ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕಾಡುತ್ತಿದೆ ಮಳೆ ಕೊರತೆ

Last Updated 2 ಜುಲೈ 2021, 4:16 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಒಂದಲ್ಲ ಒಂದು ಭಾಗದಲ್ಲಿ ಮಳೆ ಕೊರತೆ ಕಾಡುತ್ತಲೇ ಇದ್ದು, ಅರ್ಧದಷ್ಟು ಪ್ರದೇಶಗಳು ಬರಕ್ಕೆ ತುತ್ತಾಗುವುದು ಸಾಮಾನ್ಯವಾಗಿದೆ. ವರುಣನ ಕಣ್ಣಾಮುಚ್ಚಾಲೆಯ ನಡುವೆ ಮೇ ತಿಂಗಳಲ್ಲಿ 7 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೆ, ಜೂನ್ ತಿಂಗಳಲ್ಲಿ ಮೂರು ತಾಲ್ಲೂಕುಗಳಲ್ಲಿ ಸರಾಸರಿಗಿಂತ ಕಡಿಮೆ ಮಳೆ ಬಿದ್ದಿದೆ.

ತಿಪಟೂರು, ಮಧುಗಿರಿ, ಕೊರಟಗೆರೆ ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ. ತಿಪಟೂರು ತಾಲ್ಲೂಕು ತೀವ್ರ ಬರಕ್ಕೆ ಸಿಲುಕಿದ್ದು, ರೈತರಿಗೆ ಆಸರೆಯಾಗಿದ್ದ ತೆಂಗಿನ ಮರಗಳು ಒಣಗುತ್ತಿವೆ. ಮಧುಗಿರಿ, ಕೊರಟಗೆರೆ ಭಾಗದಲ್ಲಿ ಈ ವೇಳೆಗಾಗಲೇ ಶೇಂಗಾ, ತೊಗರಿ, ಇತರೆ ದ್ವಿದಳ ಧಾನ್ಯಗಳ ಬಿತ್ತನೆಯಾಗಬೇಕಿತ್ತು. ವರುಣನ ಕೃಪೆ ಇಲ್ಲದೆ ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ. ಚಿಕ್ಕನಾಯಕನಹಳ್ಳಿ, ಹುಳಿಯಾರು, ತುರುವೇಕೆರೆ,
ಕುಣಿಗಲ್, ತಿಪಟೂರು ಭಾಗದಲ್ಲಿ ಹೆಸರು,
ಎಳ್ಳು, ಉದ್ದು ಬೆಳೆ ಒಣಗಲಾರಂಭಿಸಿದೆ.

ತಿಪಟೂರು ತಾಲ್ಲೂಕಿನಲ್ಲಿ ಮೇ ತಿಂಗಳಲ್ಲಿ 102 ಮಿ.ಮೀ ಮಳೆಯಾಗಬೇಕಿದ್ದು, ಕೇವಲ 69.5 ಮಿ.ಮೀ ಬಿದ್ದಿತ್ತು. ಕಳೆದ ವರ್ಷದ ಇದೇ ಸಮಯದಲ್ಲಿ 93.9 ಮಿ.ಮೀ ಮಳೆಯಾಗಿತ್ತು. ಜೂನ್ ತಿಂಗಳಲ್ಲಿ 58 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, 55 ಮಿ.ಮೀ ಸುರಿದಿದೆ. ಕಳೆದ ವರ್ಷದ ಇದೇ ಸಮಯದಲ್ಲಿ ಅತಿ ಹೆಚ್ಚು 146.4 ಮಿ.ಮೀ ಬಿದ್ದಿತ್ತು.

ಮಧುಗಿರಿ ತಾಲ್ಲೂಕಿನಲ್ಲಿ ಮೇನಲ್ಲಿ 84 ಮಿ.ಮೀ ವಾಡಿಕೆ ಮಳೆಗೆ 84.5 ಮಿ.ಮೀ ಮಳೆಯಾಗಿದ್ದು, ಸ್ವಲ್ಪ ಮಟ್ಟಿಗೆ ಸಮಾಧಾನ ಮೂಡಿಸಿತ್ತು. ಜೂನ್‌ನಲ್ಲಿ 59 ಮಿ.ಮೀ ಬರಬೇಕಿದ್ದು, 52 ಮಿ.ಮೀ ಸುರಿದಿದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ 99.3 ಮಿ.ಮೀ ಬಿದ್ದಿತ್ತು. ಈ ವರ್ಷ ವಾಡಿಕೆಗೆ ಸಮೀಪ ಬಂದಿದ್ದರೂ, ಒಂದೆರಡು ಸಲ ಜೋರಾಗಿ ಸುರಿದಿದೆ. ಉಳಿದ 20 ದಿನಗಳಿಗೂ ಹೆಚ್ಚು ಸಮಯ ಒಣಹವೆ ಕಂಡುಬಂದಿತ್ತು. ಒಮ್ಮೆಲೆ ಮಳೆಯಾಗಿದ್ದರಿಂದ ಬಿತ್ತನೆ ಕೈಗೊಳ್ಳಲು ನೆರವಾಗಿಲ್ಲ. ಹಾಗಾಗಿ ತಾಲ್ಲೂಕಿನಲ್ಲಿ ಶೇ 30ರಷ್ಟು ಪ್ರದೇಶದಲ್ಲೂ ಶೇಂಗಾ ಬಿತ್ತನೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಇದೇ ವಾತಾವರಣ ಇದ್ದರೆ ಶೇಂಗಾ ಹಾಗೂ ಅಡುಗೆ ಎಣ್ಣೆ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ.

ಕೊರಟಗೆರೆ ತಾಲ್ಲೂಕಿನಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಮೇ ತಿಂಗಳಲ್ಲಿ 93 ಮಿ.ಮೀ ವಾಡಿಕೆ ಮಳೆಗೆ ಬದಲಾಗಿ 76 ಮಿ.ಮೀ ಸುರಿದಿದೆ. ಜೂನ್‌ನಲ್ಲಿ 68 ಮಿ.ಮೀ ಬರಬೇಕಿದ್ದು, 57 ಮಿ.ಮೀ ಬಂದಿದೆ. ಕಳೆದ ವರ್ಷದ ಇದೇ ಸಮಯದಲ್ಲಿ 66.5 ಮಿ.ಮೀ ಮಳೆಯಾಗಿತ್ತು. ಒಂದೆರಡು ಬಾರಿ ಜೋರು ಮಳೆಯಾಗಿದ್ದು ಬಿಟ್ಟರೆ ನಂತರ ಬಿಸಿಲಿನ ವಾತಾವರಣ
ಕಂಡುಬಂದಿದೆ. ಬಿತ್ತನೆಗೆ ಮಳೆ ನೆರವಾಗಿಲ್ಲ.

ಮೇನಲ್ಲಿ ತುಮಕೂರು, ಗುಬ್ಬಿ, ಕುಣಿಗಲ್, ತುರುವೇಕೆರೆ, ಶಿರಾ ತಾಲ್ಲೂಕಿನಲ್ಲಿ ಅಲ್ಪಸ್ವಲ್ಪ ಹಾಗೂ ಕೆಲವು ಭಾಗದಲ್ಲಿ ಮಾತ್ರ ಮಳೆಯಾಗಿತ್ತು. ಈ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಶೇ 75ರಷ್ಟು ಮಳೆ ಪ್ರಮಾಣ ಕಡಿಮೆಯಾಗಿತ್ತು. ಜೂನ್‌ನಲ್ಲಿ ವಾಡಿಕೆಗಿಂತ ಶೇ 50ರಷ್ಟು ಹೆಚ್ಚು ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿದ್ದವು. ಕಳೆದ ಕೆಲ ದಿನಗಳಿಂದ ಈಭಾಗದಲ್ಲೂ ಮಳೆ ಕೊರತೆಯಾಗಿದ್ದು, ಪೂರ್ವ ಮುಂಗಾರಿನಲ್ಲಿ ಬಿತ್ತನೆಯಾಗಿರುವ ಬೆಳೆಗಳು ಒಣಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT