ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನವಳ್ಳಿ ಕೆರೆಗೆ ನೀರು ತುಂಬಿಸಲು ಮಹಾರಾಜರಿಗೆ ಬರೆದಿದ್ದ 1951ರ ಪತ್ರ ವೈರಲ್‌

70 ವರ್ಷಗಳ ಹಿಂದಿನ ಪತ್ರ ವೈರಲ್
Last Updated 9 ಜನವರಿ 2021, 13:39 IST
ಅಕ್ಷರ ಗಾತ್ರ

ತುಮಕೂರು: ತಿಪಟೂರು ತಾಲ್ಲೂಕು ಹೊನ್ನವಳ್ಳಿಯಲ್ಲಿ ನೀರಿನ ಸಮಸ್ಯೆ ಪರಿಹರಿಸುವಂತೆ ಕೋರಿ 1951ರ ಆಗಸ್ಟ್ 8ರಂದು ಹೊನ್ನವಳ್ಳಿಯ ಜನರು ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರಲ್ಲಿ ಕೋರಿರುವ ಮನವಿ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೋಬಳಿಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವಂತೆ ಹೊನ್ನವಳ್ಳಿ ಭಾಗದಲ್ಲಿ ನೀರಾವರಿ ಹೋರಾಟ ಪದೇ ಪದೇ ನಡೆಯುತ್ತಿದೆ. ಹೊನ್ನವಳ್ಳಿ ನೀರಾವರಿ ಹೋರಾಟ ಸಮಿತಿ ಸಹ ಅಸ್ತಿತ್ವಕ್ಕೆ ಬಂದಿದೆ.

ಈ ಭಾಗದ ಜನರದ್ದು ಕೇವಲ ಇಂದಿನ ಹೋರಾಟವಲ್ಲ ನೀರಿಗಾಗಿ 7 ದಶಕಗಳ ಹೋರಾಟ ಎಂದು ತಿಪಟೂರು ಹಾಗೂ ಹೊನ್ನವಳ್ಳಿ ಭಾಗದ ಜನರು ಜಾಲತಾಣಗಳಲ್ಲಿ ಮಹಾರಾಜರಿಗೆ ನೀಡಿದ್ದ ಮನವಿ ಪತ್ರವನ್ನು ಹಂಚಿಕೊಳ್ಳುತ್ತಿದ್ದಾರೆ.

‘ಈಗ ಎಂಟು ವರ್ಷಗಳಿಂದಲೂ ಸರಿಯಾಗಿ ಮಳೆಯಿಲ್ಲದೆ ನೀರಿಗೆ ತೊಂದರೆಪಡುತ್ತಿದ್ದ ನಮಗೆ ಈಗ ಸ್ವಲ್ಪ ಮಳೆ ಆಗಿದೆ. ನೀರಿನ ತೊಂದರೆ ತಪ್ಪಿದ್ದರೂ ಸದಾ ನೀರಿನ ಕೊರತೆ ಇದ್ದೇ ಇರುವುದರಿಂದ ಈ ಗ್ರಾಮದ ಹಿರೀಕೆರೆಗೆ ಸರ್ಕಾರವರು ನಾಲಾ ಬರುವಂತೆ ತಯಾರಿಸಿರುವ ಎಸ್ಟಿಮೇಟನ್ನು ಜಾಗ್ರತೆ ಮಂಜೂರು ಮಾಡಿಸಿ. ಆ ಮೂಲಕ ಜನ, ಜಾನುವಾರುಗಳಿಗೂ ಅನುಕೂಲ ಕಲ್ಪಿಸಿಕೊಡಬೇಕಾಗಿದೆ ಪ್ರಾರ್ಥಿಸುತ್ತೇವೆ’–ರಾಜಭಕ್ತಿಯುಳ್ಳ ಹೊನ್ನವಳ್ಳಿ ಗ್ರಾಮದ ಪ್ರಜೆಗಳು ಎಂದು ಮಹಾರಾಜರಿಗೆ ವಿಜ್ಞಾಪನಾ ಪತ್ರ ಬರೆಯಲಾಗಿದೆ.

‘ಮಹಾರಾಜರು ಗ್ರಾಮಕ್ಕೆ ಬಂದಾಗ ಹೊನ್ನವಳ್ಳಿಯ ಸಾಹುಕಾರ್ ಸಿದ್ಧಲಿಂಗಪ್ಪ ಅವರ ಮನೆಯವರು ಗ್ರಾಮಸ್ಥರ ಪರವಾಗಿ ಈ ಮನವಿ ಮಾಡಿದ್ದಾರೆ. ಅಂದಿನಿಂದಲೂ ಹೊನ್ನವಳ್ಳಿಯ ನೀರಿನ ಸಮಸ್ಯೆ ಪರಿಹಾರವಾಗಿಲ್ಲ. ಇದು ಬಹಳ ದೀರ್ಘವಾದ ನೀರಾವರಿ ಹೋರಾಟ’ ಎಂದು ಹೊನ್ನವಳ್ಳಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎನ್.ಚಂದ್ರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೋಬಳಿ ಮೂಲಕ ಹಾದು ಹೋಗುತ್ತಿರುವ ನೀರಾವರಿ ಯೋಜನೆಗಳಿಂದ ನಮ್ಮ ಹೋಬಳಿಯ ಕೆರೆಗಳಿಗೆ ನೀರು ಹರಿಸಿಕೊಳ್ಳಬೇಕು. 70 ವರ್ಷಗಳಿಂದಲೂ ಕೆರೆಕಟ್ಟೆಗಳು ತುಂಬಿಲ್ಲ. ಜನ, ಜಾನುವಾರುಗಳಿಗೆ ತೊಂದರೆಯಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT