ತುಮಕೂರು: ಜೆಡಿಎಸ್ ಸದಸ್ಯತ್ವ ನೋಂದಣಿ ಹಾಗೂ ಬೂತ್ ಸಮಿತಿ ಅಭಿಯಾನಕ್ಕೆ ನಗರದಲ್ಲಿ ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸದಸ್ಯತ್ವ ನೋಂದಣಿಗೆ ಜೆಡಿಎಸ್ ಮುಂದಾಗಿದ್ದು, ಮೊದಲಿಗೆ ಜಿಲ್ಲೆಯಿಂದಲೇ ಚಾಲನೆ ಕೊಡಲಾಯಿತು. ತಳಮಟ್ಟದಿಂದ ಬಲಿಷ್ಠವಾಗಿ ಪಕ್ಷ ಸಂಘಟಿಸುವ ಸಂಕಲ್ಪ ಮಾಡಿದರು. ಮುಂದಿನ ಎರಡು ತಿಂಗಳಲ್ಲಿ ಈ ಕೆಲಸ ಪೂರ್ಣಗೊಳಿಸುವುದಾಗಿ ನಾಯಕರು ಪ್ರಕಟಿಸಿದರು.
ನಗರದ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಯಾನಕ್ಕೆ ಚಾಲನೆ ನೀಡಿದರು. ಪಕ್ಷ ಸಂಘಟನೆ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಲಿದೆ. ಈಗಿನಿಂದಲೇ ತಳಮಟ್ಟದಲ್ಲಿ ಹಾಗೂ ಬೂತ್ ಹಂತದಿಂದ ಪಕ್ಷ ಕಟ್ಟಬೇಕು. ಕಾರ್ಯಕರ್ತರ ಶ್ರಮದಿಂದ ಪಕ್ಷ ಮೇಲೆದ್ದು, ಮುನ್ನಡೆಯಲು ಸಾಧ್ಯ. ಜೆಡಿಎಸ್ ಉಳಿಸಿಕೊಳ್ಳಬೇಕಾದರೆ ಎಲ್ಲರೂ ಶ್ರಮಪಟ್ಟು ಸಂಘಟನೆ ಮಾಡಬೇಕು ಎಂದು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ, ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಎದುರಾಗಲಿದೆ. ಅಲ್ಲಿ ನಮ್ಮ ಶಕ್ತಿ ತೋರಿಸಲು, ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾದರೆ ಪಕ್ಷ ಸಂಘಟಿಸಬೇಕು. ಮುಂಬರುವ ದಿನಗಳಲ್ಲಿ ಮಹಿಳಾ ಘಟಕಗಳಿಗೂ ಮತ್ತಷ್ಟು ಶಕ್ತಿ ತುಂಬಿ ಸಂಘಟಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಪಕ್ಷ ಸದೃಢವಾಗಿದೆ. ಹಿಂದೆ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 9ರಲ್ಲಿ ಪಕ್ಷದ ಶಾಸಕರು ಆಯ್ಕೆ ಆಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗದಿದ್ದರೂ ಎಲ್ಲ ಪಕ್ಷಗಳಿಗಿಂತ ಜೆಡಿಎಸ್ ಅಭ್ಯರ್ಥಿಗಳಿಗೆ ಅಧಿಕ ಮತಗಳು ಬಂದಿವೆ. ಹಾಗಾಗಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದರು.
2019ರ ಲೋಕಸಭೆ ಚುನಾವಣೆಯ ಕಹಿ ನೆನಪುಗಳು ಇನ್ನೂ ಕಾಡುತ್ತಿವೆ. ಎಚ್.ಡಿ.ದೇವೇಗೌಡ ಅವರನ್ನು ಕರೆತಂದು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಡಿ ಸೋಲಿಸಿದರು. ಕಾಂಗ್ರೆಸ್‌ನವರು ನಂಬಿಸಿ ಕತ್ತು ಕೊಯ್ದರು. ಎಚ್.ಡಿ.ಕುಮಾರಸ್ವಾಮಿ ಅವರನ್ನು ಐದು ವರ್ಷ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಬೆಂಬಲ ನೀಡಿ, ಕೊನೆಗೆ ವಂಚಿಸಿದರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಹೊಂದಾಣಿಕೆ: ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆಯನ್ನು ರಾಜ್ಯದ ಜನತೆ ಒಪ್ಪಿದ್ದಾರೆ. ಕಳೆದ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಇದು ಗೋಚರಿಸಿದೆ. ಹಳೆ ಮೈಸೂರು ಭಾಗದ 14 ಲೋಕಸಭೆ ಕ್ಷೇತ್ರಗಳಲ್ಲಿ 12ರಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು ಎಂಬ ಸೂಚನೆಯನ್ನು ಮತದಾರರು ನೀಡಿದ್ದಾರೆ. ಹಾಗಾಗಿ ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ, ವಿಧಾನಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸುತ್ತೇವೆ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜನಪ್ಪ, ‘ಮುಂದಿನ ದಿನಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕಿದೆ. ಪಕ್ಷವನ್ನು ಸದೃಢವಾಗಿ ಕಟ್ಟಿದರೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಪಕ್ಷದ ಕಾರ್ಯಕರ್ತರಿಗೂ ಅವಕಾಶಗಳು ಸಿಗಲಿವೆ’ ಎಂದು ಹೇಳಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‍ಬಾಬು ಸದಸ್ಯತ್ವ ಅಭಿಯಾನದ ಉದ್ದೇಶ ತಿಳಿಸಿಕೊಟ್ಟರು.
ಮಾಜಿ ಶಾಸಕರಾದ ಡಿ.ನಾಗರಾಜಯ್ಯ, ಎಚ್.ನಿಂಗಪ್ಪ, ಪಿ.ಆರ್.ಸುಧಾಕರ್ ಲಾಲ್, ಎಂ.ವಿ.ವೀರಭದ್ರಯ್ಯ, ಕೆ.ಎಂ.ತಿಮ್ಮರಾಯಪ್ಪ, ಎ.ಮಂಜು, ಮುಖಂಡರಾದ ಕೆ.ಟಿ.ಶಾಂತಕುಮಾರ್, ಗುಬ್ಬಿ ನಾಗರಾಜ್, ಉಗ್ರೇಶ್, ಎಸ್.ಆರ್.ಗೌಡ, ಟಿ.ಆರ್.ನಾಗರಾಜ್, ಕುಂಬಯ್ಯ ಮೊದಲಾದವರು ಉಪಸ್ಥಿತರಿದ್ದರು.
ವರಿಷ್ಠರ ತೀರ್ಮಾನ
ತುಮಕೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್– ಬಿಜೆಪಿ ನಾಯಕರು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ ‘ಎರಡು ಪಕ್ಷಗಳ ವರಿಷ್ಠರು ಕುಳಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಒಮ್ಮತದಿಂದ ಎನ್‌ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದಾರೆ’ ಎಂದರು.
ಈಗಾಗಲೇ ಚನ್ನಪಟ್ಟಣ ಉಪಚುನಾವಣೆಗೆ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಇಲ್ಲಿ ಜೆಡಿಎಸ್ ಅಥವಾ ಬಿಜೆಪಿ ಅಭ್ಯರ್ಥಿ ಎನ್ನುವ ಪ್ರಶ್ನೆ ಇಲ್ಲ. ಎನ್‌ಡಿಎ ಅಭ್ಯರ್ಥಿ ಪರ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.