೇರಿದಂತೆ ಹಲವರು ರಾಗಿ ಬಳಕೆ ಮಾಡುತ್ತಿದ್ದು, ಮುಂದೆ ಬೇಡಿಕೆ ಹೆಚ್ಚಾದರೆ ಬೆಲೆಯೂ ಏರಿಕೆಯಾಗಬಹುದು.

ಬೆಂಬಲ ಬೆಲೆ ಹೆಚ್ಚಳ

2022–2023ನೇ ಸಾಲಿನಲ್ಲಿ ರಾಗಿ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ₹3578ಕ್ಕೆ ಏರಿಕೆ ಮಾಡಲಾಗಿತ್ತು. ಈಗ (2023–2024) ಕ್ವಿಂಟಲ್‌ಗೆ ₹3846ಕ್ಕೆ ಹೆಚ್ಚಳ ಮಾಡಲಾಗಿದೆ. ಹಿಂದಿನ ವರ್ಷಕ್ಕಿಂತ ಈ ಬಾರಿ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ₹268 ಹೆಚ್ಚಿಸಲಾಗಿದೆ. ಉತ್ತಮ ಬೆಲೆ ನಿಗದಿಪಡಿಸಿದ್ದರೂ ಮಾರಾಟ ಮಾಡಲು ರೈತರು ಮುಂದಾಗುತ್ತಿಲ್ಲ.

ಖರೀದಿ ಕೇಂದ್ರ

ಕುಣಿಗಲ್ ಚಿಕ್ಕನಾಯಕನಹಳ್ಳಿ ಗುಬ್ಬಿ ಹುಳಿಯಾರು ಮಧುಗಿರಿ ಶಿರಾ ತಿಪಟೂರು ತುಮಕೂರು ತುರುವೇಕೆರೆ ತಾಲ್ಲೂಕಿನಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT