ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಭಾವನೆ ಕೆರಳಿಸುವ ಸರ್ಕಾರ: ಎಂ.ಬಿ.ಪಾಟೀಲ್

Last Updated 3 ಸೆಪ್ಟೆಂಬರ್ 2022, 10:23 IST
ಅಕ್ಷರ ಗಾತ್ರ

ತುಮಕೂರು: ‘ಡಬಲ್‌ ಎಂಜಿನ್‌ ಸರ್ಕಾರ ಜನರ ಭಾವನೆ ಕೆರಳಿಸಿ, ರಾಜಕೀಯ ಲಾಭ ಪಡೆದುಕೊಳ್ಳಲು ಹೊರಟಿದೆ‌’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಇಲ್ಲಿ ಶನಿವಾರ ಆರೋಪಿಸಿದರು.

ಸ್ವಾತಂತ್ರ್ಯದ ನಂತರ ದೇಶದಲ್ಲಿ ಹಲವಾರು ಕಂಪನಿಗಳ ಕಾರ್ಯಾರಂಭಕ್ಕೆ ಕಾಂಗ್ರೆಸ್‌ ಸಹಕಾರ ನೀಡಿತ್ತು. ಕಾಂಗ್ರೆಸ್‌ ಆಡಳಿತದ ಸಮಯದಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ಐಐಟಿ ಸಂಸ್ಥೆಗಳ ವರೆಗೆ ಬೆಳವಣಿಗೆಯಾಗಿವೆ. ಇವೆಲ್ಲ ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದಿದ್ದೇ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಆಹಾರ ಉತ್ಪಾದನೆ, ಆರೋಗ್ಯ ಇಲಾಖೆಯಲ್ಲಿ ಬೆಳವಣಿಗೆ, ಕಾರ್ಖಾನೆಗಳ ಸ್ಥಾಪನೆ, ರೈಲ್ವೆ, ವಿಮಾನ ನಿಲ್ದಾಣ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸ ಮಾಡಲಾಗಿದೆ. ದೇಶದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳಿದ್ದು, ಅದರಲ್ಲಿ 1900ಕ್ಕೂ ಹೆಚ್ಚು ಅಣೆಕಟ್ಟುಗಳು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಿರ್ಮಾಣವಾಗಿವೆ. ಇದೆಲ್ಲ ನರೇಂದ್ರ ಮೋದಿ ಕಾಲದಲ್ಲಿ ಆಗಿದ್ದೇ? ಎಂದು ಕುಟುಕಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉದ್ಯೋಗ ಸೃಷ್ಟಿಯ ಭರವಸೆ ಹುಸಿಯಾಯಿತು. ಸರ್ಕಾರಗಳ ತಪ್ಪು ನಿರ್ಣಯಗಳಿಂದ ಹಲವರು ಉದ್ಯೋಗ ಕಳೆದುಕೊಂಡರು. ನೋಟು ರದ್ದತಿ, ಕೋವಿಡ್ ನಿರ್ವಹಣೆಯಲ್ಲಿ ಲೋಪ, ಆರ್ಥಿಕ ಪರಿಸ್ಥಿತಿ ನಿಭಾಯಿಸುವಲ್ಲಿ ವೈಫಲ್ಯ ಅನುಭವಿಸಿದ್ದರಿಂದ ದೇಶದಲ್ಲಿ ಇಂದು ಹೆಚ್ಚಿನ ಅನಾಹುತಗಳು ನಡೆಯುತ್ತಿವೆ ಎಂದು ಟೀಕಿಸಿದರು.

ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರನ್ನು ಬದುಕಲು ಬಿಡದೆ, ಸಾಯಲು ಬಿಡದೆ, ಸತ್ತ ಮೇಲೂ ಹಣ ಕೀಳುವ ಕೆಲಸ ಮಾಡುತ್ತಿದೆ. ಇದು ಮೋದಿ ಅವರ ಅಸಲಿ ಅಚ್ಚೇದಿನ್ ಎಂದು ವ್ಯಂಗ್ಯವಾಡಿದರು.

ಇವತ್ತಿನ ಸರ್ಕಾರದಲ್ಲಿ ಯಾವ ಮಂತ್ರಿ ಏನು ಮಾಡುತ್ತಿದ್ದಾರೆ ಎಂಬುವುದು ಮುಖ್ಯಮಂತ್ರಿಗೆ ಗೊತ್ತಿಲ್ಲ. ಶೇ 40ರಷ್ಟು ಕಮಿಷನ್‌ ಸರ್ಕಾರ ಎಂದು ಪ್ರಧಾನಮಂತ್ರಿಗೆ ಪತ್ರ ಬರೆಯಲಾಗಿದೆ. ಆದರೆ, ಮಂತ್ರಿಗಳ ಮೇಲೆ ಐ.ಟಿ, ಸಿಬಿಐ, ಇ.ಡಿ‌ ದಾಳಿ ನಡೆಸಲಿಲ್ಲ. ತನಿಖಾ ಸಂಸ್ಥೆಗಳನ್ನು ಕೇವಲ ವಿರೋಧ ಪಕ್ಷಗಳ ಮೇಲೆ ಬಳಸಲಾಗುತ್ತಿದೆ ಎಂದು ದೂರಿದರು.

ಹಿಂದಿನಿಂದಲೂ ತುಂಬಾ ಜನ ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷ ಸೇರಿದ್ದಾರೆ. ಅದು ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಜತೆ ಕಾಂಗ್ರೆಸ್‌ ಮುಖಂಡರು ಮಾತನಾಡಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 8ರಿಂದ 9 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅತಿವೃಷ್ಟಿ ವೀಕ್ಷಣೆ ಮಾಡಲು, ರೈತರಿಗೆ ಪರಿಹಾರ ಕೊಡುವ ಕಡೆಗೆ ಸರ್ಕಾರಕ್ಕೆ ಲಕ್ಷ್ಯವಿಲ್ಲ.‌ ಶೇ 40ರಷ್ಟು ಕಮಿಷನ್‌ನಲ್ಲಿ ಮುಳುಗಿದೆ. ಸೆ. 12ರಿಂದ ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನಿಸಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ರಾಮಕೃಷ್ಣ, ಮುಖಂಡರಾದ ಟಿ.ಬಿ.ಜಯಚಂದ್ರ, ಕೆ.ಷಡಕ್ಷರಿ, ಬೆಮಲ್ ಕಾಂತರಾಜು, ಆರ್.ನಾರಾಯಣ, ಕೇಶವಮೂರ್ತಿ, ವೆಂಕಟೇಶ್, ಲಕ್ಕಪ್ಪ, ಬಾಲಕೃಷ್ಣ, ರಾಯಸಂದ್ರ ರವಿಕುಮಾರ್, ಶಫಿ ಅಹ್ಮದ್, ರಫೀಕ್ ಅಹ್ಮದ್‌ ಇದ್ದರು.

ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹ

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಆಗ್ರಹಿಸಿದರು.

ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದ ತಕ್ಷಣ ಆರೋಪಿಗಳನ್ನು ಬಂಧಿಸಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ಆ ರೀತಿ ಆಗಿಲ್ಲ. ಪ್ರಕರಣ ತನಿಖಾ ಹಂತದಲ್ಲಿದ್ದು, ತನಿಖೆಯ ನಂತರ ಸತ್ಯಾಂಶ ತಿಳಿಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT