ಭಾನುವಾರ, ಜೂನ್ 20, 2021
28 °C

ಖಾಸಗಿ ಆಸ್ಪತ್ರೆಗೆ ಸರ್ಕಾರಿ ವೈದ್ಯರ ಶಿಫಾರಸು: ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಹೀಗಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಹೆರಿಗೆ ಮತ್ತಿತರ ಪ್ರಕರಣಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ನವಜಾತ ಶಿಶುಗಳು ಹಾಗೂ ಹೆರಿಗೆಗೆ ಬರುವ ಮಹಿಳೆಯರ ಸಾವಿನ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರ ಏನೆಲ್ಲ ಸೌಲಭ್ಯಗಳನ್ನು ಕೊಟ್ಟರೂ ಸುಧಾರಣೆ ಆಗುತ್ತಿಲ್ಲ. ಈ ಸುಧಾರಣೆಯನ್ನು ನಾವು ಬಂದು ಮಾಡಲು ಸಾಧ್ಯವಿಲ್ಲ. ನೀವು ಮಾಡಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಅವರಿಗೆ ಸೂಚಿಸಿದರು.

ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮವಹಿಸಬೇಕು. ಗರ್ಭಿಣಿಯರ ನೋಂದಣಿ ಸಂಖ್ಯೆ ಹೆಚ್ಚಿದೆ. ಆದರೆ ಹೆರಿಗೆಗಳ ಸಂಖ್ಯೆ ಕಡಿಮೆ ಇದೆ. ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗುವಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದರು.

ಜಿಲ್ಲಾ ಕೋವಿಡ್ ಆಸ್ಪತ್ರೆಯ ಪ್ರಯೋಗಾಲವನ್ನು ಮೇಲ್ದರ್ಜೆಗೇರಿಸುವ ಕಾರ್ಯ ಶೀಘ್ರ ಪೂರ್ಣವಾಗಲಿದೆ. ಪ್ರತಿದಿನ ಜಿಲ್ಲೆಯಲ್ಲಿ 2,000 ಮಾದರಿಗಳನ್ನು ಪರೀಕ್ಷೆ ನಡೆಸಲು ಅವಕಾಶವಾಗುತ್ತದೆ. ಪ್ರತಿ ತಾಲ್ಲೂಕು ಆಸ್ಪತ್ರೆಗೂ 2 ವೆಂಟಿಲೇಟರ್ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಸಚಿವರು ಸೂಚಿಸಿದರು.

ಜಿಲ್ಲಾಮಟ್ಟದ ಅಧಿಕಾರಿಗಳು ತಿಂಗಳಿನಲ್ಲಿ 2–3 ಬಾರಿ ತಾಲ್ಲೂಕು ಮಟ್ಟದ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆ ಆಗಿದೆ. 5,590 ಟನ್ ಯೂರಿಯಾ ರಸಗೊಬ್ಬರ ದಾಸ್ತಾನು ಇದೆ. ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ಪೂರೈಕೆಗೆ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನ ಸಭೆಗೆ ಮಾಹಿತಿ ನೀಡಿದರು. ಆಗ ಸಚಿವರು, ‘ಎಣ್ಣೆ ಬೀಜಗಳ ಬಿತ್ತನೆ ಜಿಲ್ಲೆಯಲ್ಲಿ ಕಡಿಮೆ ಆಗಿದೆ. ಈ ಬೀಜಗಳ ಬಿತ್ತನೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದರು.

‘ಕೋವಿಡ್-19ಗೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಚಿಕಿತ್ಸೆ ನೀಡಲು ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 50 ಹಾಸಿಗೆ ಸಾಮರ್ಥ್ಯದ ಹೈಫ್ಲೊಲೊ ಆಕ್ಸಿಜನ್ ಸೌಲಭ್ಯ ಕಾಮಗಾರಿಯು ಆ.15ರೊಳಗೆ ಮುಗಿಯಲಿದೆ. ಜಿಲ್ಲೆಗೆ 32 ವೆಂಟಿಲೇಟರ್ ಬಂದಿವೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಮಾಹಿತಿ ನೀಡಿದರು.

ಸಂಸದ ಜಿ.ಎಸ್.ಬಸವರಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಶಾಸಕರಾದ ವೆಂಕಟರಮಣಪ್ಪ, ಜಿ.ಬಿ.ಜ್ಯೋತಿ ಗಣೇಶ್, ಮಸಾಲ ಜಯರಾಂ, ಡಾ.ಎಚ್.ಡಿ.ರಂಗನಾಥ್, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಇದ್ದರು.

ರಂಗನಾಥ್– ಮಾಧುಸ್ವಾಮಿ ವಾಕ್ಸಮರ

ತುಮಕೂರು: ಕುಣಿಗಲ್‌ನಲ್ಲಿ ಆಶ್ರಯ ಯೋಜನೆಯಡಿ ಬಡವರು ನಿರ್ಮಿಸಿಕೊಳ್ಳುತ್ತಿರುವ ಮನೆಗಳಿಗೆ ಹಣ ಬಿಡುಗಡೆ ಆಗಿಲ್ಲ ಎನ್ನುವ ವಿಚಾರ ಕೆಡಿಪಿ ಸಭೆಯಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್ ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು.

ಒಂದು ಹಂತದಲ್ಲಿ ಈ ಇಬ್ಬರು ಪರಸ್ಪರ ತಾಳ್ಮೆ ಕಳೆದುಕೊಂಡು ವಾಕ್ಸಮರ ನಡೆಸಿದರು. ಸಭೆ ಆರಂಭದಲ್ಲಿಯೇ ‘ಪರಿಶಿಷ್ಟರು ಸೇರಿದಂತೆ ಬಡವರು ಮನೆಗಳನ್ನು ಕಟ್ಟಿಕೊಳ್ಳಲು ಹಣ ಬಿಡುಗಡೆಯಾಗಿಲ್ಲ. ಬಡವರು ಬೀದಿಗೆ ಬಂದಿದ್ದಾರೆ. ಸರ್ಕಾರದ ಬಳಿ ಹಣ ಇಲ್ಲ. ಹಣ ಕೊಟ್ಟಿದ್ದೇವೆ ಎಂದು ಸುಮ್ಮನೆ ಹೇಳಬೇಡಿ ಎಂದು ರಂಗನಾಥ್ ನುಡಿದರು.

ಆಗ ಮಾಧುಸ್ವಾಮಿ, ‘ಕುಣಿಗಲ್‌ನಲ್ಲಿ 38 ಮನೆಗಳ ವಿಚಾರದಲ್ಲಿ ಫ್ರಾಡ್ ಮಾಡುತ್ತಿದ್ದೀರಿ. ರಂಗನಾಥ್ ಯುವರ್ ಫ್ರಾಡ್’ ಎಂದು ಏರುಧ್ವನಿಯಲ್ಲಿ ನುಡಿದರು. ಆಗ ‘ನೀವು ಮಾತ್ರ ಗ್ರೇಟ್. ಅಧಿಕಾರಿಗಳಿಗೆ ಹೇಳಿ. ನಾನು ಏನಾದರೂ ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಿ’ ಎಂದು ಆಗ್ರಹಿಸಿದರು.

ಆಗ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿದರು. ಫಲಾನುಭವಿಗಳಿಗೆ ನೇರವಾಗಿ ಹಣ ಜಮೆ ಆಗುತ್ತದೆ ಎಂದರು. ಮತ್ತೆ ಮಾತನಾಡಿದ ಮಾಧುಸ್ವಾಮಿ, ಸೋಮವಾರ ಕುಣಿಗಲ್‌ಗೆ ತೆರಳಿ ಈ ಬಗ್ಗೆ ಪರಿಶೀಲಿಸಿ. ಸರ್ಕಾರದಿಂದ ಹಣಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಆಡಳಿತಾತ್ಮಕವಾಗಿ ತೊಂದರೆ ಆಗಿರಬಹುದು ನೋಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನೀರಾವರಿ ಹಾಗೂ ಕುಣಿಗಲ್‌ ಅಭಿವೃದ್ಧಿಗೆ ಹಣ ಬಿಡುಗಡೆ ವಿಚಾರವಾಗಿಯೂ ಮತ್ತೊಮ್ಮೆ ಇಬ್ಬರ ನಡುವೆ ಜಟಾಪಟಿ ನಡೆಯಿತು.

ಜಲ ಜೀವನ್ ಹೊರ ಹೋಗಲ್ಲ

ತುಮಕೂರು ಜಿಲ್ಲೆಗೆ ಹೇಮಾವತಿ, ಎತ್ತಿನಹೊಳೆ ಹಾಗೂ ಭದ್ರಾ ಮೇಲ್ಡಂಡೆ ಯೋಜನೆಯಡಿ ನೀರು ಹರಿದು ಬರಲಿದೆ. ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲೆಯ ಅಂತರ್ಜಲ ಅಭಿವೃದ್ಧಿ ಆಗಕಿದೆ. ಜಲ ಜೀವನ್ ಯೋಜನೆಯು ಜಿಲ್ಲೆಯ ಗ್ರಾಮೀಣ ಕುಟುಂಬಗಳಿಗೆ ನೀರು ಪೂರೈಸುವ ಯೋಜನೆ ಆಗಿದೆ. ಜಿಲ್ಲೆಯಿಂದ ಹೊರ ಹೋಗುವುದಿಲ್ಲ ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಖಾಸಗಿ ಶಾಲೆಗೆ ಸೇರಿಸಿ

ಕೇಂದ್ರ ಸರ್ಕಾರವು ಆ. 31ರ ವರೆಗೆ ಶಾಲೆಗಳನ್ನು ತೆರೆಯದಂತೆ ಆದೇಶಿಸಿದೆ. ಸ್ವಯಂ ಪ್ರೇರಿತರಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸಲು ಮುಂದಾದರೆ ಇದಕ್ಕೆ ಅವಕಾಶ ಕಲ್ಪಿಸಿ. ಇದರಿಂದ ಖಾಸಗಿ ಶಾಲೆಯ ಶಿಕ್ಷಕರಿಗೆ ವೇತನ ನೀಡಲು ಸಹಕಾರಿ ಆಗಲಿದೆ. ಆದರೆ ಯಾರಿಗೂ ಒತ್ತಾಯಮಾಡಿ ದಾಖಲು ಮಾಡುವಂತೆ ಪ್ರೇರೇಪಿಸಬಾರದು ಎಂದು ಡಿಡಿಪಿಐಗಳಿಗೆ ಸಚಿವರು ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.