ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನ ಮಕ್ಕಳು, ಯುವಕರಲ್ಲಿ ಹೆಚ್ಚುತ್ತಿದೆ ಕೊರೊನಾ ವೈರಸ್‌ ಸೋಂಕು

ಸಾವಿನ ಸಂಖ್ಯೆ 10ಕ್ಕೆ ಏರಿಕೆ, ಮತ್ತೆ 24 ಮಂದಿಗೆ ಕೊರೊನಾ, ಸೋಂಕಿತರ ಸಂಖ್ಯೆ 292ಕ್ಕೆ ಹೆಚ್ಚಳ
Last Updated 7 ಜುಲೈ 2020, 14:53 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಮಕ್ಕಳು ಹಾಗೂ ಯುವಕರು ಕೊರೊನಾ ಸೋಂಕಿಗೆ ತುತ್ತಾಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮಂಗಳವಾರ ಸೋಂಕಿಗೆ ತುತ್ತಾದವರ ಪೈಕಿ ಬಹುತೇಕರು ಮಕ್ಕಳು ಹಾಗೂ ಯುವಕರೇ ಆಗಿದ್ದಾರೆ. ಒಂದೇ ದಿನ 5 ಮಕ್ಕಳಿಗೆ ಹಾಗೂ 10 ಮಂದಿ ಯುವಕ– ಯುವತಿಯರಿಗೆ ಸೋಂಕು ತಗುಲಿದೆ. 10 ವರ್ಷದ ಒಳಗಿನ ಮಕ್ಕಳಿಗೂ ಸೋಂಕು ಬಾಧಿಸುತ್ತಿರುವುದು ಪೋಷಕರ ಆತಂಕವನ್ನು ಹೆಚ್ಚಿಸಿದೆ.

ಪಾವಗಡ ತಾಲ್ಲೂಕು ಒಂದರಲ್ಲೇ 5 ಮಕ್ಕಳಿಗೆ ಸೋಂಕು ತಗುಲಿದೆ. ಹೊಸಹಳ್ಳಿಯ 2 ವರ್ಷದ ಗಂಡು ಮಗು, ಪಾವಗಡ ನಗರದ 7 ವರ್ಷದ ಬಾಲಕಿ, ಕೆಂಚಗಾನಹಳ್ಳಿಯ 11 ವರ್ಷದ ಬಾಲಕಿ, ಕ್ಯಾತಗಾನಕೆರೆ 7 ವರ್ಷದ ಬಾಲಕ, ದೇವಲಾಹಿಹಳ್ಳಿ ತಾಂಡದ 8 ವರ್ಷದ ಬಾಲಕಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಪಾವಗಡ ಪಟ್ಟಣದ 17 ಹಾಗೂ 18 ವರ್ಷದ ಯುವಕರು, ಗುಬ್ಬಿ ತಾಲ್ಲೂಕು ಗೊಲ್ಲರಹಟ್ಟಿ ಮಾವಿನಹಳ್ಳಿಯ 21 ವರ್ಷದ ಯುವಕ, ಪಾವಗಡ ಹೊಸಹಳ್ಳಿಯ 21 ವರ್ಷದ ಯುವತಿ, ಕೊರಟಗೆರೆ ಅಮ್ಮನಹಳ್ಳಿ ಸೋಮಾಪುರದ 21 ವರ್ಷದ ಯುವತಿ, ತುರುವೇಕೆರೆ ಮೇಲಿನ ಹೊರಗೆರೆ ಹಳ್ಳಿಯ 29 ವರ್ಷದ ಮಹಿಳೆ, ಗುಬ್ಬಿ ಬಿಳಿನಂದಿಯ 32 ವರ್ಷದ ಮಹಿಳೆ, ಪಾವಗಡ ವೈ.ಎನ್‌.ಹೊಸಕೋಟೆಯ 32 ವರ್ಷದ ಮಹಿಳೆ ಹಾಗೂ ಪಾವಗಡದ ಚಿತ್ತಗಾನಹಳ್ಳಿಯ 38 ವರ್ಷ ಹಾಗೂ ವೈ.ಎನ್.ಹೊಸಕೋಟೆಯ 40 ವರ್ಷದ ಪುರುಷರಿಗೆ ಸೋಂಕು ತಗುಲಿದೆ.

ಇನ್ನೂ ಜಿಲ್ಲೆಯಲ್ಲಿ ಕೋವಿಡ್–19 ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಂಗಳವಾರ ಒಂದೇ ದಿನ 24 ಜನರಿಗೆ ಸೋಂಕು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 292ಕ್ಕೆ ಹಾಗೂ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಮಂಗಳವಾರ ದೃಢಪಟ್ಟ ಸೋಂಕಿತರ ಪೈಕಿ ಪಾವಗಡ ತಾಲ್ಲೂಕು ಒಂದರಲ್ಲೇ 14 ಮಂದಿ ಇದ್ದಾರೆ. ಗುಬ್ಬಿ ತಾಲ್ಲೂಕಿನಲ್ಲಿ 3, ಕೊರಟಗೆರೆ 2 ಹಾಗೂ ಚಿಕ್ಕನಾಯಕನಹಳ್ಳಿ, ಕುಣಿಗಲ್, ಮಧುಗಿರಿ, ತುಮಕೂರು ಹಾಗೂ ತುರುವೇಕೆರೆಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಸೋಂಕು ದೃಢಪಟ್ಟ ಬಹುತೇಕರ ಪ್ರಯಾಣ ಮತ್ತು ಸಂಪರ್ಕಿತರ ಮಾಹಿತಿ ತಿಳಿದು ಬಂದಿಲ್ಲ. ಸೋಂಕು ಹೇಗೆ ತಗುಲಿದೆ ಇವರ ಸಂಪರ್ಕಕ್ಕೆ ಯಾರೆಲ್ಲಾ ಬಂದಿದ್ದಾರೆ ಎಂದು ಪತ್ತೆ ಹಚ್ಚುವ ಕಾರ್ಯದಲ್ಲಿ ಆರೋಗ್ಯ ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ.

215 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಈವರೆಗೆ 292 ಮಂದಿಗೆ ಸೋಂಕು ತಗುಲಿದ್ದು, ಈಗಾಗಲೇ 67 ಮಂದಿ ಸೋಂಕಿತರು ಗುಣಮುಖರಾಗಿ ಮನೆಗಳಿಗೆ ಹಿಂದಿರುಗಿದ್ದಾರೆ. ಮಂಗಳವಾರವೂ ಇಬ್ಬರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 1,395 ಮಂದಿ ನಿಗಾದಲ್ಲಿ ಇದ್ದಾರೆ. ಈವರೆಗೆ 21,458 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 18,199 ವರದಿಗಳು ನೆಗೆಟೀವ್ ಬಂದಿವೆ.

ಮಹಿಳೆ ಸಾವು

ವಾಂತಿ– ಭೇದಿಯಿಂದ ಬಳಲುತ್ತಿದ್ದ ತುಮಕೂರು ತಾಲ್ಲೂಕು ನಾಗವಲ್ಲಿಯ 55 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.

ಮೃತಪಟ್ಟ ಮಹಿಳೆಯ ಗಂಟಲು ದ್ರವದ ಮಾದರಿಯನ್ನು ಜುಲೈ 6ರಂದು ಪರೀಕ್ಷಿಸಲಾಗಿತ್ತು. ಮಂಗಳವಾರ ವರದಿ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ಮಹಿಳೆಯು ಮರಳೂರು ದಿಣ್ಣೆಯಿಂದ ನಾಗವಲ್ಲಿಗೆ ಸಂಚರಿಸಿದ್ದರು. ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 9 ಮಂದಿ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ 11 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT