ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ತಿಂಗಳಲ್ಲಿ ₹600 ಕೋಟಿ ಖರ್ಚು ಸಾಧ್ಯವೆ?

Last Updated 8 ಜನವರಿ 2021, 8:52 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಸುಮಾರು ₹600 ಕೋಟಿ ಹಣವನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳು ಪ್ರಸಕ್ತ ಆರ್ಥಿಕ ವರ್ಷ ಮುಗಿಯಲು ಉಳಿದಿರುವ ಒಂದೆರಡು ತಿಂಗಳಲ್ಲಿ ಖರ್ಚು ಮಾಡಲು ಸಾಧ್ಯವೆ?

ಇಷ್ಟೊಂದು ದೊಡ್ಡ ಮೊತ್ತವನ್ನು ಬಳಕೆ ಮಾಡಿಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ ಫೆ. 15ರ ಒಳಗೆ ಖಜಾನೆಗೆ ಬಿಲ್ ಸಲ್ಲಿಸುವ ಅನಿವಾರ್ಯತೆಗೆ ಅಧಿಕಾರಿಗಳು ಸಿಲುಕಿದ್ದಾರೆ. ಹಾಗಾಗಿ ಇನ್ನೂ ಒಂದು ತಿಂಗಳಲ್ಲಿ ಇಷ್ಟೆಲ್ಲ ಕೆಲಸ ಮಾಡಲು ಸಾಧ್ಯವಾಗುವುದೆ ಎಂಬ ಪ್ರಶ್ನೆ ಎದುರಾಗಿದೆ.

ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗವೊಂದರಲ್ಲೇ (ತುಮಕೂರು, ಮಧುಗಿರಿ ವಿಭಾಗ ಸೇರಿ) ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹100 ಕೋಟಿಗೂ ಹೆಚ್ಚು ಹಣವನ್ನು ಬಳಕೆ ಮಾಡಬೇಕಿದೆ. ಇನ್ನಷ್ಟೇ ಕಾಮಗಾರಿಗಳಿಗೆ ಸಂಬಂಧಿಸಿದ ಕಾರ್ಯಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆದು ಕೆಲಸ ನಿರ್ವಹಿಸಲು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಬೇಕಿದೆ. ನಂತರ ಕೆಲಸ ಪೂರ್ಣಗೊಳಿಸಿ ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರ ನೀಡಿದ ಮೇಲೆ ಬಿಲ್ ಸಿದ್ಧಪಡಿಸಿ ಖಜಾನೆಗೆ ಸಲ್ಲಿಸಬೇಕು.

ಜಿಲ್ಲೆಯಲ್ಲಿ ಅತಿಹೆಚ್ಚು ಕಾಮಗಾರಿಗಳು, ಅಭಿವೃದ್ಧಿ ಕೆಲಸಗಳು ನಡೆಯುವುದು ಜಿ.ಪಂ ಎಂಜಿನಿಯರಿಂಗ್ ವಿಭಾಗದ ಮೂಲಕ. ರಸ್ತೆ, ಕಟ್ಟಡಗಳು, ಕೆರೆ ನಿರ್ವಹಣೆ, ಹೂಳೆತ್ತುವುದು, ದುರಸ್ತಿ, ಚರಂಡಿ, ಚೆಕ್ ಡ್ಯಾಂಗಳ ನಿರ್ಮಾಣ ಮತ್ತಿತರ ಮೂಲಸೌಕರ್ಯ ಕಲ್ಪಿಸುವ ಕೆಲಸಗಳು ಈ ವಿಭಾಗದಿಂದ ಆಗುತ್ತವೆ. ಆದರೆ ಕಳೆದ 10 ತಿಂಗಳಿಂದ ಈ ವರ್ಷದ ಅನುದಾನದಲ್ಲಿ ಒಂದೇ ಒಂದು ಕಾಮಗಾರಿಯನ್ನೂ ಕೈಗೆತ್ತಿಕೊಂಡಿಲ್ಲ. ಹಿಂದಿನ ವರ್ಷದಲ್ಲಿ ಅಪೂರ್ಣಗೊಂಡಿದ್ದ ಕೆಲಸ ಮುಗಿಸಿದ್ದು, ಹೊಸದಾಗಿ ಆರಂಭಿಸಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ಸಿಗದೆ ಜನತೆ ಬಳಲುವಂತಾಗಿದೆ. ರಸ್ತೆ ನಿರ್ಮಿಸಿ, ಚರಂಡಿ ಮಾಡಿಕೊಡಿ ಎಂದು ಜನರು ಕೇಳುವುದು ಮಾತ್ರ ತಪ್ಪಿಲ್ಲ.

ಈಗ ಉಳಿದಿರುವ ಸಮಯದಲ್ಲಿ ಕಾರ್ಯಯೋಜನೆ ಸಿದ್ಧಪಡಿಸಿ, ಹೆಚ್ಚೆಂದರೆ ಕೆಲಸ ಆರಂಭಿಸಬಹುದು. ಇಷ್ಟು ಅತ್ಯಲ್ಪ ಅವಧಿಯಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಿಲ್ಲ. ಕೊನೆಗೆ ಅನುದಾನ ಬಳಕೆಯಾಗದೆ ಉಳಿದಿರುವ ಹಣ ಸರ್ಕಾರಕ್ಕೆ ವಾಪಸಾಗುತ್ತದೆ. ಆಗ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ, ಪ್ರಗತಿಯಲ್ಲಿ ಹಿಂದೆ ಉಳಿದಿದ್ದೇವೆ. ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಆರೋಪ ಮಾಡುವುದು ತಪ್ಪುವುದಿಲ್ಲ.

ಇತರೆ ಇಲಾಖೆಗಳಲ್ಲಿ ಅನುದಾನ ಹಂಚಿಕೆ, ಫಲಾನುಭವಿಗಳಿಗೆ ನೆರವು ಮತ್ತಿತರ ಕೆಲಸ ನಡೆಯುವುದರಿಂದ ಹೆಚ್ಚಿನ ಸಮಸ್ಯೆ ಆಗುವುದಿಲ್ಲ. ಆದರೆ ಪೂರ್ಣ ಪ್ರಮಾಣದಲ್ಲಿ ಅನುದಾನ ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಜಿ.ಪಂ ಯೋಜನಾ ವಿಭಾಗದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಹಿಂದಿನ ವರ್ಷ ₹43 ಕೋಟಿ ವಾಪಸ್

ಹಿಂದಿನ ವರ್ಷ ಬಳಕೆಯಾಗದೆ ₹43 ಕೋಟಿ ಅನುದಾನ ಸರ್ಕಾರಕ್ಕೆ ವಾಪಸ್ ಹೋಗಿತ್ತು. ಇದರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿತ್ತು. ಹಿಂದೆ ಅಪೂರ್ಣಗೊಂಡಿದ್ದ ಕೆಲಸಗಳನ್ನು ಈ ಬಾರಿ ಪೂರ್ಣಗೊಳಿಸಿ ಪ್ರಸಕ್ತ ಸಾಲಿನ ಅನುದಾನದಲ್ಲಿ ಬಿಲ್ ಪಾವತಿಸಲಾಗಿದೆ. ಬಂದ ಹಣವನ್ನೂ ಬಳಕೆ ಮಾಡಿಕೊಳ್ಳದಿದ್ದರೆ ಅಧಿಕಾರಿಗಳಿಗಳಿಂದ ಕೆಲಸ ಮಾಡಿಸುವುದು ಹೇಗೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸುತ್ತಾರೆ.

ಉಳಿದಿರುವ ಅತ್ಯಲ್ಪ ಅವಧಿಯಲ್ಲಿ ₹600 ಕೋಟಿ ಖರ್ಚು ಮಾಡಬೇಕಿದೆ ಎಂದರು.

ಜಿ.ಪಂ ಸದಸ್ಯರೂ ಕಾರಣ

ಜಿಲ್ಲಾ ಪಂಚಾಯಿತಿ ಸದಸ್ಯರ ನಡುವಿನ ತಿಕ್ಕಾಟದಿಂದ ಜಿಲ್ಲೆಗೆ ಬಂದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಜಿ.ಪಂ ಅಧ್ಯಕ್ಷೆ ಲತಾ ಅವರನ್ನು ಅಧಿಕಾರದಿಂದ ಇಳಿಸುವ ಸಲುವಾಗಿ ಆಗಸ್ಟ್‌ನಲ್ಲಿ ಕರೆದ ಸಭೆಗೆ ಸದಸ್ಯರು ಗೈರು ಹಾಜರಾಗಿದ್ದರು. ನಂತರ ಕರೆದ ಯಾವ ಸಭೆಗೂ ಬರಲಿಲ್ಲ. ಸಭೆ ನಡೆದು ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡಿದ್ದರೆ ಈ ವೇಳೆಗಾಗಲೇ ಸಾಕಷ್ಟು ಅನುದಾನ ಬಳಕೆ ಮಾಡಿಕೊಳ್ಳುವ ಅವಕಾಶಗಳು ಇದ್ದವು.

ಸದಸ್ಯರ ಗೈರು ಹಾಜರಿಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಮಾಧುಸ್ವಾಮಿ, ‘ಸದಸ್ಯರು ಸಭೆನಡೆಸಿ ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡದಿದ್ದರೆ ಜಿ.ಪಂ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಿಸಲಾಗುವುದು’ ಎಂದು ಎಚ್ಚರಿಸಿದ್ದರು. ನಂತರ ನವೆಂಬರ್ 20ರಂದು ನಡೆದ ಸಭೆಗೆ ಸದಸ್ಯರು ಹಾಜರಾಗಿ ಕ್ರಿಯಾಯೋಜನೆಗೆ ಒಪ್ಪಿಗೆ ನೀಡಿದ್ದರು.

ಸಭೆ ಒಪ್ಪಿಗೆ ಕೊಟ್ಟ ನಂತರವೂ ಅಧಿಕಾರಿಗಳು ಕೆಲಸ ಮಾಡಿಲ್ಲ ಎಂಬುದು ಪ್ರಮುಖ ಆಕ್ಷೇಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT