ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಅಕ್ಕಪಕ್ಕದ ಮನೆಯವರ ಕಿರುಕುಳ; ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ

Published 26 ನವೆಂಬರ್ 2023, 15:33 IST
Last Updated 26 ನವೆಂಬರ್ 2023, 15:33 IST
ಅಕ್ಷರ ಗಾತ್ರ

ತುಮಕೂರು: ಅಕ್ಕಪಕ್ಕದ ಮನೆಯವರ ಕಿರುಕುಳ, ವ್ಯಾಪಾರ ನಷ್ಟದಿಂದ ಮೂರು ಮಕ್ಕಳನ್ನು ಸಾಯಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಗರದ ಸದಾಶಿವನಗರದ ಗರೀಬ್‌ಸಾಬ್‌ (36), ಸುಮಯಾ (32), ಹಾಜೀರಾ (14), ಮಹ್ಮದ್ ಶುಭಾನ್ (10) ಮಹ್ಮದ್ ಮುನೀರ್ (8) ಮೃತರು.

ಮಕ್ಕಳಿಗೆ ಶಿಕ್ಷಣ ಕೊಡಿಸಲು ಶಿರಾ ತಾಲ್ಲೂಕಿನ ಲಕ್ಕನಹಳ್ಳಿಯಿಂದ ಗರೀಬ್ ಸಾಬ್ ನಗರಕ್ಕೆ ಬಂದಿದ್ದರು. ದುಬಾರಿ ಶಿಕ್ಷಣವೇ ಇಡೀ ಕುಟುಂಬಕ್ಕೆ ಉರುಳಾಗಿದೆ. ಗರೀಬ್ ಸಾಬ್ ಅತ್ಯಂತ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು. ದುಡಿದಿದ್ದು ಸಾಲುತ್ತಿರಲಿಲ್ಲ. ಮಕ್ಕಳನ್ನು ಓದಿಸಲು ಸಾಲ ಮಾಡಿದ್ದರು. ಸಾಲ ತೀರಿಸಲು ಪರದಾಡುತ್ತಿದ್ದರು. ಇದರ ಮಧ್ಯೆ ಅಕ್ಕಪಕ್ಕದ ಮನೆಯವರ ಕಿರುಕುಳ ಜಾಸ್ತಿಯಾಗಿತ್ತು ಎಂದು ಗರೀಬ್ ಸಾಬ್ ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಶಿರಾ ತಾಲ್ಲೂಕಿನ ಲಕ್ಕನಹಳ್ಳಿಯಿಂದ ಬಂದು ನಗರದಲ್ಲಿ ನೆಲೆಸಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕನಸು ನನಸಾಗಲೇ ಇಲ್ಲ. ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜತೆಗೆ ಐವರ ಸಂಸಾರ ಮುನ್ನಡೆಸಲು ನಡೆಸುತ್ತಿದ್ದ ವ್ಯಾಪಾರದಿಂದ ಬರುವ ಹಣ ಸಾಲುತ್ತಿರಲಿಲ್ಲ. ಕಬಾಬ್ ಮಾರಾಟ ಮಾಡಿ, ಅದರಲ್ಲಿ ಬಂದ ಹಣದಲ್ಲಿ ಮನೆ ಬಾಡಿಗೆ ಕಟ್ಟಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಬರುವ ಆದಾಯ ಸಾಲುತ್ತಿರಲಿಲ್ಲ. ಅದಕ್ಕಾಗಿ ಸಾಲವನ್ನೂ ಮಾಡಿಕೊಂಡಿದ್ದರು. ಅದರ ಜತೆಗೆ ಅಕ್ಕಪಕ್ಕದವರ ಕಿರುಕುಳ ಐವರ ಜೀವ ಬಲಿ ಪಡೆದಿದೆ.

ಡೆತ್‌ ನೋಟ್‌ನಲ್ಲಿ ಏನಿದೆ?

'ನಮಗೆ ಸಾಲ ಹೆಚ್ಚಾಗಿದೆ, ವ್ಯಾಪಾರದಲ್ಲಿ ಲಾಭ ಇಲ್ಲ. ಕೆಲಸಕ್ಕೆ ಹೋದರೆ ಹಣ ಬರುತ್ತಿಲ್ಲ' ಎಂದು ಸಾವಿಗೂ ಮುನ್ನ ಗರೀಬ್ ಸಾಬ್ ತಮ್ಮ ದೊಡ್ಡಮ್ಮನಿಗೆ ಡೆತ್ ನೋಟ್ ಬರೆದಿದ್ದಾರೆ.

ಸಂಸಾರ ಮಾಡುವುದು ಕಷ್ಟವಾಗಿದೆ. ಊಟಕ್ಕೂ ತೊಂದರೆಯಾಗುತ್ತಿದೆ. ಊರಲ್ಲಿದ್ದಾಗ ಸಂಬಂಧಿಕರು ವಿಷ ಕಾರಿದರು. ಅದಕ್ಕಾಗಿ ನಗರಕ್ಕೆ ಬಂದಿದ್ದೇವೆ ಎಂದು ಡೆತ್‌ ನೋಟ್‌ನಲ್ಲಿ ದಾಖಲಿಸಿದ್ದಾರೆ.

ಬಾಡಿಗೆ ಮನೆಗೆ 45 ಸಾವಿರ ಅಡ್ವಾನ್ಸ್ ನೀಡಲಾಗಿದೆ. ಮೂರು ತಿಂಗಳ ಬಾಡಿಗೆ ಕೊಡೋದು ಬಾಕಿಯಿದೆ. ಉಳಿದ ಹಣವನ್ನ ನಮ್ಮ ದೊಡ್ಡಮ್ಮನಿಗೆ ವಾಪಾಸ್ ಕೊಡಿ ಎಂದು ಕೋರಿದ್ದಾರೆ.

ನಾವು ವಾಸಿಸುವ ಮನೆಯ ಕೆಳಗಿನವರು ನಮಗೆ ತುಂಬಾ ಕಾಟ ಕೊಟ್ಟಿದ್ದಾರೆ. ನಮ್ಮ ಮನೆಯ ಕೆಳಗಿನ ಖಲಂದರ್, ಅವರ ಮಗಳು ಸಾನಿಯಾ, ಹಿರಿಯ ಮಗ, ಮಹಡಿ ಮನೆಯ ಶಬಾನಾ ಮತ್ತು ಅವಳ ಮಗಳು ಸಾನಿಯಾ ಈ ಎಲ್ಲರೂ ನಮ್ಮ ಸಾವಿಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ.

ಇವರ ಕಾಟಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ.‌ ಇವರಿಗೆ ಗೃಹ ಮಂತ್ರಿ ಕಾನೂನು ರೀತಿ ಶಿಕ್ಷೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ

ದಂಪತಿ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸಿಗೆ ಮೇಲೆ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದರು.

ಮಕ್ಕಳು ಯಾವ ರೀತಿ ಸಾವನ್ನಪ್ಪಿದ್ದಾರೆ ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಮಕ್ಕಳ ಕತ್ತಿನ ಮೇಲೆ ಮಾರ್ಕ್ ಇದೆ. ಆತ್ಮಹತ್ಯೆಗೂ ಮುನ್ನ ವಾಟ್ಸ್ಯಾಪ್ ಮೂಲಕ ವಿಡಿಯೊ ಕಳುಹಿಸಿದ್ದಾರೆ. ತನಿಖೆ ಬಳಿಕ ಮತ್ತಷ್ಟು ವಿವರಗಳು ತಿಳಿಯಲಿವೆ. ಒಂದು ವರ್ಷದ ಹಿಂದೆ ನಗರಕ್ಕೆ ಬಂದು ವಾಸವಿದ್ದರು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT