ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಗುತ್ತಿಗೆದಾರರ ನಿರ್ಲಕ್ಷ್ಯ: ಕೆರೆಯಾಗಿ ಮಾರ್ಪಟ್ಟ ಹೆದ್ದಾರಿ

ವಾಹನ ಸವಾರರ ಪರದಾಟ
Last Updated 24 ಏಪ್ರಿಲ್ 2021, 6:56 IST
ಅಕ್ಷರ ಗಾತ್ರ

ಹುಳಿಯಾರು: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿ ಒಂದೂವರೇ ವರ್ಷಗಳೇ ಉರುಳಿದರೂ, ಕಾಮಗಾರಿ ಮುಗಿಯದ ಕಾರಣ ರಾಮಗೋಪಾಲ್‌ ವೃತ್ತದ ಬಳಿ ಸಂಚಾರ ಅಸ್ತವ್ಯಸ್ತವಾಗಿತ್ತು.ಇನ್ನೂ ಗುರುವಾರ ರಾತ್ರಿ ಬಿದ್ದ ಮಳೆಗೆ
ಕೆರೆಯಾಗಿ ಮಾರ್ಪಟ್ಟು ವಾಹನಗಳ ಸವಾರರು ಸಂಚಾರಕ್ಕೆ ಪರದಾಡಿದರು.

ರಾಮಗೋಪಾಲ್ ವೃತ್ತದ ಬಳಿ ಕಾಮಗಾರಿ ಅವಧಿ ಮುಗಿದರೂ ಹೆದ್ದಾರಿ ಗುತ್ತಿಗೆದಾರರು ಕಾಮಗಾರಿ ಮುಗಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ. ಇನ್ನು ಸಾಮಾನ್ಯ
ಜನಮಾತ್ರ ನಿತ್ಯವೂ ದೂಳಿನ ಸ್ನಾನಮಾಡುತ್ತಿದ್ದವರು ಈಗ ಕೆಸರು, ನೀರಿನ ಮಜ್ಜನದಲ್ಲಿ ತೊಯ್ಯುತ್ತಿದ್ದಾರೆ.

ಎಸ್‌ಎಲ್‌ಆರ್‌ ಪೆಟ್ರೋಲ್‌ ಬಂಕ್‌ನಿಂದ ರಾಮಗೋಪಾಲ್‌ ವೃತ್ತದವರೆಗೆ ಹೆದ್ದಾರಿಯಲ್ಲಿ ವಾಹನಗಳು ಮತ್ತು ಜನರು ಸಂಚರಿಸುವುದು ಸವಾಲಿನ ಕೆಲಸವಾಗಿದೆ. ಅಪೂರ್ಣವಾದ ರಸ್ತೆ ಕಾಮಗಾರಿಯ ಸಮಸ್ಯೆ ಒಂದೆಡೆಯಾದರೆ, ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿ ಕಾಮಗಾರಿ ಸಾಕಷ್ಟು ಸಮಸ್ಯೆ ಒಡ್ಡುತ್ತಿದೆ.

ಅಲ್ಪಸ್ವಲ್ಪ ಮಳೆಯಾದರೂ ಸಹ ಮೊಳಕಾಲುದ್ದ ನಿಲ್ಲುವ ನೀರು ಎಲ್ಲೂ ಹರಿಯದೆ ವಾಹನ ಸವಾರರಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಚರಂಡಿ ನೀರು ಹರಿಯಲು ಮಾಡಿರುವ ಕಾಮಗಾರಿ ಮಳೆ ನೀರು ಹರಿಯಲು ಆಸ್ಪದ ಕೊಡದೆ ನಿಂತ ಜಾಗದಲ್ಲೇ ನೀರು ನಿಲ್ಲುತ್ತಿದ್ದು ಸೊಳ್ಳೆಗಳ ಕಾಟ, ಕೊಳಚೆ ನೀರಿನ ವಾಸನೆ ತಡೆಯದಾಗಿದೆ. ನಿನ್ನೆ ರಾತ್ರಿ ಬಂದಿರುವ ಅಲ್ಪಸ್ವಲ್ಪ ಮಳೆಗೆ ರಸ್ತೆಯಲ್ಲಿ ನೀರು ನಿಂತಿದ್ದು ಅದಕ್ಕೆ ಚರಂಡಿಯ ಕೊಳಚೆ ನೀರು ಸಹ ಸೇರಿ ವಾಹನ ಸವಾರರು ಸಂಚರಿಸಲು ಪರದಾಡಿದರು. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ನಿಂತಿರುವ ನೀರನ್ನು ತೆಗೆಯುವುದರ ಜೊತೆಗೆ ಚರಂಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಳೆ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಹದ ಮಳೆಯಾಗಿ ಭೂಮಿಗೆ ತಂಪೆರೆದಿದೆ.

ಸಂಜೆ ಗುಡುಗುಸಹಿತ ಆರಂಭವಾದ ಮಳೆ ಮಧ್ಯರಾತ್ರಿವರೆಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT