ಮಂಗಳವಾರ, ಜೂನ್ 15, 2021
21 °C

ಅಡಿಕೆಗೆ ಹೂ ಗೊಂಚಲು ಒಣಗುವ ರೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಅಡಿಕೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದು, ಹೂ ಗೊಂಚಲು (ಹೊಂಬಾಳೆ) ಒಣಗುವ ರೋಗ ಕಾಣಿಸಿಕೊಂಡಿದೆ.

ಈ ರೋಗ ಬೇಸಿಗೆಯಲ್ಲಿ ಹೆಚ್ಚು ಕಾಡುತ್ತಿದ್ದು, ತೀವ್ರ ಸ್ವರೂಪ ಪಡೆದುಕೊಂಡಿದೆ. ಈಗಾಗಲೇ ಅಡಿಕೆ ಮರದಲ್ಲಿ 2–3 ಹೂ ಗೊಂಚಲು ಬಂದಿದ್ದು ರೋಗದಿಂದ ಒಣಗುತ್ತಿವೆ. ಜತೆಗೆ ಹಿಂಗಾರು ಬಲೆ ನೇಯುವ ಹುಳುವಿನ ಬಾಧೆಯೂ ಕಾಡುತ್ತಿದೆ.

ರೋಗದ ಲಕ್ಷಣಗಳು: ಇಡೀ ವರ್ಷ ರೋಗ ಬಾಧಿಸಿದರೂ ಫೆಬ್ರುವರಿ– ಮೇ ನಡುವೆ ಹೆಚ್ಚು ತೀವ್ರತೆ ಪಡೆದುಕೊಳ್ಳುತ್ತದೆ. ವಾತಾವರಣದ ವೈಪರೀತ್ಯದಿಂದ ಪ್ರಸಕ್ತ ಹಂಗಾಮಿನಲ್ಲಿ ರೋಗ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಪಟೂರು ತಾಲ್ಲೂಕು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಒ.ಆರ್.ನಾಗರಾಜು ಎಚ್ಚರಿಸಿದ್ದಾರೆ.

ಮೊದಲಿಗೆ ಹೂ ಗೊಂಚಲು ಹಳದಿಯಾಗಿ ನಂತರ ಕಂದು ಬಣ್ಣಕ್ಕೆ ತಿರುಗಿ ಒಣಗುತ್ತದೆ. ಎಳೆ ಕಾಯಿಗಳು ಉದುರುತ್ತವೆ. ರೋಗವು ಶಿಲೀಂಧ್ರ ರೋಗಾಣು ಹಾಗೂ ಇತರೆ ಕಾರಣಗಳಿಂದಲೂ ಉಂಟಾಗಬಹುದು. ಹವಾಮಾನ ವೈಪರೀತ್ಯ, ಕಾಲಕ್ಕೆ ಸರಿಯಾಗಿ ಪರಾಗ ಸ್ಪರ್ಶ ಆಗದಿರುವುದು, ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ, ನೀರಿನ ಕೊರತೆ, ಹೆಚ್ಚಿದ ಉಷ್ಣಾಂಶ, ಮರದ ಶಾರೀರಿಕ ಲಕ್ಷಣಗಳು ಕಾರಣವಾಗುತ್ತವೆ. ರೋಗವನ್ನು ಬಸವನ ಹುಳು, ಇರುವೆ, ಗೊದ್ದಗಳು ಒಂದು ಮರದಿಂದ ಇನ್ನೊಂದು ಮರಕ್ಕೆ ಹರಡುತ್ತವೆ.

ಹಾನಿಯ ಲಕ್ಷಣ: ಹೂ ಗೊಂಚಲು (ಇಂಗಾರ) ತಿನ್ನುವ ಹುಳು ಪತಂಗದ ಜಾತಿಗೆ ಸೇರಿದ್ದು, ಇಂಗಾರದ ಕವಚದ ಮೇಲೆ ಮೊಟ್ಟೆಗಳನ್ನಿಡುತ್ತವೆ. ಒಂದು ಹೆಣ್ಣು ಪತಂಗ 100ರಿಂದ 150 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯಿಂದ ಹೊರ ಬಂದ ಮರಿ ಕೀಟಗಳು ಇಂಗಾರದ ಕವಚದಿಂದಲೇ ಒಳಹೋಗಿ ತಿನ್ನುತ್ತವೆ. ಆದ್ದರಿಂದ ಹೊಂಬಾಳೆ ಅರಳದೆ ಕೊಳೆಯಲು ಪ್ರಾರಂಭಿಸುತ್ತದೆ. ಹೊಂಬಾಳೆ ಮರದಿಂದ ಹೊರ ಮೂಡಿದ ಮೇಲೆಯೇ ಆಕ್ರಮಿಸುತ್ತವೆ.

ಈ ಕೀಟಗಳು ವಾಸಿಸುವಲ್ಲಿ ಬಲೆಗಳನ್ನು ನೇಯ್ದುಕೊಂಡು ಹೂ ಗೊಂಚಲಿನ ಗಂಡು ಮತ್ತು ಹೆಣ್ಣು ಹೂಗಳನ್ನು ತಿಂದು ನಾಶ ಮಾಡುತ್ತವೆ. ಇವು ಪರಾಗಸ್ಪರ್ಶಕ್ಕೂ ಅಡ್ಡಿ ಮಾಡುತ್ತವೆ.

ಹುಳುಗಳು ಹೂ ಗೊಂಚಲು ಕೊರೆದು ತೂತು ಮಾಡುವುದರಿಂದ ಅವು ಮುದ್ದೆಯಾಗಿ ಒಣಗುತ್ತವೆ. ಈ ಕೀಟದ ಪತಂಗಗಳು ನಸು ಹಳದಿ ಬಣ್ಣ ಹೊಂದಿದ್ದು, ಇದರ ಮರಿಗಳು ಸುಮಾರು 2 ಸೆಂ.ಮೀ ಉದ್ದವಿದ್ದು ಕಂದು ಬಣ್ಣವಿರುತ್ತವೆ.

ನಿಯಂತ್ರಣ ಕ್ರಮಗಳು: ರೋಗಕ್ಕೆ ತುತ್ತಾಗಿ ಒಣಗಿದ, ಬಲೆ ನೇಯ್ದಿರುವ ಹೂ ಗೊಂಚಲು ತೆಗೆದು ನಾಶ ಪಡಿಸುವುದರಿಂದ ರೋಗ ಹರಡದಂತೆ ತಡೆಯಬಹುದು. ಬಲಿತ ಹೂ ಗೊಂಚಲನ್ನು ಕೊಕ್ಕೆಯಿಂದ ಸೀಳಿ ಅರಳಿದ ನಂತರ ಎಲ್ಲಾ ಹೂ ಗೊಂಚಲುಗಳಿಗೂ ಸಿಂಪಡಣೆ ಮಾಡಬೇಕು. ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ವ್ಯವಸ್ಥೆ ಕೈಗೊಳ್ಳಬೇಕು ಎಂದು ವಿಜ್ಞಾನಿ ಒ.ಆರ್.ನಾಗರಾಜು ಸಲಹೆ ಮಾಡಿದ್ದಾರೆ.

ಮಣ್ಣು ಪರೀಕ್ಷೆ ಆಧಾರದ ಮೇಲೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಾಡಬೇಕು. ಪೊಟ್ಯಾಷ್ ಸರಿಯಾದ ಪ್ರಮಾಣದಲ್ಲಿ ನೀಡಬೇಕು.
ಪ್ರತಿ ಲೀಟರ್ ನೀರಿಗೆ 2 ಗ್ರಾಂ ಮ್ಯಾಂಕೋಜೆಬ್ ಹಾಗೂ ಕಾರ್ಬನ್ಡೇಜಿಂ (ಸಾಫ್) ಶಿಲೀಂಧ್ರ ನಾಶಕ ಹಾಗೂ 2 ಮಿಲಿ ಕ್ಲೋರೋಫೈರಿಫಾಸ್ ಕೀಟನಾಶಕ ಬೆರೆಸಿದ ದ್ರಾವಣವನ್ನು ಹೂ ಗೊಂಚಲುಗಳು ಸಂಪೂರ್ಣವಾಗಿ ತೊಯ್ಯುವಂತೆ ಸಿಂಪಡಿಸಬೇಕು. ಪ್ರತಿ 200 ಲೀಟರ್ ಸಿಂಪಡಿಸುವ ದ್ರಾವಣಕ್ಕೆ 200 ಮಿಲಿ ಯಾವುದಾದರೂ ಅಂಟು ಬೆರಸುವುದು ಸೂಕ್ತ.

ರೋಗ ಬಾಧೆಯು ಹೆಚ್ಚಾದರೆ ಅಗತ್ಯಕ್ಕೆ ಅನುಗುಣವಾಗಿ 20– 25 ದಿನಗಳ ನಂತರ ಮತ್ತೊಮ್ಮೆ ಸಿಂಪಡಿಸಬಹುದು. ತೋಟಗಳಲ್ಲಿ ಬಸವನ ಹುಳು, ಗೊದ್ದ, ಇರುವೆ ನಿಯಂತ್ರಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು