ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಮಹಿಳಾ ದಿನ: ಪಂಚರ್ ಅಂಗಡಿಯಲ್ಲಿ ಬದುಕು ಕಟ್ಟಿಕೊಂಡ ದಿಟ್ಟೆ

Last Updated 8 ಮಾರ್ಚ್ 2022, 7:25 IST
ಅಕ್ಷರ ಗಾತ್ರ

ಗುಬ್ಬಿ: ಹೆಣ್ಣು ಜೀವನವನ್ನು ಸವಾಲಾಗಿ ಸ್ವೀಕರಿಸಿದರೆ ದುಡಿಯಲು ಹತ್ತಾರು ಮಾರ್ಗಗಳು ಸಿಗುತ್ತವೆ. ಬೇರೆಯವರ ಹಂಗಿನಲ್ಲಿ ಬದುಕುವುದಕ್ಕಿಂತ ಸ್ವಾವಲಂಬಿ ಬದುಕು ಸುಂದರ ಎನ್ನುತ್ತಾರೆ ಪಂಚರ್ ಅಂಗಡಿ ಗೀತಮ್ಮ.

ಸುಮಾರು 15 ವರ್ಷಗಳ ಹಿಂದೆ 2 ಪುಟ್ಟ ಮಕ್ಕಳು ಹಾಗೂ ಹೆಂಡತಿಯನ್ನು ತೊರೆದು ಹೋದ ಗಂಡ, ಸಹಾಯಕ್ಕೆ ಬಾರದ ಒಡಹುಟ್ಟಿದವರು, ಇದರ ಮಧ್ಯೆ ಬದುಕು ಕಟ್ಟಿಕೊಳ್ಳುವ ಜೊತೆಗೆ ಮಕ್ಕಳನ್ನು ಸಲಹಬೇಕಾದ ಜವಾಬ್ದಾರಿ ಗೀತಮ್ಮಅವರ ಹೆಗಲಿಗೇರಿತು.

ತಾಯಿ ನೀಡಿದ ₹ 10 ಸಾವಿರದ ಜೊತೆಗೆ ಬೇರೆಯವರಿಂದ ಸಾಲ ಪಡೆದು ಪಟ್ಟಣ ಹೊರಭಾಗದ ಹೇರೂರಿನಲ್ಲಿ ಚಿಕ್ಕ ಪಂಚರ್ ಅಂಗಡಿಯನ್ನು ತೆರೆದು ಬದುಕಿನ ಹೊಸ ಹಾದಿಯನ್ನು ಕಂಡುಕೊಂಡರು.

ಕೇವಲ ಪುರುಷರೇ ಕಾರ್ಯ ನಿರ್ವಹಿಸುವ ಪಂಚರ್ ಹಾಕುವ ಕೆಲಸವನ್ನು ಸವಾಲಾಗಿ ಸ್ವೀಕರಿಸಿದ ಗೀತಮ್ಮ ಎಲ್ಲಾ ಅಡೆ ತಡೆಗಳನ್ನು ಮೆಟ್ಟಿ ನಿಂತಿದ್ದಾರೆ. ಪ್ರಾರಂಭದಲ್ಲಿ ಕೆಲವರು ಗೀತಮ್ಮ ಅವರ ಈ ಕೆಲಸವನ್ನು ನಿಂದಿಸಿ ಹೀಗೆಳೆದರೂ ಎದೆಗುಂದದೆ ಮುಂದೆ ಸಾಗಿ ಬದುಕು ಕಟ್ಟಿಕೊಂಡಿದ್ದಾರೆ. ಮೊದಲು ಪಂಚರ್ ಹಾಕಲು ಅಳುಕು ಇದ್ದರೂ, ಪ್ರಸ್ತುತ ಎಂಥಹ ದೊಡ್ಡ ವಾಹನಗಳ ಚಕ್ರಗಳನ್ನು ಬಿಚ್ಚಿ ಸಲೀಸಾಗಿ ಪಂಚರ್ ಹಾಕಿ ದಿನಕ್ಕೆ ₹ 500ರಿಂದ₹ 1ಸಾವಿರದವರೆಗೂ ಸಂಪಾದಿಸುತ್ತಾರೆ.

ಅವರ ಬಲಗೈಗೆ ಏಟು ಬಿದ್ದಿದ್ದು ವಾಹನಗಳ ಚಕ್ರ ಬಿಚ್ಚಲು ಕಷ್ಟವಾದರೂ ತಮ್ಮ ಕಾಲನ್ನು ಆಸರೆಯಾಗಿ ಬಳಸಿಕೊಂಡು ಚಕ್ರ ಬಿಚ್ಚುತ್ತಾರೆ. ಪಂಚರ್ ಹಾಕುವ ಕೆಲಸ ನಿಜಕ್ಕೂ ಶ್ರಮವಾದರೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಅವರ ಶ್ರಮವನ್ನು ಕಂಡು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ ಅವರು ಅವರ ಸ್ವಂತ ಜಮೀನಿನಲ್ಲಿ ಸ್ವಲ್ಪ ಜಾಗವನ್ನು ಉಚಿತವಾಗಿ ನೀಡುವುದರ ಮೂಲಕ ಅವರಿಗೆ ಸಹಕರಿಸಿದ್ದಾರೆ. ತುಂಬಾ ಕಷ್ಟದಲ್ಲಿಯೇ ಬದುಕು ಕಟ್ಟಿಕೊಂಡ ಗೀತಮ್ಮ ತನ್ನ ಮಗಳನ್ನು ಪಿಯುಸಿ ವರೆಗೂ ಓದಿಸಿ ಮದುವೆ ಮಾಡಿದ್ದಾರೆ.

ತನ್ನ ಮಗನನ್ನು ಡಿಪ್ಲೊಮಾ ವ್ಯಾಸಂಗ ಮಾಡಿಸುವ ಮೂಲಕ ಅವರಿಗೆ ಯಾವುದೇ ಕಷ್ಟ ಬಾರದಂತೆ ಸಾಕಿ ಸಲಹಿದ್ದಾರೆ.ಜೊತೆಗೆ ತಾನೇ ದುಡಿದ ಹಣದಿಂದ ಹೇರೂರಿನಲ್ಲಿ ನಿವೇಶನ ಖರೀದಿಸಿ, ಒಂದು ಮನೆಯನ್ನು ಕಟ್ಟಿಕೊಂಡಿದ್ದಾರೆ.ಸದ್ಯ ಮಗನನ್ನು ಓದಿಸುತ್ತಾ ಅವನ ಜೊತೆ ನೆಮ್ಮದಿಯ ಬದುಕನ್ನು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT