ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾವ್ಯ ಅವಲೋಕನಕ್ಕೆ ಬೇರೆ ಧ್ವನಿ ಬೇಕು: ಬರಗೂರು

‘ಅತ್ತೆ ನಿಮಗೊಂದು ಪ್ರಶ್ನೆ’ ಬಿಡುಗಡೆ
Published 19 ಮಾರ್ಚ್ 2024, 3:18 IST
Last Updated 19 ಮಾರ್ಚ್ 2024, 3:18 IST
ಅಕ್ಷರ ಗಾತ್ರ

ತುಮಕೂರು: ಪುರಾಣ ಕಾವ್ಯ ಹಾಗೂ ಪುರಾಣ ಶಾಸ್ತ್ರಗಳನ್ನು ಪ್ರತ್ಯೇಕವಾಗಿ ನೋಡುವ ಗೆರೆ ಮಾಯವಾಗುತ್ತಿದೆ. ಹಿನ್ನಡೆ ಅನುಭವಿಸುತ್ತಿವೆಯಾ ಎಂಬ ಆತಂಕವನ್ನು ಎರಡೂ ವಲಯದವರು ಉಂಟು ಮಾಡುತ್ತಿದ್ದಾರೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದಲ್ಲಿ ಸೋಮವಾರ ಲೇಖಕಿಯರ ಸಂಘ ಹಾಗೂ ಚಿಂತನ ಚಿತ್ತಾರ ಪ್ರಕಾಶನ ಸಹಯೋಗದಲ್ಲಿ ಏರ್ಪಡಿಸಿದ್ದ ವಿ.ವಿಯ ಸಹಾಯಕ ಪ್ರಾಧ್ಯಾಪಕಿ, ಕತೆಗಾರ್ತಿ ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಶಾಸ್ತ್ರ ವಿಮರ್ಶೆಗೂ, ಕಾವ್ಯ ವಿಮರ್ಶೆಗೂ ಸಾಕಷ್ಟು ವ್ಯತ್ಯಾಸವಿದೆ. ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್ಯಾರ್ಥ ಹೊಂದಿರುತ್ತವೆ. ಯಾವುದೇ ಒಂದು ಕಾವ್ಯದಲ್ಲಿ ಧ್ವನಿ ಮುಖ್ಯವಾಗಿರುತ್ತದೆ. ಅಲ್ಲಿ ರೂಪಕ, ಸಂಕೇತಗಳಿರುತ್ತವೆ. ಆದರೆ, ಶಾಸ್ತ್ರ ಕೃತಿಗಳಲ್ಲಿ ರೂಪಕ, ಧ್ವನಿ, ಸಂಕೇತಗಳಿಗೆ ಯಾವುದೇ ಅವಕಾಶವಿರುವುದಿಲ್ಲ ಎಂದರು.

ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನು ಕುರುಡು ನಿರಾಕರಣೆ ಮಾಡಬಾರದು. ಪುರಾಣ ಕಾವ್ಯಗಳು ಯಾಕೆ ಇನ್ನೂ ಜೀವಂತವಾಗಿವೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ಪುರಾಣ ಪಾತ್ರಗಳನ್ನು ದುರುಪಯೋಗ ಪಡಿಸಿಕೊಳ್ಳಲು ಅನೇಕ ಶಕ್ತಿಗಳು ನಮ್ಮ ನಡುವೆ ಇರುತ್ತವೆ. ಅದರಾಚೆಗೆ ಪುರಾಣ ಕಾವ್ಯ ಯಾಕೆ ಹುಟ್ಟಿತು, ಅದರ ಪಾತ್ರಗಳು ಹೇಗೆ ರೂಪುಗೊಂಡವು? ಎಂಬುವುದನ್ನು ಅರಿಯಬೇಕು ಎಂದರು.

ಅಲ್ಲಮ, ಬಸವಣ್ಣ ಮುಂತಾದವರು ವೇದ, ಪುರಾಣ, ತರ್ಕಗಳನ್ನು ಕುರಿತು ಮಾತನಾಡಿದ್ದಾರೆ. ಪುರಾಣ ಕಾವ್ಯಗಳನ್ನು ಕುರಿತಲ್ಲ. ಅದು ಶಾಸ್ತ್ರಗಳನ್ನು ಕುರಿತು ಆಡಿದ ಮಾತು. ಹಾಗಾಗಿ ಪುರಾಣ ಕಾವ್ಯಗಳನ್ನು ಅವಲೋಕನ ಮಾಡಲು ಬೇರೆ ರೀತಿಯ ಧ್ವನಿ ಇಟ್ಟುಕೊಳ್ಳಬೇಕಾಗುತ್ತದೆ. ಈ ಕಾರಣದಿಂದ ಅವು ಮತ್ತೆ ಮತ್ತೆ ಹುಟ್ಟುತ್ತವೆ ಎಂದು ಹೇಳಿದರು.

ಜ್ಯೋತಿ ಅವರು ತಮ್ಮ ಕತೆಗಳಲ್ಲಿ ಮಹಾಭಾರತದ ಪ್ರಸಂಗಗಳನ್ನು ಮರು ಸೃಷ್ಟಿ ಮಾಡಿ ಯಶಸ್ವಿಯಾಗಿ ಹೊಸ ಪ್ರಯೋಗ ಮಾಡಿದ್ದಾರೆ ಎಂದು ತಿಳಿಸಿದರು.

ಕಥೆಗಾರ ಜಿ.ವಿ.ಆನಂದಮೂರ್ತಿ, ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್‌, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಶೇಟ್ ಎಂ.ಪ್ರಕಾಶ್, ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಪತ್ರಕರ್ತ ಎಸ್.ನಾಗಣ್ಣ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT