ಗುರುವಾರ , ಜನವರಿ 23, 2020
19 °C
ಜಿಲ್ಲೆಯ ಎಲ್ಲೆಡೆ ತೀವ್ರವಾಗುತ್ತಿವೆ ದಾಳಿಗಳು; ಮೂರು ಮಂದಿಯ ಬಲಿ

ಚಿರತೆ ದಾಳಿಗೆ ಚೆಲ್ಲುತ್ತಲೇ ಇದೆ ರಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಚಿರತೆ ದಾಳಿಗೆ ಜಿಲ್ಲೆಯಲ್ಲಿ ಜನರ ಮತ್ತು ಪ್ರಾಣಿಗಳ ರಕ್ತ ಚೆಲ್ಲುತ್ತಲೇ ಇದೆ. ಈ ದಾಳಿಗಳು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮತ್ತೊಂದು ಕಡೆ ಆಡಳಿತ ವ್ಯವಸ್ಥೆ ಮತ್ತು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಸಹ ಮೂಡಿಸಿದೆ.

ಜಿಲ್ಲೆಯಲ್ಲಿ ವಾರಕ್ಕೆ ಕನಿಷ್ಠ ಎರಡು ಮೂರು ಕಡೆಗಳಲ್ಲಿಯಾದರೂ ಚಿರತೆ ದಾಳಿ ಪ್ರಕರಣಗಳು ನಡೆಯುತ್ತಿವೆ. ಹಸು, ಕುರಿ, ಮೇಕೆಗಳ ಮೇಲೆ ನಡೆಯುತ್ತಿದ್ದ ದಾಳಿಗಳು ಈಗ ಮನುಷ್ಯರ ಮೇಲೆ ತಿರುಗಿದೆ. ರಕ್ತದ ರುಚಿ ನೋಡಿದ ಚಿರತೆಗಳು ಯಾವಾಗ ಎಲ್ಲಿ ದಾಳಿ ನಡೆಸುತ್ತವೆ ಎನ್ನುವ ಭಯ ಕಾಡಂಚಿನ ಗ್ರಾಮಗಳ ಜನರಲ್ಲಿ ಮನೆ ಮಾಡಿದೆ.

ಇದಿಷ್ಟೇ ಅಲ್ಲ ಈಗ ಕಾಡಂಚಿನ ಗ್ರಾಮಗಳಷ್ಟೇ ಅಲ್ಲ ಎಲ್ಲ ಕಡೆಗಳಲ್ಲಿಯೂ ಚಿರತೆ ದಾಳಿಗಳು ಹೆಚ್ಚುತ್ತಿವೆ.  ಗುರುವಾರ ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಮಣಿಕುಪ್ಪೆ ಗ್ರಾಮದಲ್ಲಿ ಶಿವಕುಮಾರ್ ಅವರ ಏಕೈಕ ಪುತ್ರ ಶಮಂತ್‌ ಗೌಡ ಚಿರತೆ ದಾಳಿಗೆ ಬಲಿಯಾಗಿದ್ದಾನೆ. ಕೆಲವು ದಿನಗಳ ಹಿಂದೆ ಕುಣಿಗಲ್ ತಾಲ್ಲೂಕಿನ ದೊಡ್ಡಮಳಲವಾಡಿಯ ಅಂದಾನಪ್ಪ ಮತ್ತು ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿಯ ಬನ್ನಿಕುಪ್ಪೆಯ ಲಕ್ಷ್ಮಮ್ಮ ಅವರು ಚಿರತೆಗೆ ಆಹಾರವಾಗಿದ್ದರು.

ಜಿಲ್ಲೆಯ 93 ಹಳ್ಳಿಗಳಲ್ಲಿ ಮಾನವ–ಚಿರತೆ ಸಂಘರ್ಷ ಇದೆ ಎಂದು ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ದಾಖಲಿಸಿದ್ದಾರೆ. ಆದರೆ ಈಗ ಈ ಸಂಖ್ಯೆ ಬಹುಶಃ ಹೆಚ್ಚಾಗಿರಬಹುದು. ಗುಬ್ಬಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಕುಣಿಗಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಈ ದಾಳಿಗಳು ಹೆಚ್ಚುತ್ತಲೇ ಇವೆ.

ಈ ಮೂರು ಸಾವುಗಳು ಸಂಭವಿಸಿರುವುದು ಕುಣಿಗಲ್, ತುಮಕೂರು ಮತ್ತು ಗುಬ್ಬಿ ತಾಲ್ಲೂಕು ಸಂಪರ್ಕಿಸುವ ಸ್ಥಳಗಳಲ್ಲಿ. ಈ ಒಂದೇ ವಲಯದಲ್ಲಿ ದುರ್ಘಟನೆ ಪದೇ ಪದೇ ನಡೆಯುತ್ತಿದೆ. ಈ ಹಿಂದೆ ಎರಡು ‘ಬಲಿ’ ಪ್ರಕರಣಗಳು ಆದಾಗ ಅರಣ್ಯ ಇಲಾಖೆ ಚಿರತೆ ಹಿಡಿಯಲು 15 ಕಿಲೋಮಿಟರ್ ವ್ಯಾಪ್ತಿಯ ಹಳ್ಳಿಗಳಲ್ಲಿ 40ಕ್ಕೂ ಹೆಚ್ಚು ಬೋನ್‌ಗಳನ್ನು ಇಟ್ಟಿತ್ತು. ಇಂದಿಗೂ ಆ ಬೋನುಗಳು ಇವೆ. ಆದರೆ ಚಿರತೆ ದಾಳಿ ಮಾತ್ರ ನಿರಾತಂಕವಾಗಿ ನಡೆಯುತ್ತಿದೆ.

ಯಾರ ವೈಫಲ್ಯ

ಚಿರತೆಗಳ ಅವ್ಯಾಹತ ದಾಳಿಗೆ ಹೊಣೆ ಯಾರು? ಈ ವಿಚಾರದಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆಯೇ? ಜಿಲ್ಲಾಡಳಿತವೂ ಕಣ್ಮಿಚ್ಚಿದೆಯೇ? ಎನ್ನುವ ಪ್ರಶ್ನೆ ಜನರಲ್ಲಿ ಮೂಡಿದೆ.

ಗ್ರಾಮಗಳಲ್ಲಿ ಅವ್ಯಾಹತವಾಗಿ ಬೆಳೆದಿರುವ ಪೊದೆಗಳು ಚಿರತೆಗಳ ಆವಾಸತಾಣಗಳಾಗಿವೆ. ಇವುಗಳನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಬೇಕಿದೆ. ಆದರೆ ಈ ಯಾವ ಕೆಲಸಗಳೂ ಆಗುತ್ತಿಲ್ಲ ಎನ್ನುವುದು ಪ್ರಜ್ಞಾವಂತರ ಆರೋಪ.

ಹೆಬ್ಬೂರಿನಲ್ಲಿ ಪ್ರತಿಭಟನೆ

ಶಮಂತ್ ಗೌಡ ಸಾವಿನ ಹಿನ್ನೆಲೆಯಲ್ಲಿ ಹೆಬ್ಬೂರಿನಲ್ಲಿ ನಾಗರಿಕರು ಕುಣಿಗಲ್– ತುಮಕೂರು ರಸ್ತೆ ತಡೆ ನಡೆಸಿದರು. ಸಂಜೆ 6ರ ವೇಳೆಯಲ್ಲಿ ಸ್ವಯಂ ಪ್ರೇರಿತರಾಗಿ ಜಮಾವಣೆಗೊಂಡ ಜನರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲಾಖೆಯ ಬೇಜವಾಬ್ದಾರಿಯಿಂದಲೇ ಇಂತಹ ಪ್ರಕರಣಗಳು ನಡೆಯುತ್ತಿವೆ. ಮೊದಲು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಕ್ರಮವಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಗಿಲು ಮುಟ್ಟಿದ ಆಕ್ರಂದನ

ಶಮಂತ್ ಸಾವನ್ನು ಕಣ್ಣಾರೆ ಕಂಡ ಆತನ ಅಜ್ಜಿಯ ರೋದನ ಮುಗಿಲು ಮುಟ್ಟಿತ್ತು. ಒಬ್ಬನೇ ಮಗನನ್ನು ಕಳೆದುಕೊಂಡ ನೋವು ಆತನ ತಂದೆ–ತಾಯಿಯನ್ನು ತೀವ್ರವಾಗಿ ದುಃಖಿಸುವಂತೆ ಮಾಡಿತ್ತು. ನೆಲಕ್ಕೆ ಬಿದ್ದ ಆತನ ತಾಯಿ ಎದೆ ಬಡಿದುಕೊಂಡು ಕಣ್ಣೀರಿಟ್ಟರು. ನೆರೆದಿದ್ದ ಗ್ರಾಮಸ್ಥರ ಕಣ್ಣಾಲಿಗಳು ಸಹ ತೇವಗೊಂಡವು. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಸಿ.ಎಸ್.ಪುರ ಪಿ.ಎಸ್.ಐ ಹಾಗೂ ಅರಣ್ಯಾಧಿಕಾರಿ ರವಿ ಮತ್ತು ಸಿಬ್ಬಂದಿ ಹಾಗೂ ಶಾಸಕ ಜಯರಾಮ್ ,ತಹಶೀಲ್ದಾರ್ ಮಮತಾ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸಿ.ಎಸ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು