ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ ಕ್ಷೇತ್ರದ ಇತಿಹಾಸ | ವೀರಣ್ಣ ಏಳು ಖಾತೆ ನಿರ್ವಹಿಸಿದ ಇತಿಹಾಸ

Last Updated 24 ಮಾರ್ಚ್ 2023, 21:45 IST
ಅಕ್ಷರ ಗಾತ್ರ

ಕೊರಟಗೆರೆ: ಜಿಲ್ಲೆಯಲ್ಲೇ ಅತಿ ಚಿಕ್ಕ ತಾಲ್ಲೂಕು ಕೊರಟಗೆರೆ. ಇದು ಮೊದಲಿನಿಂದಲೂ ವಿಧಾನಸಭಾ ಕ್ಷೇತ್ರವಾಗಿಯೇ ಉಳಿದುಕೊಂಡು ಬಂದಿದೆ. ಎರಡು ಬಾರಿ ಕ್ಷೇತ್ರವನ್ನು ಮೀಸಲು ಕ್ಷೇತ್ರವನ್ನಾಗಿ ಮಾಡಿದ್ದು, ಇಲ್ಲಿಂದ ಆಯ್ಕೆ ಆಗಿದ್ದ ಇಬ್ಬರು ಸಚಿವರಾಗಿದ್ದರು. ಕ್ಷೇತ್ರ ಚಿಕ್ಕದಾದರೂ ರಾಜ್ಯದ ಗಮನ ಸೆಳೆಯುತ್ತಲೇ ಬಂದಿದೆ.

ನಾಲ್ಕು ಹೋಬಳಿ ವ್ಯಾಪ್ತಿಯನ್ನಷ್ಟೇ ಒಳಗೊಂಡಿದ್ದ ಕ್ಷೇತ್ರ, ಆನಂತರ ಮತ್ತೊಂದು ಹೋಬಳಿ ಸೇರ್ಪಡೆಯಿಂದ ಐದು ಹೋಬಳಿಗಳಾದವು. 1994ರ ನಂತರ ಆರು ಹೋಬಳಿಗಳು ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

1957ರಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದು, ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಆರ್.ಚನ್ನಿಗರಾಮಯ್ಯ ಶಾಸಕರಾಗಿ ಆಯ್ಕೆಯಾದರು. 1962ರಲ್ಲಿ ಕ್ಷೇತ್ರ ಮರು ವಿಂಗಡಣೆಯ ಜತೆಗೆ ಮೀಸಲು ಕ್ಷೇತ್ರವಾಗಿ ಬದಲಾದರೂ ಮತ್ತೆ ಆರ್.ಚನ್ನಿಗರಾಮಯ್ಯ ಎರಡನೇ ಸಲ ಕಾಂಗ್ರೆಸ್ ಪಕ್ಷದಿಂದಲೇ ಜಯಗಳಿಸಿದರು. 1967ರಲ್ಲಿ ಟಿ.ಎಸ್.ಶಿವಣ್ಣ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 1972ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಬದಲಾವಣೆ ಕಂಡಿತು. ಈ ವೇಳೆ ಕ್ಷೇತ್ರಕ್ಕೆ ತಾಲ್ಲೂಕಿನ ಕಸಬಾ, ಹೊಳವನಹಳ್ಳಿ, ಕೋಳಾಲ ಹೋಬಳಿಗಳ ಜತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ಯಾಮಗೊಂಡ್ಲು, ಸೋಂಪುರ ಹೋಬಳಿಗಳನ್ನು ಸೇರ್ಪಡೆ ಮಾಡಿ ಐದು ಹೋಬಳಿಯ ಕ್ಷೇತ್ರವನ್ನಾಗಿ ಮಾರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ತಾಲ್ಲೂಕಿನ ವಡ್ಡಗೆರೆಯವರಾದ ಮುದ್ದರಾಮಯ್ಯ ಶಾಸಕರಾದರು. 1978ರ ಚುನಾವಣೆಯಲ್ಲೂ ಗೆದ್ದು ಬಂದರು.

1983ರ ಚುನಾವಣೆಯಲ್ಲಿ ಕೊರಟಗೆರೆ ಪಟ್ಟಣದ ವಕೀಲರಾದ ಸಿ.ವೀರಣ್ಣ ಜನತಾ ಪಕ್ಷದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ರಾಮಕೃಷ್ಣ ಹೆಗ್ಗಡೆ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ಸಿಕ್ಕಿತ್ತು. ಮತ್ತೆ 1985ರಲ್ಲಿ ಮರು ಚುನಾವಣೆಯಲ್ಲೂ ಸಿ.ವೀರಣ್ಣ ಆಯ್ಕೆಯಾಗಿ ಉಪ ಸಭಾಪತಿಯಾಗಿಯೂ ಕಾರ್ಯ ನಿರ್ವಹಿಸಿದರು. ವೀರಣ್ಣ ಅವರು ಏಳು ಖಾತೆಗಳನ್ನು ನಿಭಾಯಿಸಿದ್ದು ಇತಿಹಾಸ. ಈ ವೇಳೆ ಕ್ಷೇತ್ರದ ಪ್ರತಿ ಗ್ರಾಮಕ್ಕೂ ವಿದ್ಯುತ್, ರಸ್ತೆ, ಕುಡಿಯುವ ನೀರಿನ ಸೌಲಭ್ಯಗಳನ್ನು ಕಲ್ಪಿಸಿದ್ದರು. ಸಾಕಷ್ಟು ಕೆರೆಗಳನ್ನು ನಿರ್ಮಿಸಲಾಯಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡ ವೀರಣ್ಣ ಅವರು ಸಣ್ಣ ಉಳಿತಾಯ ಖಾತೆಯಲ್ಲಿ ಉತ್ತಮ ಕೆಲಸ ಮಾಡಿ ರಾಜ್ಯದ ಗಮನ ಸೆಳೆಯುವಂತೆ ಮಾಡಿದ್ದರು.

1989ರಲ್ಲಿ ಸಿ.ವೀರಭದ್ರಯ್ಯ (ಕಾಂಗ್ರೆಸ್‌) ಆಯ್ಕೆಯಾಗುತ್ತಾರೆ. 1994ರಲ್ಲಿ ಜೆಡಿಎಸ್ ಪಕ್ಷದಿಂದ ಸಿ.ಚನ್ನಿಗಪ್ಪ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲೇರಿದ್ದರು. 1999 ಹಾಗೂ 2004ರಲ್ಲಿ ಸತತವಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. 2004ರಲ್ಲಿ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ರೇಷ್ಮೆ, ಅಬಕಾರಿ ಖಾತೆ ಸಚಿವರಾಗಿದ್ದರು.

2008ರಲ್ಲಿ ಕ್ಷೇತ್ರ ಮತ್ತೆ ಮರುವಿಂಗಡಣೆ ಆದಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ಯಾಮಗೊಂಡ್ಲು, ಸೋಂಪುರ ಹೋಬಳಿಗಳನ್ನು ಕೈ ಬಿಟ್ಟು ತಾಲ್ಲೂಕಿನ ಚನ್ನರಾಯನದುರ್ಗಾ, ಮಧುಗಿರಿ ತಾಲ್ಲೂಕಿನ ಪುರವಾರ, ತುಮಕೂರು ಗ್ರಾಮಾಂತರ ಕ್ಷೇತ್ರದ ಕೋರಾ ಹೋಬಳಿಗಳನ್ನು ಸೇರ್ಪಡೆ ಮಾಡಲಾಯಿತು. ಸಾಮಾನ್ಯ ಕ್ಷೇತ್ರವನ್ನು ಎರಡನೇ ಬಾರಿಗೆ ಮೀಸಲು ಕ್ಷೇತ್ರ ಮಾಡಲಾಯಿತು. ಈ ವೇಳೆ ಡಾ.ಜಿ.ಪರಮೇಶ್ವರ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ ಅವರು 2013ರ ಚುನಾವಣೆಯಲ್ಲಿ ಗೆದ್ದರೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ಕಾರಣಕ್ಕೆ ರಾಜ್ಯದ ಗಮನ ಸೆಳೆದಿದ್ದರು. ಆದರೆ ಆ ಚುನಾವಣೆಯಲ್ಲಿ ಸೋತರು. ಜೆಡಿಎಸ್‌ನ ಪಿ.ಆರ್.ಸುಧಾಕರ ಲಾಲ್ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2018ರಲ್ಲಿ ಡಾ.ಜಿ.ಪರಮೇಶ್ವರ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಕ್ಷೇತ್ರ ಪ್ರತಿನಿಧಿಸಿದ್ದ ಸಿ.ವೀರಣ್ಣ ಏಳು ಖಾತೆ ನಿರ್ವಹಿಸಿದ್ದು, ಅದಾದ ಬಳಿಕ ಸಿ.ಚನ್ನಿಗಪ್ಪ ಮೂರು ಬಾರಿ ಸತತವಾಗಿ ಶಾಸಕರಾಗಿ, ಮಂತ್ರಿಯಾಗಿದ್ದು ಕ್ಷೇತ್ರದ ಇತಿಹಾಸದಲ್ಲಿ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT