ಭಾನುವಾರ, ಜೂನ್ 26, 2022
21 °C
ಕೋವಿಡ್ ಸಂಕಷ್ಟದ ಸಮಯದಲ್ಲೂ ಸಂಬಳ ಇಲ್ಲದೆ ಕೆಲಸ ಮಾಡಬೇಕಾದ ಸ್ಥಿತಿ

ತುಮಕೂರು: ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ವರ್ಷದಿಂದ ವೇತನವಿಲ್ಲ

ಕೆ.ಜೆ. ಮರಿಯಪ್ಪ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ಕೆಳ ಹಂತದ ಸಿಬ್ಬಂದಿಗೆ ಕಳೆದ ಒಂದು ವರ್ಷದಿಂದ ವೇತನವಿಲ್ಲದೆ ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಕೋವಿಡ್–19 ಸಂಕಷ್ಟದ ಸಮಯದಲ್ಲೂ ಸಂಬಳ ಇಲ್ಲದೆಯೂ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳಿಗೆ ಕಾಲಕಾಲಕ್ಕೆ ವೇತನ ಸಿಗುತ್ತಿದೆ. ಅದಕ್ಕಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಅಧಿಕಾರಿಗಳಿಂದ ಕೆಳ ಹಂತದಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು, ವಾಟರ್ ಮೆನ್, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್‌ಗಳಿಗೆ ವೇತನ ಸಿಗದಾಗಿದೆ. ಜಿಲ್ಲೆಯಲ್ಲಿ 331 ಗ್ರಾ.ಪಂ.ಗಳಿದ್ದು, ವೇತನ ಸಿಗದೆ 4,500ರಿಂದ 5 ಸಾವಿರ ಸಿಬ್ಬಂದಿ ದುಡಿಯುತ್ತಿದ್ದಾರೆ. ಕೆಲ ಬೆರಳೆಣಿಕೆಯಷ್ಟು ಗ್ರಾ.ಪಂ.ಗಳು ಮಾತ್ರ ಸಂಬಳ ಕೊಟ್ಟಿದ್ದರೆ ಬಹುತೇಕ ಕಡೆಗಳಲ್ಲಿ ವೇತನ ನೀಡಿಲ್ಲ. ಇದಕ್ಕಾಗಿ ಸಿಬ್ಬಂದಿ ಆಗಾಗ ಹೋರಾಟ ಮಾಡುತ್ತಲೇ ಬಂದಿದ್ದರೂ ಸ್ಪಂದನೆ ಇಲ್ಲವಾಗಿದೆ.

ಬಿಲ್ ಕಲೆಕ್ಟರ್ ಹಾಗೂ ನಂತರದ ಸ್ಥಾನದಲ್ಲಿ ದುಡಿಯುತ್ತಿರುವ ಸಿಬ್ಬಂದಿಗೆ ವೇತನ ಪಾವತಿಗೆ ಮೂರು ತಿಂಗಳಿಗೆ ಒಮ್ಮೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಈ ಹಣದಲ್ಲಿ ಪೂರ್ಣ ಪ್ರಮಾಣದಲ್ಲಿ ವೇತನ ನೀಡಲು ಸಾಲದಾಗುತ್ತದೆ. ಆದರೆ ಸ್ಥಳೀಯ ಸಂಪನ್ಮೂಲ ಬಳಸಿಕೊಳ್ಳಲು ಅವಕಾಶವಿದ್ದರೂ ಅತ್ತ ಕಡೆಗೆ ಗಮನ ಹರಿಸುತ್ತಿಲ್ಲ. ವೇತನ ಕೊರತೆ ನೀಗಿಸಿಕೊಳ್ಳಲು, ವಾಟರ್ ಮೆನ್, ಪೌರ ಕಾರ್ಮಿಕರಿಗೆ 15ನೇ ಹಣಕಾಸು ಯೋಜನೆಯಲ್ಲಿ ಕ್ರಿಯಾ ಯೋಜನೆ ರೂಪಿಸಿಕೊಂಡು ಸಂಬಳ ನೀಡಬಹುದಾಗಿದೆ. ಅಂತಹ ಪ್ರಯತ್ನ ಬಹುತೇಕ ಕಡೆಗಳಲ್ಲಿ
ನಡೆದಿಲ್ಲ.

ಗ್ರಾ.ಪಂ ಸಂಗ್ರಹಿಸುವ ತೆರಿಗೆಯಲ್ಲಿ ಶೇ 40ರಷ್ಟು ಹಣವನ್ನು ಬಿಲ್ ಕಲೆಕ್ಟರ್‌, ಜವಾನರಿಗೆ ವೇತನ ನೀಡಲು ಮೀಸಲಿಡಬಹುದು. ಬಹುತೇಕ ಗ್ರಾ.ಪಂ ಅಧಿಕಾರಿಗಳು ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ಕಾರ್ಯ ನಿರ್ವಹಣೆಯಲ್ಲಿನ ಲೋಪವೇ ಹೊರತು, ಸಂಪನ್ಮೂಲದ ಕೊರತೆಯಲ್ಲ ಎಂಬುದು ಸಿಬ್ಬಂದಿಯ ಪ್ರಮುಖ ಆರೋಪ.

ಸುಮಾರು 5 ಸಾವಿರ ಸಿಬ್ಬಂದಿಗೆ ಒಂದು ವರ್ಷದಿಂದ ವೇತನ ಇಲ್ಲದೆ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಇತ್ತ ಕೆಲಸವನ್ನು ಬಿಡಲಾಗದೆ, ಅತ್ತ ಸಂಬಳವಿಲ್ಲದೆ ದುಡಿಯಬೇಕಾಗಿದೆ. ಬರಿಗೈಯಲ್ಲಿ ಕುಟುಂಬ ನಿರ್ವಹಣೆ ಮಾಡಬೇಕಾಗಿದೆ.

ಇಂದು, ನಾಳೆ ವೇತನ ಬರಬಹುದು ಎಂಬ ಕಾರಣಕ್ಕೆ ಸಾಲ ಮಾಡಿಕೊಳ್ಳುತ್ತಲೇ ಸಾಗಿದ್ದಾರೆ. ಇದು ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬಿಲ್ ಕಲೆಕ್ಟರ್‌ಗಳು ಪ್ರಾಮಾಣಿಕವಾಗಿ ಹೇಗೆ ಕೆಲಸ ಮಾಡಲು ಸಾಧ್ಯ ಎಂಬ ಪ್ರಶ್ನೆಯೂ ಮೂಡುತ್ತದೆ.

ಕನಿಷ್ಠ ವೇತನ: ರಾಜ್ಯ ಸರ್ಕಾರ ಕನಿಷ್ಠ ವೇತನ ನಿಯಮವನ್ನು ಜಾರಿಮಾಡಿ ವರ್ಷಗಳೇ ಕಳೆದಿದ್ದರೂ ಬಹುತೇಕ ಗ್ರಾ.ಪಂ.ಗಳಲ್ಲಿ
ತಮ್ಮ ನೌಕರರಿಗೆ ಕನಿಷ್ಠ ವೇತನ ನೀತಿಯನ್ನು ಜಾರಿ ಮಾಡಿಲ್ಲ. ಪಿಡಿಒ, ಕಾರ್ಯದರ್ಶಿಗಳು ಕೊಟ್ಟಷ್ಟು ಸಂಬಳಕ್ಕೆ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಬಿಟ್ಟರೆ ಕೆಲಸ ಹೋಗುತ್ತದೆ ಎಂಬ ಕಾರಣಕ್ಕೆ ಕೆಲಸ ಮಾಡುತ್ತಿದ್ದೇವೆ ಎಂದು ಗ್ರಾ.ಪಂ ಸಿಬ್ಬಂದಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು