ಮಂಗಳವಾರ, ಅಕ್ಟೋಬರ್ 19, 2021
24 °C

ಕೊಂಡ್ಲಿಕ್ರಾಸ್‌: ಕೆಳಸೇತುವೆ ನಿರ್ಮಾಣಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ನಿಟ್ಟೂರು ಹೋಬಳಿಯ ಕೊಂಡ್ಲಿಕ್ರಾಸ್‌ನಲ್ಲಿ ಕೆಳ ಸೇತುವೆ ನಿರ್ಮಿಸಿಲ್ಲ. ಇದರಿಂದ ಸುತ್ತಲಿನ 35 ಗ್ರಾಮಗಳ ಸಾವಿರಾರು ಜನರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಕೆಳ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ನವಕರ್ನಾಟಕ ಒಕ್ಕೂಟ, ರೈತ ಸಂಘ, ವರ್ತಕರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಯಿತು.

ನವ ಕರ್ನಾಟಕದ ಯುವಶಕ್ತಿ ಸಂಘಟನೆಯ ಅಧ್ಯಕ್ಷ ಕೆ.ಎನ್ ಲಿಂಗೇಗೌಡ ಮಾತನಾಡಿ, ಕೊಂಡ್ಲಿ ಕ್ರಾಸ್ ಸುತ್ತಲಿನ ಗ್ರಾಮಗಳಿಗೆ ಕೇಂದ್ರ ಸ್ಥಾನದಂತಿದೆ. ಇಲ್ಲಿಗೆ ಕೆಳಸೇತುವೆ ಅಗತ್ಯವಿದೆ. ಪ್ರಸ್ತುತ ನಿರ್ಮಿಸಿರುವ ಕೆಳ ಸೇತುವೆ ಕಾಡಿನಲ್ಲಿದ್ದು ಇಲ್ಲಿಂದ 2 ಕಿ.ಮೀ ದೂರ ಇದೆ. ಕೊಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಭಾಗಕ್ಕೆ ಕೆಳಸೇತುವೆ ನಿರ್ಮಿಸಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ದೊಡ್ಡಗುಣಿ ಗ್ರಾಮ ಪಂಚಾಯಿತಿ ಸದಸ್ಯ ರೇಣುಕಾ ಪ್ರಸಾದ್ ಮಾತನಾಡಿ, ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ ತಾಲ್ಲೂಕುಗಳ ಅನೇಕ ಹಳ್ಳಿಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ. ಸದ್ಯ ನಿರ್ಮಿಸಿರುವ ಕೆಳಸೇತುವೆ ಅವೈಜ್ಞಾನಿಕವಾಗಿದೆ. ಅಧಿಕಾರಿಗಳು ಯಾವ ಮಾನದಂಡ ಅನುಸರಿಸಿದ್ದಾರೆ ಎಂದು ತಿಳಿಯುತ್ತಿಲ್ಲ. ಒಂದು ವಾರದಲ್ಲಿ ಇಲ್ಲಿಗೆ ಅಂಡರ್‌ಪಾಸ್‌ ನಿರ್ಮಿಸದಿದ್ದರೆ ಹೋರಾಟ ನಡೆಸಲಾಗುವುದು. ಅಧಿಕಾರಿಗಳು ಪರಿಶೀಲಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ನವಕರ್ನಾಟಕ ಸಂಘಟನೆ ಕಾರ್ಯದರ್ಶಿ ಕಾಳೇಗೌಡ ಮಾತನಾಡಿ, ಈ ಭಾಗದ ಜನರಿಗೆ ಸಾಕಷ್ಟು ಅನ್ಯಾಯವಾಗಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಿದರೆ ಅನುಕೂಲವಾಗುತ್ತದೆ ಎಂದರು.

ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ನಿಟ್ಟೂರು ಉಪತಹಶೀಲ್ದಾರ್ ಶ್ರೀನಿವಾಸ್, ಮೇಲಧಿಕಾರಿಗಳ ಮೂಲಕ ಮನವಿ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ದಿನವೇ ತಲುಪಿಸಲಾಗುವುದು ಎಂದರು.

ಹೆದ್ದಾರಿ ಟೀಮ್ ಎಂಜಿನಿಯರ್ ಸಿದ್ದರಾಮಪ್ಪ, ರೈತ ಸಂಘದ ಜಿಲ್ಲಾ ಯುವ ಘಟಕದ ಪ್ರದಾನ ಕಾರ್ಯದರ್ಶಿ ಜಗದೀಶ್, ರಾಜ್ಯ ಸಂಚಾಲಕ ಆತ್ತಿಕಟ್ಟೆ ಶಂಕರ್, ರೈತ ಸಂಘದ ತಾಲ್ಲೂಕು ಮುಖಂಡ ನರಸಿಂಹಮೂರ್ತಿ, ಗಂಗಣ್ಣ, ದೀಪು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು