ಮಧುಗಿರಿ: ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದ್ದರೂ, ಈವರೆಗೂ ಪರಿಹಾರ ನೀಡಿಲ್ಲ. ಆದರೆ ತುಮುಲ್ ಘೋಷಣೆ ಮಾಡದೇ ಕೋವಿಡ್ ಮೃತರ ಕುಟುಂಬಗಳಿಗೆ ₹1 ಲಕ್ಷ ಪರಿಹಾರ ನೀಡಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಪಟ್ಟಣದ ಹಾಲು ಶೇಖರಣ ಉಪಕೇಂದ್ರ ಆವರಣದಲ್ಲಿ ತುಮುಲ್ ಕಲ್ಯಾಣ ಟ್ರಸ್ಟ್ ಮತ್ತು ತುಮುಲ್‌ನಿಂದ ಕೋವಿಡ್‌ನಿಂದ ಮೃತಪಟ್ಟ ಹಾಲು ಉತ್ಪಾದಕ ಕುಟುಂಬಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
ರೈತರು ಆರ್ಥಿಕವಾಗಿ ಸದೃಢರಾಗಲು ಅನೇಕ ಯೋಜನೆ ರೂಪಿಸಿಕೊಂಡು ತುಮುಲ್ ಮುನ್ನುಗ್ಗುತ್ತಿದೆ ಎಂದರು.
ಎತ್ತಿನಹೊಳೆ ಯೋಜನೆ ತ್ವರಿತವಾಗಿ ಜಾರಿ ಮಾಡಲು ಸರ್ಕಾರಕ್ಕೆ ಬದ್ಧತೆಯೇ ಇಲ್ಲದಂತಾಗಿದೆ. ಈ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಕೊರಟಗೆರೆ ತಾಲ್ಲೂಕಿನ ಬೈರಗೊಂಡ್ಲು ಕೆರೆ ನಿರ್ಮಾಣಕ್ಕೆ ಸರ್ಕಾರ ಸಹಕಾರ ನೀಡುತ್ತಿಲ್ಲ. ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಪರಿಹಾರದ ವ್ಯತ್ಯಾಸವನ್ನು ಸರಿಪಡಿಸುತ್ತಿಲ್ಲ ಎಂದು ಆರೋಪಿಸಿದರು.
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಜಿಲ್ಲಾ ಕೇಂದ್ರವಾದರೆ ಕೊರಟಗೆರೆ, ಮಧುಗಿರಿ, ಶಿರಾ ಹಾಗೂ ಪಾವಗಡ ತಾಲ್ಲೂಕುಗಳು ಅಭಿವೃದ್ಧಿಯಾಗುತ್ತದೆ ಎಂದರು.
ಎತ್ತಿನ ಹೊಳೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಅನುದಾನ ಹೆಚ್ಚಿಸಬೇಕು.
ಹೈನುಗಾರಿಕೆ ಉದ್ಯಮ ರೈತರಿಗೆ ಸಂಜೀವಿನಿಯಾಗಿದೆ. ಈ ಉದ್ಯಮದಿಂದ ರೈತರು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಹೇಮಾವತಿ ನೀರು ಹರಿಸಲು ಮೂಲ ಕಾರಣ ಡಾ.ಜಿ.ಪರಮೇಶ್ವರ. ಅವರ ದೂರದೃಷ್ಟಿಯ ಫಲವಾಗಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ ಎಂದರು.
ಎಲೆ ರಾಂಪುರ ಕುಂಚಿಟಿಗ ಮಠ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ, ಸರ್ಕಾರದ ಯೋಜನೆಗಳು ರೈತರು ಹಾಗೂ ಜನರಪರ ಇರಬೇಕು. ಜಿಲ್ಲೆಯ ನೀರಾವರಿ ಯೋಜನೆಗಳು ಜಾರಿಯಾಗದಿದ್ದರೆ ಹೋರಾಟಕ್ಕೆ ಜನರು ಸಿದ್ಧರಾಗಬೇಕು ಎಂದರು.
ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ರೈತರಿಗೆ ವಾರಕ್ಕೊಮ್ಮೆ ಸರಿಯಾಗಿ ಬಟವಾಡೆ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ರೈತರು ಗುಣಮಟ್ಟದ ಹಾಲು ನೀಡುವ ಮೂಲಕ ತುಮುಲ್ ಅನ್ನು ಉಳಿಸಬೇಕು ಎಂದರು.
ಕೋವಿಡ್‌ನಿಂದ ಮೃತಪಟ್ಟ 37 ಜನರ ಕುಟುಂಬಗಳಿಗೆ ತಲಾ ₹1 ಲಕ್ಷ, 47 ಮಂದಿಗೆ ₹50 ಸಾವಿರ, 69 ಹಸುಗಳ ಮಾಲೀಕರಿಗೆ ತಲಾ ₹50 ಸಾವಿರ, ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾದ 18 ರೈತರಿಗೆ ತಲಾ ₹10 ಸಾವಿರ, 23 ಮೇವು ಕತ್ತರಿಸುವ ಯಂತ್ರ ಹಾಗೂ 6 ಹಾಲು ಕರೆಯುವ ಯಂತ್ರಗಳನ್ನು ವಿತರಿಸಲಾಯಿತು.
ತುಮುಲ್ ನಿರ್ದೇಶಕರಾದ ಪ್ರಕಾಶ್, ಹಳೇಮನೆ ಶಿವನಂಜಪ್ಪ, ರೇಣುಕಪ್ರಸಾದ್, ಚನ್ನಮಲ್ಲಯ್ಯ, ಈಶ್ವರಪ್ಪ, ಪುರಸಭೆ ಅಧ್ಯಕ್ಷ ತಿಮ್ಮರಾಜು, ಜಿ.ಪಂ. ಮಾಜಿ ಸದಸ್ಯ ಕೆಂಚಮಾರಯ್ಯ, ಸದಸ್ಯರಾದ ಎಂ.ಎಸ್.ಚಂದ್ರಶೇಖರ್ ಬಾಬು, ಎಂ.ಎಸ್.ಚಂದ್ರಶೇಖರ್, ಎಂ.ಆರ್.ಜಗನ್ನಾಥ್, ನಾರಾಯಣ್, ನರಸಿಂಹಮೂರ್ತಿ, ತುಮುಲ್ ವಿಸ್ತರಣಾಧಿಕಾರಿ ಗಿರೀಶ್, ಶಂಕರನಾಗ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುಮುಖ್, ಮುಖಂಡರಾದ ಎಂ.ಜಿ. ಶ್ರೀನಿವಾಸಮೂರ್ತಿ, ಚಂದ್ರಶೇಖರ್ ಗೌಡ, ಕುಮಾರ್, ಬಿ.ಎಸ್.ಶ್ರೀನಿವಾಸ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.