ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ: ಹೆಚ್ಚುತ್ತಿದೆ ಬಿಸಿಲು, ಬತ್ತುತ್ತಿದೆ ನೀರು

ವಾರದ ಹಿಂದೆ 33 ಡಿಗ್ರಿ ಸೆಲ್ಸಿಯಸ್‌ ಇದ್ದ ತಾಪಮಾನ ಈಗ 37ಕ್ಕೆ ಏರಿಕೆ
Last Updated 18 ಏಪ್ರಿಲ್ 2021, 5:12 IST
ಅಕ್ಷರ ಗಾತ್ರ

ಮಧುಗಿರಿ: ತಾಲ್ಲೂಕಿನಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಪ್ರಾಣಿ ಮತ್ತು ಪಕ್ಷಿಗಳು ಕುಡಿಯುವ ನೀರಿಗೆ ಪರದಾಡುವಂತಾಗಿದೆ.

ತಾಲ್ಲೂಕು ಬೆಟ್ಟ, ಗುಡ್ಡಗಳಿಂದ ಕೂಡಿದ ಪ್ರದೇಶ. ವಾರದ ಹಿಂದೆ 33 ಡಿಗ್ರಿ ಸೆಲ್ಸಿಯಸ್‌ ಇದ್ದ ತಾಪಮಾನ ಈಗ 37ಕ್ಕೆ ಏರಿಕೆಯಾಗಿದೆ. ಕೆರೆ, ಕಟ್ಟೆ ಹಾಗೂ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ತೀವ್ರತರವಾಗಿ ಕುಸಿಯುತ್ತಿರುವುದರಿಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ.

ತಾಲ್ಲೂಕಿನಲ್ಲಿ ಚೆನ್ನಸಾಗರ, ನಂಜಾಪುರ, ಗೊಂದಿಹಳ್ಳಿ, ತಾಯಿಗೊಂಡನಹಳ್ಳಿ, ಬೆಲ್ಲದಮಡುಗು ಗೇಟ್, ತೆರಿಯೂರು, ತೆರಿಯೂರು ಕಾಲೊನಿ, ಬೆಲ್ಲದಮಡುಗು, ತೊಣಚಗೊಂಡನಹಳ್ಳಿ, ಚಂಬೇನಹಳ್ಳಿ, ಸಜ್ಜೇಹೊಸಹಳ್ಳಿ ಹಾಗೂ ವೀರಣ್ಣನಹಳ್ಳಿ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಈ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ‌ಮಾಡಲಾಗುತ್ತಿದೆ. ಹೀಗೆ ಬಿಸಿಲಿನ ತಾಪ ಮುಂದುವರೆದರೆ ತಾಲ್ಲೂಕಿನ 98ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಅಧಿಕಾರಿಗಳು ಗ್ರಾಮಗಳ ಪಟ್ಟಿ ಮಾಡಿದ್ದಾರೆ.

ತಾಲ್ಲೂಕಿನಲ್ಲಿ ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಕೆರೆ, ಕಟ್ಟೆ ಹಾಗೂ ಕೊಳವೆ ಬಾವಿಯಲ್ಲಿ ನೀರು ತುಂಬಿತ್ತು. ಫೆಬ್ರುವರಿವರೆಗೂ ನೀರಿನ ಸಮಸ್ಯೆ ಅಷ್ಟಾಗಿ ಕಾಣಲಿಲ್ಲ. ಆದರೆ ಕಳೆದ ಎರಡು ತಿಂಗಳಿನಿಂದ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಕೆರೆ, ಕಟ್ಟೆ ಹಾಗೂ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿ ಸಮಸ್ಯೆಯಾಗಿದೆ.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಗ್ರಾಮ ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ನೀರನ್ನು ಸರಬರಾಜಿಗೆ ಮುಂದಾಗಿದೆ. ಆದರೆ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರು ಸಾಕಾಗುವುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.

ತಾಲ್ಲೂಕಿನಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಉಲ್ಬಣಗೊಳ್ಳುವ ಮುನ್ನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT