ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಹೊಂಡದಲ್ಲಿ ನೆಮ್ಮದಿ ಕಂಡ ರೈತ

27 ಕೊಳವೆ ಬಾವಿ ಕೊರೆಸಿದರೂ ಸಿಗದ ನಿರೀಕ್ಷಿತ ಫಲ
Last Updated 18 ಆಗಸ್ಟ್ 2020, 7:15 IST
ಅಕ್ಷರ ಗಾತ್ರ

ತೋವಿನಕೆರೆ: ತೆಂಗು, ಅಡಿಕೆ ಮರಗಳನ್ನು ಉಳಿಸಿಕೊಳ್ಳಲು 30 ವರ್ಷಗಳಿಂದ 27 ಕೊಳವೆಬಾವಿಗಳನ್ನು ಕೊರೆಸಿದರೂ ನಿರೀಕ್ಷಿತ ಫಲ ಸಿಗಲಿಲ್ಲ. ಅಂತಿಮವಾಗಿ ಮಳೆ ನೀರು ಸಂಗ್ರಹ ಮಾಡಿದ ನಂತರ ರೈತನ ಮುಖದಲ್ಲಿ ಅಲ್ಪ ನಗು ಮೂಡಿದೆ.

ತೋವಿನಕೆರೆ ಪಂಚಾಯಿತಿ ವ್ಯಾಪ್ತಿಯ ದೊಡ್ಡಸಂಜೀವೇಗೌಡನ ಪಾಳ್ಯದ ಸೂರೇನಹಳ್ಳಿ ಶಂಕರಲಿಂಗಪ್ಪ ಅವರು ಇದುವರೆಗೂ 27 ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ! 300 ಅಡಿಯಿಂದ 1200 ಅಡಿಗಳವರೆಗೆ ಕೊರೆಸಿದ್ದಾರೆ. ಕಳೆದ ನವೆಂಬರ್‌ನಿಂದ ಇಲ್ಲಿಯವರೆಗೆ ಐದು ಕೊಳವೆ ಬಾವಿ ಕೊರೆಸಿದ್ದು, ₹ 10 ಲಕ್ಷ ಖರ್ಚು ಮಾಡಿದರೂ ನೀರಿನ ಆತಂಕ ತಪ್ಪಿರಲಿಲ್ಲ.

ತಮಗಿರುವ 20 ಎಕರೆ ಜಮೀನಿನಲ್ಲಿ 2,500 ಅಡಿಕೆ, 600 ತೆಂಗಿನ ಮರಗಳು, 80 ಮಾವಿನ ಮರ ಮತ್ತು 80 ಜಂಬು ನೇರಳೆ ಮರಗಳ ಜತೆ ಹಲಸು, ಸೀಬೆ, ಬಾಳೆ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ. ಶೇಂಗಾ ನಾಟಿ ಮಾಡಿದ್ದಾರೆ.

ಬೆಳೆಗಳನ್ನು ಉಳಿಸಿಕೊಳ್ಳಲು ಕೃಷಿಯಿಂದ ಬಂದ ಹಣವನ್ನು ಕೊಳವೆಬಾವಿ ಕೊರೆಸಲು ಖರ್ಚು ಮಾಡುತ್ತಿದ್ದಾರೆ. ಕೊಳವೆ ಬಾವಿಗಳಲ್ಲಿ ಒಂದು ವರ್ಷ ನೀರು ಬಂದರೆ ಹೆಚ್ಚು. ಕೆಲವು ಕೊಳವೆ ಬಾವಿಗಳಲ್ಲಿ ಬರುತ್ತಿದ್ದ ಅರ್ಧ ಇಂಚು ನೀರನ್ನು ತೊಟ್ಟಿಯಲ್ಲಿ ಸಂಗ್ರಹಿಸಿ ನಂತರ ಹನಿ ನೀರಾವರಿ ಮೂಲಕ ತೆಂಗು, ಅಡಿಕೆಗೆ ಬೀಡುತ್ತಿದ್ದಾರೆ.

ಮೂರು ವರ್ಷದಿಂದ ಕೃಷಿ ಹೊಂಡದತ್ತ ಗಮನ ಹರಿಸಿದ ಅವರಿಗೆ ಉತ್ತಮ ಫಲಿತಾಂಶ ಸಿಗಲಾರಂಭಿಸಿದೆ. ಜಮೀನಿಗೆ ಹೊರಗಡೆಯಿಂದ ಬರಬಹುದಾದ ನೀರಿನ ಜಾಗಗಳನ್ನು ಗುರುತಿಸಿ ಅಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ಮಳೆ ನೀರು ಸಂಗ್ರಹ ಮಾಡಿದ್ದಾರೆ.

ನೈಸರ್ಗಿಕವಾಗಿ ಇದ್ದ ತಗ್ಗಿನ ಜಾಗವನ್ನು ಮತ್ತಷ್ಟು ಆಳ ಮಾಡಿ 22 ಲಕ್ಷ ಲೀಟರ್ ಮಳೆ ನೀರು ಸಂಗ್ರಹ ಆಗುವಂತೆ ಮಾಡಿದ್ದಾರೆ. ನಾಲ್ಕು ಕೃಷಿ ಹೊಂಡಗಳಿಂದ 34 ಲಕ್ಷ ಲೀಟರ್‌ಗೂ ಹೆಚ್ಚು ಮಳೆ ನೀರು ಸಂಗ್ರಹವಾಗುತ್ತದೆ. ಮುಂದಿನ ಬೇಸಿಗೆಯಲ್ಲಿ ಗಿಡಗಳಿಗೆ ಹಾಯಿಸಲು ಸಾಕಾಗುವಷ್ಟು ನೀರು ಸಂಗ್ರಹಗೊಂಡಿದೆ.

***

ಭರವಸೆ ಮೂಡಿದೆ

‘₹50 ಲಕ್ಷಕ್ಕೂ ಹೆಚ್ಚು ಹಣ ಕೊಳವೆಬಾವಿಗಾಗಿ ಖರ್ಚು ಮಾಡಿದ್ದರೂ ನೀರಿನ ಆತಂಕ ದೂರವಾಗಿರಲಿಲ್ಲ. ಕೃಷಿ ಹೊಂಡ ತೆಗೆಸಿದ ನಂತರ ಮುಂದಿನ ಬೇಸಿಗೆಯಲ್ಲಿ ಗಿಡಗಳಿಗೆ ನೀರು ಕೊಡಬಹುದು ಎನ್ನುವ ಭರವಸೆ ಮೂಡಿದೆ’ ಎನ್ನುತ್ತಾರೆ ಶಂಕರ ಲಿಂಗಪ್ಪ ಅವರ ಮಗ ತೇಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT